ಸಿಗರೇಟ್‌,ಬೀಡಿ ಮಾರಾಟ ತಡೆಗೆ ಕ್ರಮ: ಮಕ್ಕಳ ಗ್ರಾಮಸಭೆಯಲ್ಲಿ ಪೊಲೀಸ್‌ ಮಾಹಿತಿ

ಹೆಜಮಾಡಿ ಗ್ರಾ. ಪಂ.: ಮಕ್ಕಳ ಹಕ್ಕುಗಳ, ಮಹಿಳೆಯರ, ಕಿಶೋರಿಯರ ವಿಶೇಷ ಗ್ರಾಮಸಭೆ

Team Udayavani, Nov 21, 2019, 4:59 AM IST

ಪಡುಬಿದ್ರಿ: ಶಾಲಾ ವಠಾರದಿಂದ 100ಮೀಟರ್‌ ಒಳಗಡೆಯಿದ್ದು ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಸಿಗರೇಟ್‌, ಬೀಡಿ, ಪಾನ್‌ ಪರಾಗ್‌ ಮತ್ತಿತರ ತಂಬಾಕು ಉತ್ಪನ್ನಗಳನ್ನು ಮಾರುವ ಅಂಗಡಿಗಳನ್ನು ಸ್ಥಳಾಂತರಿಸಲು ಪಂಚಾಯತ್‌ನೊಂದಿಗೆ ವ್ಯವಹರಿಸಲಾಗುವುದು. ಅಂತಹ ಅಂಗಡಿಗಳಲ್ಲಿ ಬೀಡಿ ಸಿಗರೇಟ್‌ ಮುಂತಾದವುಗಳನ್ನು ಮಾರದಂತೆ ತಡೆಯಲು ತಾನು ತನ್ನ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣಾ ಮಹಿಳಾ ಪೇದೆ ಅನಿತಾ ಹೇಳಿದರು.

ಹೆಜಮಾಡಿ ಗ್ರಾ. ಪಂ. ಆಯೋಜಿಸಿದ 2019-20ನೇ ಸಾಲಿನ ಮಕ್ಕಳ ಹಕ್ಕುಗಳ, ಮಹಿಳೆಯರ ಮತ್ತು ಕಿಶೋರಿಯರ ವಿಶೇಷ ಗ್ರಾಮಸಭೆಯಲ್ಲಿ ಸರಕಾರಿ ಪ. ಪೂ. ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳಿಂದ ಹರಿದು ಬಂದ ಪ್ರಶ್ನೆಗೆ ಡಬುÉÂಪಿಸಿ ಅನಿತಾ ಉತ್ತರಿಸಿ ಮಾತನಾಡಿದರು.

ಹೆಜಮಾಡಿಯಲ್ಲಿ ಡಿ. 1ರಿಂದ ಕಟ್ಟುನಿಟ್ಟಿನ ಪ್ಲಾಸ್ಟಿಕ್‌ ನಿಷೇಧವನ್ನು ಜಾರಿಗೊಳಿಸಲಾಗುತ್ತಿದ್ದು ಇದಕ್ಕೆ ಗ್ರಾಮದ ವ್ಯಾಪ್ತಿಯ ಮಕ್ಕಳು ಹೆಚ್ಚಿನ ಸಹಕಾರವೀಯಬೇಕೆಂದು ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಮನವಿ ಮಾಡಿದರು. ಅದಕ್ಕೆ ವಿದ್ಯಾರ್ಥಿಗಳು ಹರ್ಷೋದ್ಗಾರದೊಂದಿಗೆ ಒಕ್ಕೊರಲ ಬೆಂಬಲವನ್ನೂ ಸಭೆಯಲ್ಲಿ ಸೂಚಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಗೀತಾ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ, ರಕ್ತಹೀನತೆ, ನಿದ್ರಾಹೀನತೆ ಬಗೆಗೆ ಎಚ್ಚರ ವಹಿಸಬೇಕೆಂದರು. ಅಂಗನವಾಡಿ ಮೇಲ್ವಿಚಾರಕಿ ಶಕುಂತಳಾ, ಮಕ್ಕಳ ಸಹಾಯವಾಣಿಯ ಕಸ್ತೂರಿ, ಪ್ರಾಧ್ಯಾಪಕಿ ಪ್ರಮೀಳಾ ವಾಝ್ ಮಕ್ಕಳ ಹಕ್ಕಿನ, ವಿಕಾಸ ಮತ್ತು ರಕ್ಷಣೆ ಕುರಿತಾದ ವಿವಿಧ‌ ಮಜಲುಗಳ ಬಗೆಗೆ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಉಪಸ್ಥಿತರಿದ್ದ ಸಭೆಯ ಅಧ್ಯಕ್ಷತೆಯನ್ನು ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌ ವಹಿಸಿದ್ದರು.

ಹೆಜಮಾಡಿ ತಾ. ಪಂ. ಸದಸ್ಯೆ ರೇಣುಕಾ ಪುತ್ರನ್‌, ಶಾಲಾ ಮುಖ್ಯ ಶಿಕ್ಷಕಿ ಲತಾ, ಗ್ರಾ. ಪಂ. ಸದಸ್ಯರು, ವಿವಿಧ ಶಾಲಾ ನಾಯಕ, ನಾಯಕಿಯರಾದ ದೀಪ್ತಿ, ಹರ್ಷ, ಶಮನ್‌, ಪ್ರಾಪ್ತಿ, ಇಸ್ಮಾ ಮತ್ತಿತರರು ಉಪಸ್ಥಿತರಿದ್ದರು. ಅಲ್‌ಅಝ್ಹರ್‌ ಶಾಲಾ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮೀಪವಿರುವ ಎಸ್‌ಎಲ್‌ಆರ್‌ಎಂ ಘಟಕದಿಂದ ವಾಸನೆ ಬರುತ್ತಿರುವುದನ್ನು ಪ್ರಶ್ನಿಸಿದಾಗ ಪಂಚಾಯತ್‌ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಅದನ್ನು ವಿರೋಧಿಸಿದರು. ಉಡುಪಿ ಜಿಲ್ಲೆಯಲ್ಲಿ ತಮ್ಮ ಘಟಕವು ಅಗ್ರಮಾನ್ಯವಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪಂಚಾಯತ್‌ಗೆ ತಿಂಗಳೊಂದರ 2ಲಕ್ಷ ರೂ. ಆದಾಯವೂ ಅದರಿಂದ ಬರುತ್ತಿರುವುದಾಗಿಯೂ, ಮೇಲಾಗಿ ಪಂಚಾಯತ್‌ ಕಟ್ಟಡವೂ ಈ ಘಟಕದ ಸಮೀಪವೇ ಇದ್ದು ತಮಗಾವುದೇ ದುಷ್ಪರಿಣಾಮಗಳಿಲ್ಲವೆಂದರು. ಸರಕಾರಿ ಪ.ಪೂ. ಶಾಲೆಯ ಸಮೀಪವೇ ರಸ್ತೆ ಬದಿ ತ್ಯಾಜ್ಯವನ್ನು ಎಸೆಯುತ್ತಿರುವ ಕುರಿತಾಗಿ ಬಂದಿದ್ದ ಪ್ರಶ್ನೆಗೆ ಈ ಕುರಿತಾದ ಘಟನೆಯೊಂದನ್ನು ಆಧರಿಸಿ ಹಿರಿಯ ಗ್ರಾಮಸ್ಥರಲ್ಲೇ ಈ ಕುರಿತಾದ ಜಾಗೃತಿಯೂ ಅಗತ್ಯವೆಂಬುದಾಗಿ ಉತ್ತರಿಸಲಾಯಿತು.

ಪಿಡಿಒ ಮಮತಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು.

ದೌರ್ಜನ್ಯಬಚ್ಚಿಟ್ಟುಕೊಳ್ಳಬಾರದು
ಸಭೆಯಲ್ಲಿ ಮಕ್ಕಳ ರಕ್ಷಣೆಯ ಹಕ್ಕನ್ನು ಪ್ರತಿಪಾದಿಸಿದ ಮಹಿಳಾ ಪೇದೆ ಅನಿತಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಮೇಲಾಗುವ ಯಾವುದೇ ರೀತಿಯ ದೌರ್ಜನ್ಯವನ್ನು ಬಚ್ಚಿಟ್ಟುಕೊಳ್ಳಬಾರದು. ಲೈಂಗಿಕ, ಮಾನಸಿಕ ದೌರ್ಜನ್ಯಗಳೆಲ್ಲವೂ ಶಿಕ್ಷಾರ್ಹ ಅಪರಾಧವಾಗಿದ್ದು ಪೋಷಕರ ಗಮನಕ್ಕೆ ತಂದು ಪೊಲೀಸ್‌ ಇಲಾಖೆಗೆ ನೇರ ದೂರು ನೀಡಿ. ಪ್ರೀತಿಯ ಆಮಿಷಗಳಿಗೆ ಬಲಿಯಾಗಬೇಡಿರಿ. ಅಪರಿಚಿತರು ನೀಡುವ ಮಿಠಾಯಿ ಆಮಿಷಗಳಿಗೆ ಬಲಿಯಾಗದಿರಿ. ಅಪರಿಚಿತರಿಂದ ದಾರಿ ಕೇಳುವ ನೆಪ‌ದಲ್ಲಿ ಬಂಗಾರದ ಆಭರಣಗಳನ್ನು ಕಿತ್ತೂಯ್ಯುವ ಬಗೆಗೂ ಜಾಗೃತೆ ವಹಿಸಿ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ