ಪ್ರತಿಕೂಲ ಹವಾಮಾನ: ಮೀನುಗಾರಿಕೆಗೆ ಅಡ್ಡಿ

Team Udayavani, Oct 30, 2019, 5:41 AM IST

ಗಂಗೊಳ್ಳಿ: ಹವಾಮಾನ ವೈಪ ರೀತ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಮೀನುಗಾರರು ಸಮುದ್ರಕ್ಕೆ ಇಳಿಯದ ಕಾರಣ ಮಾರುಕಟ್ಟೆಗಳಲ್ಲಿಯೂ ಮೀನಿಗೆ ಬರ ಬಂದಂತಾಗಿದೆ. ಬಂಗುಡೆ, ಬೈಗೆ, ಅಂಜಲ್‌ಗೆ ಭಾರೀ ಬೇಡಿಕೆಯಿದ್ದರೂ, ಬೇಕಾದ ಮೀನುಗಳು ಇಲ್ಲದ ಕಾರಣ ಇರುವಂತಹ ಮೀನಿನ ದರ ಗಗನಕ್ಕೇರಿದೆ.

ವಾಯುಭಾರ ಕುಸಿತ, ಕ್ಯಾರ್‌ ಚಂಡಮಾರುತ, ಮತ್ಸéಕ್ಷಾಮ ಸಹಿತ ಇನ್ನಿತರ ಹಲವು ಕಾರಣಗಳಿಂದಾಗಿ ಎಲ್ಲ ಕಡೆಗಳಲ್ಲಿ ಕಳೆದ 1 ತಿಂಗಳಿನಿಂದ ಸರಿಯಾಗಿ ಮೀನುಗಾರಿಕೆಯೇ ನಡೆದಿಲ್ಲ. ಇದರಿಂದ ಮಾರುಕಟ್ಟೆಗಳಲ್ಲಿ ಮೀನಿನ ಕೊರತೆ ಎದುರಾಗುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಹೇಗಿದೆ ಮೀನಿನ ದರ?
ಎಲ್ಲ ಮೀನಿಗೂ ಬರ ಬಂದಿದ್ದು, ಸಿಗುವಂತಹ ಕೆಲವೇ ಕೆಲ ಮೀನು ಗಳಿಗೂ ಬಂಗಾರದ ಬೆಲೆ ಬಂದಿದೆ. 1 ಕೆ.ಜಿ. ಬೂತಾಯಿ (ಬೈಗೆ)ಗೆ ಸುಮಾರು 200 ರೂ. ಇದ್ದರೆ, ಸಿಗಡಿಗೆ 350ರಿಂದ 400 ರೂ. ವರೆಗೆ ಇದ್ದರೆ, 1 ಕೆ.ಜಿ. ಅಂಜಲ್‌ಗೆ 700ರಿಂದ 750 ರೂ., ಇನ್ನು 1 ಕೆ.ಜಿ. ಪಾಂಪ್ಲೆಟ್‌ಗೆ 750 ರೂ. ವರೆಗೂ ಮಾರಾಟವಾಗುತ್ತಿದೆ ಎನ್ನುವುದಾಗಿ ಕುಂದಾಪುರದ ಮೀನಿನ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಮೀನುಗಾರಿಕೆಗೆ ಹೊಡೆತ
ಇದು ಉತ್ತಮ ಮೀನುಗಾರಿಕೆ ನಡೆಯುವ ಸೀಸನ್‌ ಆಗಿದ್ದರೂ, ಕಳೆದ ಹಲವು ದಿನಗಳಿಂದ ಸರಿಯಾದ ಮೀನುಗಾರಿಕೆಯೇ ನಡೆಯದ ಕಾರಣ, ಮೀನುಗಾರಿಕಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ. ಇದನ್ನೇ ನೆಚ್ಚಿಕೊಂಡಿರುವ ಸಾವಿರಾರು ಮಂದಿಗೆ ಈ ಬಾರಿಯ ದೀಪಾವಳಿ ಅಷ್ಟೇನೂ ಖುಷಿ ತಂದಂತಿಲ್ಲ. ಇಷ್ಟು ವರ್ಷಗಳಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದ ಮೀನುಗಾರಿಕೆ ಯಾವ ವರ್ಷವೂ ನಡೆದಿಲ್ಲ ಎನ್ನುವುದು ಉಪ್ಪುಂದದ ಮೀನುಗಾರರೊಬ್ಬರ ಅಭಿಪ್ರಾಯ.

ಖಾದ್ಯವೂ ದುಬಾರಿ
ಮೀನಿನ ಬರದ ಬಿಸಿ, ಹೊಟೇಲ್‌ ಉದ್ಯಮಕ್ಕೂ ತಟ್ಟಿದ್ದು, ಮೀನಿನ ಕೊರತೆಯಿಂದಾಗಿ, ಸರ್ವೇಸಾಮಾನ್ಯವಾಗಿ ಮೀನಿನ ದರ ಏರಿಕೆಯಾಗಿದೆ. ಇದರಿಂದ ಹೋಟೆಲ್‌ಗ‌ಳಲ್ಲಿಯೂ ಕೂಡ ಮೀನಿನ ಖಾದ್ಯದ ಬೆಲೆಯಲ್ಲಿಯೂ ತುಸು ಏರಿಕೆಯಾಗಿದೆ.

ಸುಧಾರಿಸುವ ನಿರೀಕ್ಷೆ
ಇಷ್ಟು ವರ್ಷಗಳಲ್ಲಿ ಈ ಬಾರಿಯೇ ಇಷ್ಟೊಂದು ಕಡಿಮೆ ಪ್ರಮಾಣದ ಮೀನುಗಾರಿಕೆ ನಡೆದಿದೆ. ಯಾವುದೇ ಬೋಟು, ದೋಣಿಗಳಿಗೂ ಹೆಚ್ಚಿನ ಪ್ರಮಾಣದ ಆದಾಯ ಆಗಿಲ್ಲ. ಈ ವರೆಗೆ ಪ್ರತಿಕೂಲ ಹವಾಮಾನ, ಮತ್ಸÂಕ್ಷಾಮ ಸಹಿತ ಇನ್ನಿತರ ಕಾರಣದಿಂದಾಗಿ ಮೀನುಗಾರಿಕೆಗೆ ಹೊಡೆತ ಬಿದ್ದಿದ್ದು, ದೀಪಾವಳಿ ಬಳಿಕವಾದರೂ ಇದು ಸುಧಾರಿಸಬಹುದು ಎನ್ನುವುದು ಮೀನುಗಾರರೆಲ್ಲರ ನಿರೀಕ್ಷೆಯಾಗಿದೆ.
– ರವಿಶಂಕರ್‌ ಖಾರ್ವಿ, ಗಂಗೊಳ್ಳಿ, ಮೀನುಗಾರರು

4 ಬಂಗುಡೆಗೆ 200 ರೂ.
ಸೋಮವಾರ ಮಾರುಕಟ್ಟೆಗಳಲ್ಲಿ 4 ಬಂಗುಡೆಗೆ 200 ರೂ. ಇತ್ತಂತೆ. ಅಂದರೆ ಇದು ಅರ್ಧ ಕೆ.ಜಿ.ಯಷ್ಟಿದ್ದರೆ, 1 ಕೆ.ಜಿ. ಬಂಗುಡೆಗೆ ಅಂದಾಜು 400 ರೂ. ಇದ್ದರಿಬಹುದು. ಮಂಗಳವಾರ ಇದು 1 ಕೆ.ಜಿ. ಬಂಗುಡೆಗೆ 300 ರಿಂದ 350 ರೂ. ವರೆಗೆ ಇದೆ.

– ಪ್ರಶಾಂತ್‌ ಪಾದೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ