ಸಹೋದರತ್ವದಿಂದ  ಸೌಹಾರ್ದ

Team Udayavani, Dec 21, 2018, 10:05 AM IST

ಉಡುಪಿ: ಸಹೋದರತ್ವದಿಂದ ಸಹ ಬಾಳ್ವೆ, ಸೌಹಾರ್ದ ಸಾಧ್ಯ ಎಂದು ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೈ|ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದ್ದಾರೆ.

ಗುರುವಾರ ಉಡುಪಿ ಶೋಕಮಾತಾ ಇಗರ್ಜಿಯ ವಠಾರದಲ್ಲಿ ಜರಗಿದ ಸರ್ವಧರ್ಮ ಕ್ರಿಸ್ಮಸ್‌ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಪರರನ್ನು ದ್ವೇಷಿಂಸಲು, ಹಿಂಸಿಸಲು, ಅನ್ಯಾಯ ಮಾಡಲು ಯಾವ ಧರ್ಮವೂ ಹೇಳಿಲ್ಲ. ಧರ್ಮದ ಸಾರ ತಿಳಿದಾಗ ಸತ್ಯದ ಅರಿವಾಗುತ್ತದೆ. ನಾವು ನಮ್ಮ ನಮ್ಮ ಧರ್ಮಗಳನ್ನು ಸರಿಯಾಗಿ ತಿಳಿದು ಪಾಲಿಸುವ ಜತೆಗೆ ಇತರರ ಧರ್ಮವನ್ನು ಗೌರವಿಸಿದಾಗ ಸೌಹಾರ್ದ ನೆಲೆಸುತ್ತದೆ ಎಂದು ಅವರು ಹೇಳಿದರು.

ಶುಭಾಶಂಸನೆಗೈದ ನಿವೃತ್ತ ಪ್ರಾಂಶುಪಾಲ ಪ್ರೊ| ಪಿ. ಶ್ರೀಪತಿ ತಂತ್ರಿ, ಆಳವಾಗಿ ಅಧ್ಯಯನ ಮಾಡಿದಾಗ ಪ್ರತಿಯೊಂದು ಧರ್ಮ ಕೂಡ ಹುಟ್ಟಿದ್ದು ಎಲ್ಲರ ಕಲ್ಯಾಣಕ್ಕೆ ಎಂಬುದು ಅರ್ಥವಾಗುತ್ತದೆ ಎಂದರು. ಇಗರ್ಜಿಯ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೋನ್ಸಾ, ಮಲ್ಪೆ ಯುಬಿಎಂ ಎಬಿಜರ್‌ ಚರ್ಚ್‌ನ ಪಾಸ್ಟರ್‌ ವಂ| ಡೇವಿಡ್‌ ನಿರ್ಮಾಣಿಕ್‌, ಡಾ| ಮಹಮ್ಮದ್‌ ರಫೀಕ್‌ ಹೂಡೆ, ಲಯನ್ಸ್‌  ಜಿಲ್ಲಾ ಗವರ್ನರ್‌ ಡಾ| ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಸೌಹಾರ್ದ ಸಮಿತಿ ಸಂಚಾಲಕ ಮೈಕಲ್‌ ಡಿ’ಸೋಜಾ ವಂದಿಸಿದರು. ಅಲೊನ್ಸ್‌ ಡಿ’ಕೋಸ್ಟಾ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ