ಪಶ್ಚಿಮ ಘಟ್ಟದ ಮಡಿಲಲ್ಲಿ ದುರುಳರ ಅಟ್ಟಹಾಸ

ಕಳ್ಳರ ಪಾಲಾಗುತ್ತಿವೆ ಬೃಹತ್‌ ಮರಗಳು ; ಮೋಜು ಮಸ್ತಿಯಿಂದ ಪರಿಸರ ನಾಶ

Team Udayavani, Sep 10, 2019, 5:15 AM IST

ಸುಬ್ರಹ್ಮಣ್ಯ: ಜೀವಸಂಕುಲದ ವೈವಿಧ್ಯಕ್ಕೆ ಹೆಸರಾಗಿರುವ ಪಶ್ಚಿಮ ಘಟ್ಟ ಪರಿಸರದಲ್ಲಿ ದುರುಳರ ಅಟ್ಟಹಾಸ ಮಿತಿಮೀರಿದೆ. ಬೆಲೆಬಾಳುವ ಬೃಹತ್‌ ಮರಗಳು ಕಾಡುಗಳ್ಳರ ಪಾಲಾಗುತ್ತಿದ್ದರೆ, ಅಕ್ರಮವಾಗಿ ಅರಣ್ಯಕ್ಕೆ ನುಗ್ಗಿ ಮೋಜು ಮಸ್ತಿ ನಡೆಸುವವರಿಂದ ಪರಿಸರ ಹಾಳಾಗುತ್ತಿದೆ.

ಜನವಸತಿ ಪ್ರದೇಶಗಳ ಅನುಕೂಲಕ್ಕಾಗಿ ರಸ್ತೆ ನಿರ್ಮಾಣಕ್ಕೆ ತಡೆಯುವ ಅರಣ್ಯ ಇಲಾಖೆಯು ಕಾಡುಗಳ್ಳರು ಅರಣ್ಯದೊಳಗೇ ರಸ್ತೆ ನಿರ್ಮಿಸಿ ಮರಗಳನ್ನು ಹೊತ್ತೂಯ್ದರೂ ಗೊತ್ತೇ ಇಲ್ಲದಂತೆ ಇರುವುದು ಸಂಶಯಕ್ಕೆಡೆ ಮಾಡಿದೆ. ಎರಡು ದಿನಗಳ ಹಿಂದಷ್ಟೇ ಸುಬ್ರಹ್ಮಣ್ಯ ಅರಣ್ಯ ವಿಭಾಗದ ಭಾಗಿಮಲೆ ಮೀಸಲು ಅರಣ್ಯದಿಂದ ಬೃಹತ್‌ ಗಾತ್ರದ ಹೆಬ್ಬಲಸಿನ ಮರಗಳು ಕಳವಾಗಿರುವುದು ಇದಕ್ಕೆ ಸಾಕ್ಷಿ.

ಸಿಬಂದಿ ಶಾಮೀಲು?
ಪಶ್ಚಿಮ ಘಟ್ಟದ ಕಾಡುಗಳಿಂದ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುವ ವ್ಯವಸ್ಥಿತ ಜಾಲವೇ ಇದೆ. ಇದಕ್ಕಾಗಿ ಕಳ್ಳರು ರಸ್ತೆಗಳನ್ನು ರಚಿಸಿಕೊಂಡಿದ್ದಾರೆ. ಸೆ. 3ರಂದು ಭಾಗಿಮಲೆಯಲ್ಲಿ ಬೃಹತ್‌ ಮರಗಳ ಕಳ್ಳತನವಾಗಿದ್ದು, ಇದನ್ನರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರಿಗೆ ಮತ್ತು ಘಟನೆ ಕುರಿತು ಚಿತ್ರೀಕರಣಕ್ಕೆ ಹೊರಟ ಮಾಧ್ಯಮದವರಿಗೆ ಬಿಳಿನೆಲೆ ವಿಭಾಗದ ಅರಣ್ಯ ಕಾವಲು ಸಿಬಂದಿ ತಡೆ ಒಡ್ಡಿ ಬೆದರಿಸಿರುವುದು ಕೃತ್ಯದಲ್ಲಿ ಸಿಬಂದಿಯೂ ಶಾಮೀಲಾಗಿದ್ದಾರೆಯೇ ಎನ್ನುವ ಸಂದೇಹ ಮೂಡಿಸಿದೆ.

ಮದ್ಯದ ಬಾಟಲಿ,ತ್ಯಾಜ್ಯ ರಾಶಿ
ಪಶ್ಚಿಮ ಘಟ್ಟದ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬಿಸಿಲೆ ಘಾಟಿ ಪ್ರದೇಶದ‌ಲ್ಲಿ ಅಕ್ರಮವಾಗಿ ಅರಣ್ಯಕ್ಕೆ ನುಗ್ಗಿ ಸಹಿತ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ. ಘಾಟಿ ಪ್ರದೇಶದ ಸ್ವತ್ಛತೆಗೆ ತೆರಳಿದ್ದ ಯುವ ಬ್ರಿಗೇಡ್‌ ಮತ್ತು ಕೆಲವು ಪರಿಸರ ಪ್ರೇಮಿ ಸಂಘಟನೆಗಳ ಸದಸ್ಯರು ಟನ್‌ಗಟ್ಟಲೆ ಮದ್ಯದ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯವನ್ನು ತೆರವುಗೊಳಿಸಿದ್ದರು.

ಕೋಟ್ಯಂತರ ರೂ.ವ್ಯಯ
ಅರಣ್ಯ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋಟ್ಯಂತರ ರೂ. ವ್ಯಯಿಸುತ್ತಿವೆ. ಅರಣ್ಯ ಕಾವಲಿಗೆಂದು ಅಧಿಕಾರಿಗಳು, ಸಿಬಂದಿ ಇದ್ದಾರೆ. ಪರಿಸರ ಪ್ರೇಮಿಗಳು ಅರಣ್ಯ ಸಂಪತ್ತು ಉಳಿಸಲು ಚಳವಳಿ, ಜಾಗೃತಿ ಆಂದೋಲನಗಳನ್ನು ನಡೆಸುತ್ತಿದ್ದಾರೆ. ಆದರೆ ಅರಣ್ಯ ಹನನ ನಿತ್ಯನಿರಂತರವಾಗಿದೆ.

ನಕ್ಸಲರ ಭಯ
ಅರಣ್ಯ ಸಿಬಂದಿಯಲ್ಲಿ ಆಧುನಿಕ ಶಸ್ತ್ರಾಸ್ತಗಳಿಲ್ಲ. ಆಗಾಗ ಕಾಣಿಸಿಕೊಳ್ಳುವ ನಕ್ಸಲರ ಭಯದಿಂದ ಸಿಬಂದಿ ಕಾಡಿಗಿಳಿಯಲು ಹೆದರುತ್ತಾರೆ. ನಕ್ಸಲರ ಸೋಗಿನಲ್ಲಿ ದಂಧೆ ನಡೆಸುವವರೂ ಹೆಚ್ಚಿದ್ದಾರೆ.

450 ಪ್ರಭೇದಗಳು
ಸುಮಾರು 1 ಲಕ್ಷ ಹೆಕ್ಟೇರ್‌ ಭೌಗೋಳಿಕ ವಿಸ್ತಿರ್ಣವುಳ್ಳ ಸುಬ್ರಹ್ಮಣ್ಯ ಅರಣ್ಯ ವಲಯವು ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ. 450ಕ್ಕೂ ಅಧಿ ಕ ಸಸ್ಯ ಸಂಕುಲ, ಔಷ ಧೀಯ ಸಸ್ಯಗಳು, ಪ್ರಾಣಿ-ಪಕ್ಷಿ ಸಂಕುಲ, ಅಳಿವಿನ ಅಂಚಿನಲ್ಲಿರುವ ಅಪೂರ್ವ ಸಸ್ಯಗಳು ಇಲ್ಲಿವೆ. ಇವನ್ನೆಲ್ಲ ಕಾಯಬೇಕಿರುವ ಅರಣ್ಯ ಇಲಾಖೆಯ ಶೇ. 60ರಷ್ಟು ಹುದ್ದೆಗಳಲ್ಲಿ ಸಿಬಂದಿಯೇ ಇಲ್ಲ!

ಸಿಬಂದಿ ಕೊರತೆ ಹಿಂದಿಗಿಂತ ಈಗ ಸುಧಾರಿಸಿದೆ. ರಾತ್ರಿ ಗಸ್ತಿಗೆ ಸಿಬಂದಿಯನ್ನು ನಿಯೋಜಿಸುತ್ತಿದ್ದೇವೆ. ಇಷ್ಟಿದ್ದರೂ ದಂಧೆಕೋರರು ಕಣ್ತಪ್ಪಿಸಿ ಮರಕಳ್ಳತನ ನಡೆಸುತ್ತಿದ್ದಾರೆ. ಹತೋಟಿಗೆ ಶ್ರಮಿಸುತ್ತಿದ್ದೇವೆ.
– ಡಾ| ಕರಿಕಲನ್‌ ವಿ.
ಮಂಗಳೂರು ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ

ಬಾಲಕೃಷ್ಣ ಭೀಮಗುಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ