ರಸ್ತೆ ಇಕ್ಕೆಲದಲ್ಲಿ ಆಳೆತ್ತರಕ್ಕೆ ಬೆಳೆದ ಹುಲ್ಲು: ಅಪಾಯದ ಭೀತಿ

ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿ

Team Udayavani, Nov 12, 2019, 5:47 AM IST

ಶಿರ್ವ: ಮೂಡುಬೆಳ್ಳೆಯ ನಾಲ್ಕು ಬೀದಿಯಿಂದ ಪಿಲಾರುಖಾನದವರೆಗೆ ಶಿರ್ವ ಮಂಚಕಲ್‌ ಪೇಟೆಯ ಮೂಲಕ ಹಾದು ಹೋಗುವ ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿ, ಶಂಕರಪುರ-ಬಂಟಕಲ್‌- ಶಿರ್ವ ರಸ್ತೆ ಮತ್ತು ಕಾಪು -ಶಿರ್ವ ರಸ್ತೆ ಬದಿಯಲ್ಲಿ ಹುಲ್ಲು, ಪೊದೆ, ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿದ್ದು ಅಪಾಯದ ಭೀತಿ ಎದುರಾಗಿದೆ.

ರಸ್ತೆಗಳ ಇಕ್ಕೆಲದಲ್ಲಿ ಪೈರು ಬೆಳೆದು ನಿಂತಿದ್ದು, ಕೆಲವೊಂದು ತಿರುವುಗಳಲ್ಲಿ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಈ ಬಾರಿ ಸುರಿದ ಭಾರೀ ಮಳೆಗೆ ರಸ್ತೆ ಬದಿಯಲ್ಲಿ ಹುಲ್ಲು ಬೆಳೆದಿದ್ದು ಕೆಲವೆಡೆ ರಸ್ತೆಯನ್ನು ಕೂಡಾ ಆವರಿಸಿಕೊಂಡಿದೆ.ಇದರಿಂದ ಪಾದಚಾರಿಗಳು ನಡೆದಾಡಲು ಕೂಡಾ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೆಲವು ಕಡೆಗಳಲ್ಲಿ ಸ್ಥಳೀಯರು ಹುಲ್ಲು ಕಟಾವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಕೆಲವೆಡೆ ಅಡ್ಡರಸ್ತೆಯಿಂದ ಮುಖ್ಯರಸ್ತೆ ಪ್ರವೇಶಿಸುವಲ್ಲಿ ವಾಹನ ಸವಾರರು ಏಕಾಏಕಿ ಮುನ್ನುಗ್ಗುವುದರಿಂದ ರಸ್ತೆ ಬದಿಯ ಪೈರಿನಿಂದಾಗಿ ಮುಖ್ಯರಸ್ತೆಯಲ್ಲಿ ಹಾದುಹೊಗುವ ವಾಹನಗಳು ಕಾಣಿಸದೆ ಅಪಘಾತಕ್ಕೂ ಕಾರಣವಾಗಿದೆ. ರಸ್ತೆ ಬದಿಯಲ್ಲಿ ನಿಂತು ಬಸ್ಸು ಕಾಯುವ ಪ್ರಯಾಣಿಕರಿಗೆ ಚಲಿಸುವ ಬಸ್ಸುಗಳು ಕಾಣದೆ ತೊಂದರೆಯಾಗಿದೆ.

ವಾಹನ ದಟ್ಟಣೆ
ಶಿರ್ವ ಮಂಚಕಲ್‌ ಪೇಟೆಯ ಮಧ್ಯದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ದಿನವೊಂದಕ್ಕೆ ಸಾವಿರಾರು ವಾಹನಗಳು ಎಡೆಬಿಡದೆ ಚಲಿಸುತ್ತಿದ್ದು ವಾಹನ ದಟ್ಟಣೆಯಾಗುತ್ತಿದೆ. ಅದ ರೊಂದಿಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ದಿನನಿತ್ಯ ಓಡಾಡುತ್ತಿ ದ್ದಾರೆ. ಲೋಕೋಪಯೋಗಿ ಇಲಾಖೆ/ಗುತ್ತಿಗೆದಾರರ ನಿರ್ಲಕ್ಷéದಿಂದಾಗಿ ಕಾಮಗಾರಿ ಪೂರ್ತಿಯಾಗದೆ ಮಂಚಕಲ್‌ ಪೇಟೆಯ ಮಧ್ಯದಲ್ಲಿ ನಿರ್ಮಿಸಲಾಗಿರುವ ಡಿವೈಡರ್‌ನಲ್ಲಿಯೂ ಹುಲ್ಲು ಬೆಳೆದಿದೆ.

ಲೋಕೋಪಯೋಗಿ ಇಲಾಖೆ ರಸ್ತೆ ಬದಿಯಲ್ಲಿ ಆಳೆತ್ತರಕ್ಕೆ ಬೆಳೆದಿರುವ ಹುಲ್ಲು ಗಿಡಗಂಟಿಗಳನ್ನು ತೆರವುಗೊಳಿಸದೆ ಇರುವು ದರಿಂದ ಅಪಘಾತಗಳು ಹೆಚ್ಚಾಗುವ ಭೀತಿಯಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಂಡು ಇವುಗಳನ್ನು ಕಟಾವು ಮಾಡುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕಿದೆ.

ಅಪಾಯದ ಭೀತಿ ಎಲ್ಲೆಲ್ಲಿ
ಶಿರ್ವ ಅಟ್ಟಿಂಜೆ ರಸ್ತೆ,ಕಾಪು ಶಿರ್ವ ರಸ್ತೆ,ಕೋಡು ಪಂಜಿಮಾರು ಕ್ರಾಸ್‌ ಬಳಿ,ಶಿರ್ವನ್ಯಾರ್ಮ-ಮಸೀದಿ ಬಳಿ, ಪೊಲೀಸ್‌ ಸ್ಟೇಶನ್‌ ಕ್ರಾಸ್‌, ಶಿರ್ವ ಪೆಟ್ರೋಲ್‌ ಪಂಪ್‌ ಬಳಿಯಿಂದ ಸಂಗೀತಾ ಕಾಂಪ್ಲೆಕ್ಸ್‌ವರೆಗೆ, ತುಂಡು ಬಲ್ಲೆಯಿಂದ ಪ್ರಿನ್ಸ್‌
ಪಾಯಿಂಟ್‌ಗಾಗಿ ಪಿಲಾರು ಖಾನದವರೆಗೆ ರಸ್ತೆ ಬದಿ ಬೆಳೆದ ಪೈರಿನಿಂದಾಗಿ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಗೋಚರಿಸದೆ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ.

ತುರ್ತು ಕ್ರಮ ಅಗತ್ಯ
ರಸ್ತೆ ಬದಿ ಹುಲ್ಲು ಬೆಳೆದಿರುವುದರಿಂದ ಸಾರ್ವಜನಿಕರಿಗೆ,ವಾಹನಸವಾರರಿಗೆ ತೊಂದರೆಯಾಗುತ್ತಿದೆ.ಈ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.ಇಲಾಖೆ ಕೂಡಲೇ ಸ್ಪಂದಿಸಿ ತುರ್ತು ಕ್ರಮ ಕೈಗೊಳ್ಳಬೇಕಿದೆ.
-ಮೆಲ್ವಿನ್‌ ಡಿ’ಸೋಜಾ,
ನ್ಯಾಯವಾದಿ, ಗ್ರಾ.ಪಂ.
ಸದಸ್ಯರು ಶಿರ್ವ

ಗಮನಕ್ಕೆ ಬಂದಿದೆ
ರಸ್ತೆ ಬದಿ ಹುಲ್ಲು ಬೆಳೆದಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ. ಮಣಿಪುರ ಪ್ರದೇಶದಲ್ಲಿ ಹುಲ್ಲು ಕಟಾವು ಕಾರ್ಯ ನಡೆಯುತ್ತಿದ್ದು, ಅಲ್ಲಿ ಮುಗಿದ ಕೂಡಲೇ ವಾರದೊಳಗೆ ಹುಲ್ಲು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುವುದು.
-ಜಗದೀಶ ಭಟ್‌, ಸಹಾಯಕ
ಕಾರ್ಯಕಾರಿಅಭಿಯಂತರು,ಲೋ
ಕೋಪಯೋಗಿ ಇಲಾಖೆ,ಉಡುಪಿ.

-ಸತೀಶ್ಚಂದ್ರ ಶೆಟ್ಟಿ, ಶಿರ್ವ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ