“ಯೋಗ ಸ್ವಭಾವ’ಕ್ಕೆ ಬಾಬಾ ಸಲಹೆ

ಮಹಿಳೆಯರು, ಮಕ್ಕಳಿಗಾಗಿ ವಿಶೇಷ ಯೋಗ ಶಿಬಿರ

Team Udayavani, Nov 19, 2019, 6:15 AM IST

ಮಹಿಳೆಯರು ಮತ್ತು ಮಕ್ಕಳ ವಿಶೇಷ ಯೋಗ ಶಿಬಿರವನ್ನು ಡಾ| ಸಂಧ್ಯಾ ಪೈ ದೀಪ ಬೆಳಗಿ ಉದ್ಘಾಟಿಸಿದರು.

ಉಡುಪಿ: ಯೋಗ ನಮ್ಮ ಸ್ವಭಾವ ಆಗ ಬೇಕು. ಅದು ನಮ್ಮ ಮೂಲ ಪ್ರಕೃತಿ. ವೇದಾಭ್ಯಾಸ ದಂತೆ ಯೋಗಾಭ್ಯಾಸವನ್ನೂ ದಿನನಿತ್ಯ ರೂಢಿಸಿ ಕೊಳ್ಳಬೇಕು ಎಂದು ಯೋಗಗುರು ಬಾಬಾ ರಾಮದೇವ್‌ ಕರೆನೀಡಿದರು. ಮಹಿಳೆಯರು ಮತ್ತು ಮಕ್ಕಳಿಗಾಗಿ ಸೋಮ ವಾರ ರಾಜಾಂಗಣದಲ್ಲಿ ನಡೆದ ವಿಶೇಷ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಬಾಲ್ಯದಲ್ಲಿಯೇ ಯೋಗಾಸನಗಳನ್ನು ತಿಳಿಸಿಕೊಡಬೇಕು. ಪ್ರಾಣಾಯಾಮ ಮಾಡಿದ ಅನಂತರ ಅಮೃತಬಳ್ಳಿ, ಅಲೋವೆರಾ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಮನುಷ್ಯನ ದೇಹಕ್ಕೆ ಸಸ್ಯಾಹಾರವೇ ಉತ್ತಮ. ವಿವಿಧ ಬಗೆಯ ತರಕಾರಿಗಳಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ. ಸಾತ್ವಿಕ ವಿಚಾರಗಳಷ್ಟೇ ಸಾತ್ವಿಕ ಆಹಾರಗಳಿಗೂ ಪ್ರಾಧಾನ್ಯ ನೀಡಬೇಕು. ಉತ್ತರ ಭಾರತದಲ್ಲಿ ಶೇ.20ರಷ್ಟು ಮಂದಿ ಮಾತ್ರ ತುಳಸಿ ಬೆಳೆಯುತ್ತಾರೆ. ಆದರೆ ಇಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿಯಿದೆ. ಇದು ಉತ್ತಮ ಲಕ್ಷಣ ಎಂದು ಬಾಬಾ ಶ್ಲಾ ಸಿದರು.

40 ವರ್ಷಗಳಿಂದ ರಜೆ ಇಲ್ಲ
ಯೋಗದಿಂದ ಹಲವಾರು ಕಾಯಿಲೆಗಳನ್ನು ದೂರ ಮಾಡಲು ಸಾಧ್ಯವಿದೆ. ಕೆಲಸ ಮಾಡಿದಷ್ಟು ನಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಈ ಕಾರಣಕ್ಕೆ ನಾನು 40 ವರ್ಷಗಳಿಂದ ಒಂದೇ ಒಂದು ರಜಾ ತೆಗೆದುಕೊಂಡಿಲ್ಲ ಎಂದರು.

ಯೋಗದಿಂದ ಭಗವಂತನ ಅನುಗ್ರಹ
ಪರ್ಯಾಯ ಶ್ರೀಪಾದರು ಮಾತನಾಡಿ, ಹೆಣ್ಮಕ್ಕಳೇ ಇಂದು ಯೋಗಾಭ್ಯಾಸಕ್ಕೆ ಹೆಚ್ಚು ಆಸಕ್ತಿ ಪ್ರದರ್ಶಿಸುತ್ತಿದ್ದಾರೆ. ಯೋಗದಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದರು.

ಆತ್ಮ-ಪರಮಾತ್ಮರನ್ನು ಬೆಸೆಯುವ ಸಾಧನ
“ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ ಮಾತನಾಡಿ, ಮನಃಶಾಂತಿಗಾಗಿ ನಾವು ಯೋಗವನ್ನು ಬಯಸಿದ್ದೇವೆ. ಯೋಗ ಎಂಬುದು ಆತ್ಮನನ್ನು ಪರಮಾತ್ಮನೊಂದಿಗೆ ಬೆಸೆಯುವ ಸಾಧನವಾಗಿದೆ. ಯೋಗದಿಂದ ಶಾಂತಿ, ಸಾಮರಸ್ಯ, ಕರುಣೆ, ಉತ್ತಮ ಮನೋಭಾವ ಸಿದ್ಧಿಸಲು ಸಾಧ್ಯ ಎಂದರು.

ರಾಮದೇವ್‌ ಅವರೊಂದಿಗೆ ಯೋಗದಲ್ಲಿ ಗಿನ್ನೆಸ್‌ ದಾಖಲೆ ಮಾಡಿದ ಉಡುಪಿಯ ತನುಶ್ರೀ ಪಿತ್ರೋಡಿ ಯೋಗಾಭ್ಯಾಸ ಮಾಡಿದರು. ಪಲಿಮಾರು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಯಶೋದಾ, ಶಾಂತಾ ಆಚಾರ್ಯ, ಗಾಯತ್ರಿ ಪ್ರಭು, ಮೀನಾಕ್ಷಿ, ಡಾ| ದೀಪಿಕಾ, ಮೀನಾಕ್ಷಿ, ಚಂದ್ರಕಲಾ ಉಪಸ್ಥಿತರಿದ್ದರು. ಮಕ್ಕಳು, ಮಹಿಳೆ ಯರು ಬೃಹತ್‌ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

“ಮರುಪರಿಶೀಲನ ಅರ್ಜಿಯಿಂದ ತಪ್ಪು ಸಂದೇಶ’
ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ಅಯೋಧ್ಯೆ ತೀರ್ಪಿನ ಬಗ್ಗೆ ಮರುಪರಿಶೀಲನ ಅರ್ಜಿ ಸಲ್ಲಿಸುವುದರಿಂದ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಯೋಗಗುರು ಬಾಬಾ ರಾಮದೇವ್‌ ತಿಳಿಸಿದರು. ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ಎಲ್ಲ ನ್ಯಾಯಾಧೀಶರು ಏಕಮತದ ನಿರ್ಣಯ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಲಾ ಬೋರ್ಡ್‌ ಸ್ವತಂತ್ರವಾಗಿದೆ. ಆದರೆ ಅರ್ಜಿಯಿಂದ ಸು. ಕೋರ್ಟ್‌ ತೀರ್ಪನ್ನು ಒಪ್ಪಲು ಅವರು ಸಿದ್ಧರಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ ಎಂದರು.

ತುಳಸೀ: ಪ್ರಯೋಗಸಿದ್ಧ
ಕೆಲವರಿಗೆ ತುಳಸೀ, ಗೋವು, ಪ್ರಾಚೀನ ಜ್ಞಾನ ಪರಂಪರೆ ಬಗ್ಗೆ ಮಾತನಾಡಿದರೆ ಹಿಡಿಸುವುದಿಲ್ಲ. ತುಳಸಿಯ ರೋಗನಿರೋಧಕ, ವಿಕಿರಣ ನಿಯಂತ್ರಣ ಗುಣ ಪರೀಕ್ಷೆಯಿಂದ ಸಾಬೀತಾಗಿದೆ ಎಂದರು.

ಡಿಎನ್‌ಎ ಪರೀಕ್ಷೆ ಮಾಡಲಿ
ಪೆರಿಯಾರ್‌ ನಿಲುವನ್ನು ಖಂಡಿಸುತ್ತೇನೆ. ನಂಬಿಕೆಗೆ ಅವಮಾನ ಮಾಡುವುದು, ಹಿಂದೂ ಪರಂಪರೆ ಬ್ರಾಹ್ಮಣವಾದ ಎಂಬುದು ಸರಿಯಲ್ಲ. ದಲಿತರು, ಆದಿವಾಸಿಗಳಲ್ಲದೆ ಇಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಲ್ಲರೂ ಭಾರತೀಯರು ಮತ್ತು ಇಲ್ಲಿನ ಮೂಲ ನಿವಾಸಿಗಳು. ಈ ಬಗ್ಗೆ ಬೇಕಾದರೆ ಡಿಎನ್‌ಎ ಟೆಸ್ಟ್‌ ಮಾಡಿ ಪರೀಕ್ಷಿಸಲಿ ಎಂದರು. ಅಂಬೇಡ್ಕರ್‌, ಜ್ಯೋತಿ ಬಾಪುಲೆ ಸಹಿತಿ ದಲಿತ ಮಹಾಪುರುಷರನ್ನು ನಾವು ಗೌರವಿಸುತ್ತೇವೆ. ಜಾತಿ ಮುಕ್ತ ಭಾರತವನ್ನು ಸಮರ್ಥಿಸುತ್ತೇವೆ. ಮೂಲನಿವಾಸಿ ಚಿಂತನೆ ವೈಚಾರಿಕವಾಗಿ ವಿಧ್ವಂಸಕಾರಿ ಮತ್ತು ಇಂಟಲೆಕುcವಲ್‌ ಟೆರರಿಸಂ ಆಗಿದೆ ಎಂದು ರಾಮದೇವ್‌ ಹೇಳಿದರು.

“ಉದಯವಾಣಿ’ ಯೋಗವಾಣಿ
ಬಾಬಾ ರಾಮದೇವ್‌ ತನ್ನ ಯೋಗಾಭ್ಯಾಸದ ಕಾರ್ಯ ಕ್ರಮಗಳನ್ನು ಅಚ್ಚುಕಟ್ಟಾಗಿ ಪ್ರಸಾರ ಮತ್ತು ಮುದ್ರಣ ಮಾಡುತ್ತಿರುವ ಟಿವಿ ಮತ್ತು ಪತ್ರಿಕೆಗಳನ್ನು ಶ್ಲಾ ಸಿದರು. “ಉದಯವಾಣಿ’ ಪತ್ರಿಕೆಯು ಯೋಗ ಶಿಬಿರ ಮತ್ತು ಚಿಕಿತ್ಸಾ ಶಿಬಿರಗಳ ವರದಿ ಮತ್ತು ಚಿತ್ರಗಳ ಅಚ್ಚುಕಟ್ಟಾಗಿ ಪ್ರಕಟಿಸಿ “ಯೋಗವಾಣಿ’ಯಾಗಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ