ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೀಗ 103 ವರ್ಷ

ಬಿಲ್ವಾಪುರದಲ್ಲಿ ಜನ್ಮ ತಳೆದ ಮೊದಲ ಶಿಕ್ಷಣ ಸಂಸ್ಥೆ

Team Udayavani, Nov 11, 2019, 5:00 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಸಿದ್ದಾಪುರ: ಬಿಲ್ವಾಪುರದಲ್ಲಿ ಜನ್ಮ ತಳೆದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದುದು ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಾಲೆಯು 2016ರಲ್ಲಿ ಶತಮಾನೋತ್ಸವ ಆಚರಿಸಿದ್ದು, ಪ್ರಸ್ತುತ 145 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಶಾಲೆಯು 1916ರಲ್ಲಿ ಸ್ಥಾಪನೆಗೊಂಡಿದೆ. ಧರ್ಮ ಪ್ರಚಾರ ಮಾಡಲು ಬಂದ ಪಾದ್ರಿಯೋರ್ವರ ಮನೆಯಲ್ಲಿ ಪ್ರಾರಂಭಗೊಂಡ ಶಾಲೆ ಅದೇ ವರ್ಷದಲ್ಲಿ ಬೆಳ್ವೆ ಪಟೇಲ ತೇಜಪ್ಪ ಶೆಟ್ಟಿ ಅವರ ಬಾಡಿಗೆ ಕಟ್ಟಡದಲ್ಲಿ ಮುಂದುವರಿಯಿತು. 1994ರ ತನಕ ಶಾಲೆಯು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ಊರಿನವರು ಹಾಗೂ ಶಿಕ್ಷಕರು ಸೇರಿಕೊಂಡು ಶಾಲೆ ನಡೆಯುತ್ತಿದ್ದ ಬಾಡಿಗೆ ಕಟ್ಟಡ ಸಹಿತ 40 ಸೆಂಟ್ಸ್‌ ಜಾಗವನ್ನು ತೇಜಪ್ಪ ಶೆಟ್ಟಿ ಅವರ ಕುಟುಂಬಿಕರಿಂದ ಖರಿದಿಸಿದರು. ಪಾದ್ರಿ ಅವರಿಗೆ ಬೆಳ್ವೆ ಗ್ರಾಮದ ಗುಮ್ಮೊàಲದಲ್ಲಿ ಆ ಕಾಲದ ಸರಕಾರ ಸುಮಾರು 250 ಎಕ್ರೆ ಜಾಗ ನೀಡಿದ್ದರಿಂದ ಅವರು ಆ ಜಾಗದಲ್ಲಿ ಚರ್ಚ್‌ ಒಂದನ್ನು ಕಟ್ಟಿ ಶಾಲೆ ಕೂಡ ಆರಂಭಿಸಿದರು.

ಇಳಿಕೆಯಾಗದ ಮಕ್ಕಳ ಸಂಖ್ಯೆ
1956ರಲ್ಲಿ ಈ ಶಾಲೆಯು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡುಕೊಂಡಿತು. ಆ ಕಾಲದಲ್ಲಿ ಮಕ್ಕಳ ಸಂಖ್ಯೆಕೂಡ ಹೆಚ್ಚಾಯಿತು. ಹಾಗೆಯೇ ತರಗತಿಯ ಬೇಡಿಕೆಯು ಹೆಚ್ಚಾದವು. ಬೆಳ್ವೆ, ಗೋಳಿಯಂಗಡಿ, ಸೂರೊYàಳಿ, ಯಳಂತೂರು, ತೊಂಭತ್ತು, ಹೆಂಗವಳ್ಳಿ, ಮರೂರು, ತಾರೆಕಟ್ಟೆ, ಹಿಲಿಯಾಣ, ನಂಚಾರು ಮುಂತಾದ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಈಗ ಈ ಶಾಲೆಯ ಸುತ್ತಮುತ್ತ ಸುಮಾರು 4 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅಲ್ಲದೆ ಬೇರೆ ಬೇರೆ ಕಡೆಗಳಿಂದ ಸುಮಾರು 8 ಖಾಸಗಿ ಶಾಲೆಗಳ ಬಸ್‌ಗಳು ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೂ ಇಲ್ಲಿ ಮಕ್ಕಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪ್ರಸ್ತುತ 145 ವಿದ್ಯಾರ್ಥಿಗಳು ಹಾಗೂ 6 ಜನ ಶಿಕ್ಷಕರು ಇದ್ದಾರೆ.

ವಿದ್ಯಾರ್ಥಿಗಳ ಸಾಧನೆ
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕೀರ್ತಿಗಳಿಸಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಸತತವಾಗಿ 9 ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗೆದ್ದು, ಮೈಸೂರು ವಿಭಾಗದ ಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ. ಅಲ್ಲದೆ 10 ವಿದ್ಯಾರ್ಥಿಗಳು ತ್ರೋಬಾಲ್‌ನಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ, ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜತೆಯಲ್ಲಿ 6 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ, ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ.

ಬೇಡಿಕೆ
ಪ್ರಸ್ತುತ 145 ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಪ್ರತಿಭೆಗಳು ಹೊರ ಹೊಮ್ಮುತ್ತಿರುದರಿಂದ ಶಾಲೆಗೆ ಒಂದು ಸುಸಜ್ಜಿತವಾದ ಆಟದ ಮೈದಾನವೂ ಅವಶ್ಯವಿದೆ ಎಂಬುದು ಹಳೆ ವಿದ್ಯಾರ್ಥಿಗಳು, ಮಕ್ಕಳ ಹೆತ್ತವರ ಅಭಿಪ್ರಾಯ.

ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇದೆ. ಸರಕಾರದಿಂದ ಮೂಲ ಸೌಕರ್ಯ ಬಾರದ ಹಿನ್ನಲೆಯಲ್ಲಿ ಶಾಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಈ ಬಗ್ಗೆ ಸರಕಾರ, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು.
-ಬಿ. ರಾಜೇಂದ್ರ ಕಿಣಿ ಬೆಳ್ವೆ, ಹಳೆ ವಿದ್ಯಾರ್ಥಿ

ಉತ್ತಮ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿಗಳನ್ನು ಶಾಲೆ ಹೊಂದಿದೆ. ಪಾಲಕರು ಎಲ್ಲ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಅನೇಕರ ಹೋರಾಟದ ಫಲವಾಗಿ ಸರಕಾರದಿಂದ ಶಾಲೆ‌ಗಾಗಿ ಬೆಳ್ವೆ ಗ್ರಾಮದ ಸರ್ವೆ ನಂ. 275/1ರಲ್ಲಿ 2.72 ಎಕ್ರೆ ಸ್ಥಳ ಮಂಜೂರಾಗಿದೆ. ಇಲ್ಲಿ ಒಂದು ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಾಣವಾಗಬೇಕು. ಜತೆಗೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಬೇಕು.
-ಸುರೇಶ ಶೆಟ್ಟಿ, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಹಳೆ ವಿದ್ಯಾರ್ಥಿ

- ಸತೀಶ್‌ ಆಚಾರ್‌ ಸಿದ್ದಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ