ಚೇರ್ಕಾಡಿ: ಯಕ್ಷಗಾನ ವೇಷಭೂಷಣ ಕಮ್ಮಟ

Team Udayavani, May 15, 2019, 6:00 AM IST

ಬ್ರಹ್ಮಾವರ: ಚೇರ್ಕಾಡಿ ಮೂಡುವಾರಣಾಸಿ ಪ್ರೇರಣ ಸಾಂಸ್ಕೃತಿಕ ಕಲಾ ಟ್ರಸ್ಟ್‌ನ ವತಿಯಿಂದ ಚೇರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ಖಾಸಗಿ ಹಿ.ಪ್ರಾ. ಶಾಲೆಯಲ್ಲಿ 10 ದಿನಗಳ ಬೇಸಗೆ ಶಿಬಿರ-2019 ಪ್ರಾರಂಭಗೊಂಡಿತು. ಅದರಲ್ಲಿ ಉಚಿತವಾಗಿ ಯಕ್ಷಗಾನ-ವೇಷ ಭೂಷಣ ಕಮ್ಮಟ ಏರ್ಪಡಿಸಲಾಯಿತು.

ಶಿಬಿರವನ್ನು ಕನ್ನಾರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದ ಮೊಕ್ತೇಸರ ಅಶೋಕ್‌ ಕುಮಾರ್‌ ಹೆಗ್ಡೆ ಅವರು ಉದ್ಘಾಟಿಸಿ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರೇರಣ ಸಾಂಸ್ಕೃತಿಕ ಕಲಾ ಟ್ರಸ್ಟ್‌ ಮಹತ್ತರವಾದ ಯೋಜನೆಯನ್ನು ರೂಪಿಸುತ್ತಿದೆ. ಅದರ ಅಂಗವಾಗಿ ವೇಷ ಭೂಷಣ ಕಮ್ಮಟವನ್ನು ಪ್ರಾರಂಭಿಸಿದ್ದು, ಶಿಬಿರದಿಂದ ವಿದ್ಯಾರ್ಥಿಗಳು ನಿಪುಣತೆ ಹೊಂದಿ, ಯಕ್ಷಗಾನ ಕಲೆಯನ್ನು ಬೆಳೆಸಬೇಕು ಎಂದರು.

ಯಕ್ಷಗಾನ ಗುರು ಗಣೇಶ್‌ ಬಾಳ್ಕಟ್ಟು ಅಧ್ಯಕ್ಷತೆ ವಹಿಸಿ, ಯಕ್ಷಗಾನ ಕಲೆಯಲ್ಲಿ ಅತೀ ಸೂಕ್ಷ್ಮವಾದ ಹಾಗೂ ನಿಪುಣತೆ ಹೊಂದಿರುವ ವಿಭಾಗವೆಂದರೆ ಮುಖವರ್ಣಿಕೆ ಹಾಗೂ ವೇಷವನ್ನು ತೊಡಿಸುವಿಕೆ. ಅದರಲ್ಲೂ ಯಾವ ಪಾತ್ರಕ್ಕೆ ಯಾವ ರೀತಿ ಮುಖವರ್ಣಿಕೆ ಹಾಗೂ ಬಣ್ಣದ ವೇಷದ ಮುಖವರ್ಣಿಕೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಖಂಡಿತವಾಗಿಯೂ ಯಕ್ಷಗಾನ ಕಲೆಯನ್ನು ಬೆಳೆಸಲು ಸಾಧ್ಯ ಎಂದರು.

ಅತಿಥಿಯಾಗಿ ಚೇರ್ಕಾಡಿ ಶ್ರೀ ದುರ್ಗಾ ಯಕ್ಷಗಾನ ಯುವ ಮಂಡಳಿಯ ಅಧ್ಯಕ್ಷ ಉಮೇಶ ನಾಯ್ಕ ಉಪಸ್ಥಿತರಿದ್ದರು.

ಶಿಬಿರವು ಮೇ 21ರ ವರೆಗೆ ನಡೆಯಲಿದ್ದು, ವೇಷಭೂಷಣದ ಬಗ್ಗೆ ಉಚಿತವಾಗಿ ಮಾಹಿತಿ ಹಾಗೂ ಮುಖವರ್ಣಿಕೆ, ಬಣ್ಣದ ವೇಷದ ಮುಖವರ್ಣಿಕೆ, ವೇಷ ಭೂಷಣ ತೊಡಿಸುವಿಕೆಯ ಬಗ್ಗೆ ತಿಳಿಯ ಪಡಿಸಲಾಗುವುದು.

ಟ್ರಸ್ಟ್‌ನ ಅಧ್ಯಕ್ಷ ಅರುಣ್‌ ಕುಮಾರ್‌ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ