ಬೆಂಗಳೂರು – ಕುಂದಾಪುರ – ವಾಸ್ಕೋ ವೇಗದ ರೈಲಿಗೆ ಬೇಡಿಕೆ

ಮನವಿಗೆ ಸಂಸದರ ಸ್ಪಂದನೆ, ಸಚಿವರಿಗೆ ಪತ್ರ

Team Udayavani, Nov 14, 2019, 4:50 AM IST

ಸಾಂದರ್ಭಿಕ ಚಿತ್ರ

ಕುಂದಾಪುರ: ಬೆಂಗಳೂರಿನಿಂದ ಮಂಗಳೂರು, ಉಡುಪಿ ಮೂಲಕವಾಗಿ ಕಾರವಾರದಿಂದ ಗೋವಾದ ವಾಸ್ಕೋ ಕಡೆಗೆ ರಾತ್ರಿ ವೇಳೆ ಹೊಸ ವೇಗದ ರೈಲು ಆರಂಭಿಸಬೇಕು ಎಂದು ಆಗ್ರಹಿಸಿ ಕುಂದಾಪುರದ ರೈಲ್ವೇ ಪ್ರಯಾಣಿಕ ಹಿತ ರಕ್ಷಣ ಸಮಿತಿ ವತಿಯಿಂದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೆ ಸ್ಪಂದಿಸಿದ ಸಂಸದರು ರೈಲ್ವೇ ಸಚಿವರಾದ ಪಿಯೂಷ್‌ ಗೋಯಲ್‌, ಸುರೇಶ್‌ ಅಂಗಡಿ ಮತ್ತು ನೈಋತ್ಯ ರೈಲ್ವೇ ಇಲಾಖೆಯ ಜನರಲ್‌ ಮ್ಯಾನೇಜರ್‌ಗೆ ಪತ್ರ ಮತ್ತು ದೂರವಾಣಿಯ ಮೂಲಕ ತತ್‌ಕ್ಷಣ ಗಮನಹರಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ.

ರೈಲ್ವೇ ಸಮಿತಿಯ ಅಧ್ಯಕ್ಷ ಗಣೇಶ್‌ ಪುತ್ರನ್‌ ನೇತೃತ್ವದಲ್ಲಿ ಸದಸ್ಯರ ನಿಯೋಗ ಸಂಸದರಿಗೆ ಮನವಿ ಸಲ್ಲಿಸಿದ್ದು, ಈ ಹೊಸ ರೈಲಿನ ವೇಳಾಪಟ್ಟಿಯು ಸುರತ್ಕಲ್‌ ಮತ್ತು ಕಾರವಾರದ ಮಧ್ಯೆ ಇರುವ ಜನರಿಗೆ ಅನುಕೂಲಕರವಾಗಿರಲಿ ಎಂದು ಆಗ್ರಹಿಸಿದ್ದಾರೆ. ಇದನ್ನು ರೈಲ್ವೇ ಇಲಾಖೆ ಗಮನಕ್ಕೆ ತರಲಾಗುವುದು ಎಂದು ಸಂಸದೆ ಭರವಸೆ ನೀಡಿದರು.

ಇದರೊಂದಿಗೆ ವಾರದಲ್ಲಿ 4 ದಿನ ಸಂಚರಿಸುವ ಕುಣಿಗಲ್‌ ಮಾರ್ಗದ ರೈಲುಗಳು ಕಾರವಾರ ಮತ್ತು ಬೆಂಗಳೂರು ತಲುಪುವಾಗ ಅನಗತ್ಯ ವಿಳಂಬವಾಗುತ್ತಿದ್ದು, ಮಡಗಾಂವ್‌ ಪ್ಯಾಸೆಂಜರ್‌ ರೈಲನ್ನು ಕಾರವಾರ ರೈಲಿನ ಹಿಂದೆ ಸಂಚರಿಸುವಂತೆ ಮಾಡಿದರೆ ಈ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಸಿಗಲಿದೆ ಎನ್ನುವ ವಿಚಾರವನ್ನು ಕೂಡ ಸಂಸದರ ಗಮನಕ್ಕೆ ತರಲಾಯಿತು.

ಮುಂಬಯಿ – ಮಡಗಾಂವ್‌ ಜನಶತಾಬ್ದಿ ಗಾಡಿಯನ್ನು ಮಂಗಳೂರು ಇಂಟರ್‌ ಸಿಟಿಯ ಜತೆ ವಿಲೀನದ ಕುರಿತು ಸಮಿತಿ ಬೇಡಿಕೆ ಸಲ್ಲಿಸಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ