ಬಿಸಿಎಂ ಹಾಸ್ಟೆಲ್‌ ಉದ್ಘಾಟನೆಗೆ ವಿದ್ಯುತ್‌ ತಂತಿ ಅಡ್ಡಿ!

Team Udayavani, Dec 3, 2019, 4:23 AM IST

ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್‌ ಬಳಿ ನಿರ್ಮಾಣ ಕಾರ್ಯ ಪೂರ್ಣವಾಗಿ ತಿಂಗಳುಗಳೇ ಕಳೆದರೂ ಬಿಸಿಎಂ ಹಾಸ್ಟೆಲ್‌ ಕಟ್ಟಡದ ಉದ್ಘಾಟನೆಯೇ ನಡೆದಿಲ್ಲ. ಮಕ್ಕಳ ವಸತಿಗೆ ಲಭ್ಯವಾಗಿಲ್ಲ. ಇದಕ್ಕೆ ಕಾರಣ ಅಡ್ಡ ಬಂದ ವಿದ್ಯುತ್‌ ತಂತಿ!

ಬಿಸಿಎಂ ಹಾಸ್ಟೆಲ್‌
ತಾ.ಪಂ. ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಡಿ. ದೇವರಾಜ ಅರಸು ಬಿಸಿಎಂ ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ 2001ರಲ್ಲಿ ಮಂಜೂರಾಗಿದೆ. ಪ್ರಸ್ತುತ ಇರುವ ಕಟ್ಟಡದಲ್ಲಿ 100 ವಿದ್ಯಾರ್ಥಿನಿಯರ ಸಾಮರ್ಥ್ಯ ಎಂದಾದರೂ 200 ವಿದ್ಯಾರ್ಥಿನಿಯರಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಟ್ಟಡ ಮಂಜೂರಾಗಿತ್ತು.

ನೂತನ ಕಟ್ಟಡ
ಹಳೆ ಕಟ್ಟಡದ ಪಕ್ಕದಲ್ಲೇ 34 ಸೆಂಟ್ಸ್‌ ಜಾಗವಿದ್ದು 3.37 ಕೋ.ರೂ. ವೆಚ್ಚದಲ್ಲಿ ಹಾಸ್ಟೆಲ್‌ನ ಹೊಸ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ 100 ವಿದ್ಯಾರ್ಥಿನಿಯರಿಗೆ ತಂಗಲು ಅನುವಾಗುವಂತೆ 10 ಕೊಠಡಿಗಳಿವೆ. ಸಭಾಂಗಣ ಅಥವಾ ಪ್ರಾರ್ಥನಾ ಹಾಲ್‌ ಇದೆ. ಊಟದ ಕೊಠಡಿ, ಅಡುಗೆ ಕೋಣೆ, ಸ್ಟೋರ್‌ ರೂಂ, ಬಟ್ಟೆ ಒಗೆಯಲು ಕೊಠಡಿ, ಶೌಚಾಲಯ, ಸ್ನಾನದ ಕೊಠಡಿಗಳು, ವಾರ್ಡನ್‌ ಕಚೇರಿ ಇವೆ. ವಿಶಾಲ ಗಾಳಿ ಬೆಳಕಿನ ವ್ಯವಸ್ಥೆಗೆ ಬೇಕಾದಂತೆ ಕಟ್ಟಡದ ವಿನ್ಯಾಸ ರೂಪಿಸಲಾಗಿದೆ. 1 ಮಾಳಿಗೆಯ ಕಟ್ಟಡ ಇದಾಗಿದ್ದು ಸಿಸಿಟಿವಿ ಅಳವಡಿಕೆ ಕಾರ್ಯ ನಡೆಯಬೇಕಿದೆ.

ಕಟ್ಟಡದ ಗೋಡೆ ಬದಿಯಲ್ಲೇ ತಂತಿ
ಹಾಸ್ಟೆಲ್‌ನ ನೂತನ ಕಟ್ಟಡಕ್ಕೆ ತಾಗಿಕೊಂಡಂತೆ ಆವರಣ ಗೋಡೆ ಪಕ್ಕದಲ್ಲಿ ವಿದ್ಯುತ್‌ ಕಂಬಗಳಿದ್ದು ಅವುಗಳ ತಂತಿ ಕಟ್ಟಡದ ಗೋಡೆ ಬದಿಯಲ್ಲೇ ಹಾದು ಹೋಗಿದೆ. ಮಕ್ಕಳು ಮೇಲ್ಛಾವಣಿಗೆ ಹೋದರೆ ಬಟ್ಟೆ ಇತ್ಯಾದಿ ಅದಕ್ಕೆ ತಾಗುವಂತೆ ಇದೆ. ಆದ್ದರಿಂದ ಮೇಲ್ಛಾವಣಿಗೆ ಹೋಗುವ ಪ್ರವೇಶಿಕೆಯನ್ನೇ ಸದ್ಯ ಬಂದ್‌ ಮಾಡಲಾಗಿದೆ. ಹಾಗಿದ್ದರೂ ತಂತಿ ತೆರವು ನಡೆದ ಬಳಿಕವೇ ಮಕ್ಕಳನ್ನು ಇಲ್ಲಿ ಸ್ಥಳಾಂತರಿಸಲು ಇಲಾಖೆ ನಿರ್ಧರಿಸಿದೆ. ಅಲ್ಲಿವರೆಗೆ ಹಳೆ ಕಡ್ಡದಲ್ಲೇ 100 ಮಕ್ಕಳ ಹಾಸ್ಟೆಲ್‌ನಲ್ಲಿ 200 ಮಕ್ಕಳು ಉಳಕೊಳ್ಳಬೇಕಾಗಿದೆ. ಎಷ್ಟು ಶೀಘ್ರ ಸಾಧ್ಯವೋ ಅಷ್ಟು ಶೀಘ್ರ ಹೊಸ ಕಟ್ಟಡ ಬಳಕೆಗೆ ದೊರೆತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ವಿಳಂಬ
ಕಟ್ಟಡ ನಿರ್ಮಾಣಕ್ಕೆ ಮುನ್ನ ಯಾವುದೇ ಪ್ರಸ್ತಾವನೆ ಇಲ್ಲದ ಕಾರಣ ಮೆಸ್ಕಾಂ ಇಲ್ಲಿ ಕಂಬಗಳ ತೆರವುಗೊಳಿಸಿಲ್ಲ. ಇದೀಗ ಕಂಬಗಳ ತೆರವು, ತಂತಿ ಬದಲಾವಣೆಗೆ ಖರ್ಚಾಗುವ ಹಣ ಯಾರು ಕೊಡುವುದು ಎಂಬ ನಿಷ್ಕರ್ಷೆಯಿಂದಾಗಿ ಕೆಲಸ ಬಾಕಿಯಾಗಿದೆ. ಕಟ್ಟಡ ನಿರ್ಮಾಣ ಸಂದರ್ಭ ಕೊಪ್ಪಳದಲ್ಲಿ ನಡೆದಂತಹ ದುರಂತವೊಂದು ಸಂಭವಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ಕೊಪ್ಪಳ ದುರಂತದ ಬಳಿಕ ಮುತುವರ್ಜಿ ವಹಿಸಲಾಗಿದೆ ಎನ್ನುತ್ತಾರೆ ಬಿಸಿಎಂ ಇಲಾಖಾಧಿಕಾರಿಗಳು.

ಕೊಪ್ಪಳ ದುರಂತ
ಈ ವರ್ಷ ಆಗಸ್ಟ್‌ನಲ್ಲಿ ಕೊಪ್ಪಳದಲ್ಲಿ ಧ್ವಜಾ ರೋಹಣದ ಕಂಬ ತೆಗೆಯಲು ಹೋದಾಗ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ವಿದ್ಯುತ್‌ ಶಾಕ್‌ ಬಡಿದು ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆ ಕುಂದಾಪುರದಲ್ಲೂ ಮುಂಜಾಗರೂಕತಾ ಕ್ರಮವಾಗಿ ಕಂಬ ಹಾಗೂ ತಂತಿ ತೆರವಿಗೆ ಮುಂದಾಗಲಾಗುತ್ತಿದೆ.

ಶಾಸಕರಿಂದ ಪತ್ರ
ಹಾಸ್ಟೆಲ್‌ ಆವರಣ ಗೋಡೆಗೆ ತಾಗಿಕೊಂಡಂತೆ ಇರುವ ವಿದ್ಯುತ್‌ ತಂತಿಗಳನ್ನು ತೆರವುಗೊಳಿಸಿ ಕಂಬಗಳನ್ನು ಬೇರೆಡೆ ಸ್ಥಳಾಂತರ ಮಾಡಿ ತತ್‌ಕ್ಷಣ ಹಾಸ್ಟೆಲ್‌ ಕಾರ್ಯಾಚರಿಸಲು ಅನುವು ಮಾಡಿಕೊಡಬೇಕೆಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನ.29ರಂದು ಮೆಸ್ಕಾಂಗೆ ಪತ್ರ ಬರೆದಿದ್ದಾರೆ.

ಶೀಘ್ರದಲ್ಲಿ ಕಾರ್ಯಾರಂಭ
ವಿದ್ಯುತ್‌ ಕಂಬಗಳ ತೆರವಿಗೆ ಶಾಸಕರು ಹಾಗೂ ಇಲಾಖೆಯಿಂದ ಪತ್ರ ಬರೆದಿದ್ದು ತೆರವುಗೊಳಿಸಿದ ಕೂಡಲೇ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು. ಬಳಿಕ ಹಳೆ ಹಾಸ್ಟೆಲ್‌ ಕಟ್ಟಡದಲ್ಲಿರುವ ವಿದ್ಯಾರ್ಥಿನಿಯರು ಇಲ್ಲಿ ಉಳಿದುಕೊಳ್ಳಬಹುದು. ಕಟ್ಟಡ ಕಾಮಗಾರಿ ಪೂರ್ಣವಾಗಿದೆ. ಲೋಕಾರ್ಪಣೆಯಷ್ಟೇ ಬಾಕಿ ಇದೆ.
-ಬಿ.ಎಸ್‌. ಮಾದರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ

ಲಕ್ಷ್ಮೀ ಮಚ್ಚಿನ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ