ಉಡುಪಿ: ಸಂತೆಕಟ್ಟೆಯ ಬಳಿ ಕಂಬಕ್ಕೆ ಢಿಕ್ಕಿ ಹೊಡೆದ ಮೀನಿನ ಲಾರಿ; ಚಾಲಕ ಸಾವು
Team Udayavani, Dec 14, 2021, 12:08 PM IST
ಉಡುಪಿ: ಉಡುಪಿ: ಸಂತೆಕಟ್ಟೆ ಸಮೀಪ ಸೋಮವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸೂಚನಾ ಫಲಕದ ಕಂಬಕ್ಕೆ ಲಾರಿ ಢಿಕ್ಕಿ ಹೊಡೆದು ಚಾಲಕ ಮಹಮ್ಮದ್ ತೌಫಿಕ್ (29) ಸಾವನ್ನಪ್ಪಿದ್ದಾರೆ.
ಚಾಲಕ ಭಟ್ಕಳದ ನಜುರುಲ್ಲಾ (32) ಅವರು ಕೇರಳದ ಚಾವಕಾಡದಿಂದ ಭಟ್ಕಳಕ್ಕೆ ಇನ್ಸುಲೇಟರ್ ಲಾರಿಯನ್ನು ಚಲಾಯಿಸಿಕೊಂಡು ಬಂದು ಕೇರಳದ ಬಾರ್ಡರ್ ತಲಪಾಡಿಯಲ್ಲಿ ಲಾರಿಯಲ್ಲಿದ್ದ ಮಹಮ್ಮದ್ ತೌಫಿಕ್ ಮತ್ತು ನಜುರುಲ್ಲಾ ಅವರು ಸೋಮವಾರ ರಾತ್ರಿ ಲಾರಿಯಲ್ಲಿ ವಿಶ್ರಾಂತಿಯಲ್ಲಿದ್ದರು. ಅಲ್ಲಿಂದ ಮಹಮ್ಮದ್ ತೌಫಿಕ್ ಅವರು ಲಾರಿ ಚಲಾಯಿಸಿಕೊಂಡು ಬಂದಿದ್ದರು.
ಸಂತೆಕಟ್ಟೆ ಬಳಿಯ ಶಮಾ ಹೋಂಡಾ ಶೋ ರೂಮ್ ಎದುರುಗಡೆ ರಾ.ಹೆ. 66ರಲ್ಲಿ ನಿಯಂತ್ರಣ ತಪ್ಪಿದ ಲಾರಿಯು ಡಿವೈಡರ್ ಮೇಲೆ ಹೋಗಿ ಕುಂದಾಪುರ-ಕಾರವಾರ ಪಣಜಿ ಸೂಚನಾ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಮಹಮ್ಮದ್ ತೌಫಿಕ್ ಅವರ ಮುಖ ಮತ್ತು ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅನಂತರ ಹೆಚ್ಚಿನ ಚಿಕೆತ್ಸೆ ಬಗ್ಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಹಮ್ಮದ್ ತೌಫಿಕ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಲಾರಿಯಲ್ಲಿದ್ದ ನಜುರುಲ್ಲಾ ಅವರ ಎಡ ಕೈ ಹಾಗೂ ಎರಡು ಕಾಲುಗಳಿಗೂ ಗಾಯವಾಗಿದೆ. ರಸ್ತೆ ಬದಿಯ ಸೂಚನಾ ಫಲಕದ ಕಂಬ ಜಖಂಗೊಂಡಿದೆ.
ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.