ಮೀನುಗಾರರ ರಜೆ ವೇತನ ಕನ್ನಡಿ ಗಂಟು

ಕೇಂದ್ರ-ರಾಜ್ಯಗಳ ಕೋಟ್ಯಂತರ ರೂ. ಅನುದಾನ ಬಾಕಿ

Team Udayavani, Sep 12, 2019, 5:49 AM IST

ಕೋಟ: ಮೀನುಗಾರಿಕೆ ರಜೆಯ ಅವಧಿಯಲ್ಲಿ ಸಣ್ಣ ಮೀನುಗಾರರಿಗೆ ಅರ್ಥಿಕವಾಗಿ ಸಹಕಾರಿಯಾಗುವ ನಿಟ್ಟಿನಲ್ಲಿ ಜಾರಿಯಾದ ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ ಯೋಜನೆಯು ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಪಾವತಿಯಾಗಬೇಕಿದ್ದ ಕೋಟ್ಯಂತರ ರೂಪಾಯಿ ಬಾಕಿ ಇರುವುದರಿಂದ ಬಹುತೇಕ ಸ್ಥಗಿತಗೊಂಡಿದೆ.
ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ 2017ರಲ್ಲಿ 16,937 ಮಂದಿ, 2018ರಲ್ಲಿ 16,669 ಮಂದಿ, 2019ರಲ್ಲಿ 12,578 ಮಂದಿ ಯೋಜನೆಯ ಸದಸ್ಯರಾಗಿದ್ದರು. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದ ಬಹುತೇಕ ಪಾವತಿಯಾಗಿಲ್ಲ.

ಏನಿದು ಯೋಜನೆ
ಆರ್ಥಿಕವಾಗಿ ಹಿಂದುಳಿದ ಮೀನುಗಾರರು ಸೆಪ್ಟಂಬರ್‌ನಿಂದ ಮೇ ತನಕ ಯಾವುದೇ ಮೀನು ಗಾರಿಕೆ ಸಹಕಾರಿ ಸಂಸ್ಥೆಗಳಲ್ಲಿ ಮಾಸಿಕ 165 ರೂ.ಗಳನ್ನು ಠೇವಣಿ ಇಡಬೇಕು. ಒಂಬತ್ತು ತಿಂಗಳಲ್ಲಿ ಓರ್ವ ಸದಸ್ಯನ ಖಾತೆಯಲ್ಲಿ ಸಂಗ್ರಹವಾದ 1,500 ರೂ.ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ತಲಾ 1,500 ರೂ. ನೀಡುತ್ತದೆ. ಸಂಗ್ರಹವಾಗುವ ಒಟ್ಟು 4,500 ರೂ.ಗಳನ್ನು ಜೂನ್‌, ಜುಲೈ, ಆಗಸ್ಟ್‌ನ ಮೀನುಗಾರಿಕೆ ರಜೆ ಅವಧಿಯಲ್ಲಿ ರಜಾ ವೇತನ ರೂಪದಲ್ಲಿ ನೀಡಲಾಗುತ್ತದೆ.

ಕಟ್ಟಿದ ಹಣವೂ ಕೈ ಸೇರಲು ವಿಳಂಬ
ಸದಸ್ಯರು ತಿಂಗಳಿಗೆ 165ರಂತೆ 9 ತಿಂಗಳು ಪಾವತಿಸಿದ 1,500 ರೂ. ವಾಪಸು ಕೈ ಸೇರಲು ಹಲವು ಸಮಯ ಬೇಕಾಗುತ್ತಿದೆ. 2018ರಲ್ಲಿ ಪಾವತಿಸಿದ ಹಣ ಇದೀಗ ಜಮೆ ಆಗುವ ಹಂತದಲ್ಲಿದೆ. ಒಟ್ಟಾರೆ ರಜಾ ಅವಧಿಯಲ್ಲಿ ಅನುಕೂಲವಾಗಲಿದೆ ಎನ್ನುವ ನಿಟ್ಟಿನಲ್ಲಿ ಯೋಜನೆಯಲ್ಲಿ ತೊಡಗಿಸಿಕೊಂಡ ಸಾವಿರಾರು ಮೀನುಗಾರರಿಗೆ ಯಾವುದೇ ಪ್ರಯೋಜನವಾಗದ ಕುರಿತು ಸಾಕಷ್ಟು ಬೇಸರವಿದೆ ಹಾಗೂ ಸಮಸ್ಯೆಯನ್ನು ಸರಿಪಡಿಸುವಂತೆ ಆಗ್ರಹ ಕೇಳಿ ಬರುತ್ತಿದೆ.

ಯೋಜನೆಯಲ್ಲಿ ಹಣ ತೊಡಗಿಸಿದ ಮೀನುಗಾರರು ಆಗಾಗ ಸಂಘಕ್ಕೆ ಭೇಟಿ ನೀಡಿ ವಿಚಾರಿಸುತ್ತಾರೆ. ಸರಕಾರದ ಅನುದಾನದ ಜತೆಗೆ ಕಟ್ಟಿದ ಹಣವು ಸರಿಯಾಗಿ ಕೈ ಸೇರದ ಕುರಿತು ಅವರಿಗೆ ಬೇಸರವಿದೆ. ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕಿದೆ.
– ಅಶೋಕ್‌ ಕೋಡಿಕನ್ಯಾಣ, ಅಧ್ಯಕ್ಷರು ಕೋಡಿ ಮೀನುಗಾರರ ಸಹಕಾರಿ ಸಂಘ

ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಆದ್ದರಿಂದ ಯೋಜನೆಯಲ್ಲಿ ಒಂದಷ್ಟು ಮಾರ್ಪಾಟುಗೊಳಿಸಿ ಮೀನುಗಾರರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವ
ಚಿಂತನೆ ಇದೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು

ಯೋಜನೆಯ ಸದಸ್ಯರಿಗೆ ಸರಕಾರದ ಅನುದಾನ ಬಾಕಿ ಇದೆ. ಸುಮಾರು ಹತ್ತು ವರ್ಷಗಳಿಂದ ಜಾರಿಯಲ್ಲಿರುವ ಈ ಯೋಜನೆಯಲ್ಲಿ ಈ ಹಿಂದೆಯೂ ಕೆಲವೊಮ್ಮೆ ವಿಳಂಬವಾಗಿದೆ. ಆದರೆ ಇಷ್ಟು ದೀರ್ಘ‌ ಅವಧಿ ಹೀಗಾಗಿರುವ ಇದೇ ಮೊದಲು. ಸದಸ್ಯರು 2017-18ನೇ ಸಾಲಿನಲ್ಲಿ ಪಾವತಿಸಿದ ಉಳಿತಾಯದ ಹಣವನ್ನು ಅವರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
– ಗಣೇಶ್‌, ಉಪನಿರ್ದೇಶಕರು
ಮೀನುಗಾರಿಕೆ ಇಲಾಖೆ, ಮಂಗಳೂರು ವಲಯ

 ರಾಜೇಶ್‌ ಗಾಣಿಗ  ಅಚ್ಲಾಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ