ಬಂದರು ಇಲಾಖೆಯಿಂದ ಮೀನುಗಾರಿಕೆ ಇಲಾಖೆಗೆ ಜಾಗ ಹಸ್ತಾಂತರಕ್ಕೆ ಸರಕಾರದ ಆದೇಶ

ಮಲ್ಪೆ ಮೀನುಗಾರಿಕೆ ಬಂದರು ಜೆಟ್ಟಿ ವಿಸ್ತರಣೆ

Team Udayavani, Dec 5, 2019, 4:16 AM IST

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿ ನಿರ್ಮಾಣದ ಯೋಜನೆಗೆ ಬಂದರು ಇಲಾಖೆಯ ಅಧೀನದಲ್ಲಿದ್ದ ಜಾಗವನ್ನು ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸರಕಾರ ದಿಂದ ಆದೇಶ ದೊರೆತ್ತಿದ್ದು ಕಳೆದ ಎರಡು ವರ್ಷ ದಿಂದ ಉಂಟಾಗಿದ್ದ ಜಾಗದ ಸಮಸ್ಯೆ ಕೊನೆಗೂ ಬಗೆಹರಿಯುವಂತಾಗಿದೆ.

ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿ ನಿರ್ಮಾಣದ ಯೋಜನೆಗೆ ನಬಾರ್ಡ್‌ ಯೋಜನೆ ಯಡಿ 10ಕೋ. ರೂ. ಬಿಡುಗಡೆಯಾಗಿ ಎರಡು ವರ್ಷ ಕಳೆದರೂ, ಜೆಟ್ಟಿ ನಿರ್ಮಾಣ ಆಗಬೇಕಾದ ಜಾಗದ ಗುರುತಿಸುವಿಕೆಯಲ್ಲಿ ಸಮಸ್ಯೆ ಎದುರಾಗಿದ್ದರಿಂದ ವಿಸ್ತರಣಾ ಯೋಜನೆಗೆ ಮುಹೂರ್ತ ಕೂಡಿ ಬಂದಿರಲಿಲ್ಲ. ಇದೀಗ ಮಲ್ಪೆ ಬಂದರಿನ ಮೊದಲ ಹಂತ ಮತ್ತು ಮೂರನೇ ಹಂತದ ಮಧ್ಯೆ ಇರುವ ಸುಮಾರು 4200 ಚದರ ಮೀಟರ್‌ ಜಾಗದಲ್ಲಿ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ.

ಪಡುಕರೆ ಭಾಗದಲ್ಲಿ ವಿರೋಧ ವ್ಯಕ್ತವಾಗಿತ್ತು
ಆರಂಭದಲ್ಲಿ ಪಡುಕರೆ ಭಾಗದಲ್ಲಿ ಜೆಟ್ಟಿ ನಿರ್ಮಾಣಕ್ಕೆ ಜಾಗ ಗುರುತಿಸಿ ಡಿಪಿಆರ್‌ ಸಿದ್ಧಪಡಿಸಲಾಗಿತ್ತು. ಆದರೆ ಅಲ್ಲಿ ಸಣ್ಣ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುವವರಿಗೆ ಇದರಿಂದ ತೊಂದರೆ ಆಗುತ್ತದೆ ಎಂಬ ನಿಟ್ಟಿನಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆಗೆ ಹಿನ್ನೆಡೆಯಾಯಿತು. ಮಲ್ಪೆ -ಪಡುಕರೆಯಿಂದ ಉದ್ಯಾವರದವರೆಗೆ ಹೊಳೆಯಲ್ಲಿ ನಾಡದೋಣಿ, ಸಣ್ಣದೋಣಿಗಳ ಮೂಲಕ ಸಾಂಪ್ರದಾಯಿಕವಾಗಿ ಮೀನುಗಾರಿಕೆ ನಡೆಸುವ ನೂರಾರು ಕುಟುಂಬಗಳಿವೆ. ಈ ಭಾಗದಲ್ಲಿ ಜೆಟ್ಟಿ ನಿರ್ಮಾಣ ಮಾಡಿದಲ್ಲಿ ದೊಡ್ಡ ದೋಣಿಗಳು ನಿಲ್ಲುವುದರಿಂದ ಸಣ್ಣ ದೋಣಿಗಳಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬುವುದು ಅವರ ಅಭಿಪ್ರಾಯವಾಗಿತ್ತು.

ಮಂಜಿದಕ್ಕೆ ಬಳಿಯ ಜಾಗ
ಮೊದಲ ಮತ್ತು ಮೂರನೇ ಹಂತದ ಮಧ್ಯೆ ಮಂಜಿ ದಕ್ಕೆ ಪ್ರದೇಶದಲ್ಲಿ ಸುಮಾರು 200ಮೀ. ಜಾಗ ಖಾಲಿ ಇದ್ದು ಇದನ್ನು ಜೋಡಿಸಿ ಜೆಟ್ಟಿ ನಿರ್ಮಿಸಿ ಕೊಡಬೇಕೆಂಬ ಬೇಡಿಕೆ ಮೀನುಗಾರರದಾಗಿತ್ತು. ಆದರೆ ಮೀನುಗಾರು ಸೂಚಿಸಿದ ಈ ಜಾಗ ಬಂದರು ಇಲಾಖೆಯ ಅಧೀನದಲ್ಲಿತ್ತು. ಅದು ಮೀನುಗಾರಿಕೆ ಇಲಾಖೆಯ ಹಸ್ತಾಂತರ ಮಾಡಿದರೆ ಮಾತ್ರ ಈ ಯೋಜನೆ ಮಾಡಲು ಸಾಧ್ಯವಾಗುತ್ತಿತ್ತು. ಹಾಗಾಗಿ ಮೀನುಗಾರರು ಮೀನುಗಾರಿಕೆ ಇಲಾಖೆಗೆ ಈ ಜಾಗವನ್ನು ಹಸ್ತಾಂತರಿಸಿ ಬಂದರು ನಿರ್ಮಾಣ ಮಾಡಬೇಕು ಎಂದು ಮೀನುಗಾರಿಕೆ ಸಚಿವರಲ್ಲಿ ಮೀನುಗಾರರು ಆಗ್ರಹಿಸಿದ್ದರು.
ಮಲ್ಪೆ ಬಂದರಿನಲ್ಲಿ ಈಗಾಗಲೇ 1, 2 ಮತ್ತು ಬಾಪುತೋಟದ ಬಳಿಯಲ್ಲಿ ಮೂರು ಹಂತದ ಬಂದರುಗಳಿವೆ.

ಕಲ್ಮಾಡಿ ಬೊಬ್ಬರ್ಯ ಪಾದೆಯ ಬಳಿಯಲ್ಲಿ 3.84 ಕೋ. ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣ ಮಾಡಲಾಗಿದೆ. ಅಲ್ಲಿಯೂ ಬೋಟುಗಳನ್ನು ಲಂಗರು ಹಾಕಲಾಗುತ್ತದೆ. ಈಗಿರುವ ಬೋಟುಗಳ ಗಾತ್ರ ಮತ್ತು ಸಂಖ್ಯೆಯ ಹೆಚ್ಚಳದಿಂದಾಗಿ ಜಾಗದ ಕೊರತೆ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಪಡುಕರೆಯಲ್ಲಿ 4ನೇ ಹಂತದ ಬಂದರು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.

ಸರಕಾರದ ಆದೇಶ
ಸುಮಾರು 5 ಸಾವಿರ ಚದರ ಮೀಟರ್‌ ಜಾಗದಲ್ಲಿ 800 ಚದರ ಮೀಟರ್‌ ಕರಾವಳಿ ಕಾವಲು ಪಡೆ ಇಲಾಖೆಗೆ ಬಿಟ್ಟು ಉಳಿದ 4,200 ಚದರ ಮೀಟರ್‌ ಜಾಗವನ್ನು ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸುವಂತೆ ಸರಕಾರದ ಆದೇಶ ಬಂದಿದೆ. ಮುಂದೆ ಬಂದರು ಜೆಟ್ಟಿಯ ರೂಪುರೇಷೆಗಳು, ತಾಂತ್ರಿಕ ಕೆಲಸಗಳು ನಡೆದು, ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ.
-ಕೆ. ಗಣೇಶ್‌, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ

ಮಲ್ಪೆ ಬಂದರಿನಲ್ಲಿ ಸಣ್ಣ ದೋಣಿಗಳನ್ನು ಹೊರತುಪಡಿಸಿ ಒಟ್ಟು ಯಾಂತ್ರಿಕ ದೋಣಿಗಳು ಸುಮಾರು 2 ಸಾವಿರದಷ್ಟು ಇವೆ. 1, 2 ಮತ್ತು ಬಾಪುತೋಟದ ಬಳಿಯ 3ನೇ ಹಂತದ ಬಂದರು ಸೇರಿದಂತೆ ಒಟ್ಟು 1,200 ಬೋಟುಗಳಿಗೆ ಮಾತ್ರ ಅವಕಾಶವಿದೆ. ಇದೀಗ ಹೊಸ ಯೋಜನೆ ರೂಪುಗೊಂಡಲ್ಲಿ ಸುಮಾರು 250ರಿಂದ 300ರಷ್ಟು ಬೋಟುಗಳನ್ನು ನಿಲ್ಲಿಸಬಹುದಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ