ದೇಗುಲದ ಹೆಬ್ಟಾಗಿಲಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆಗೆ 105 ವರ್ಷ

ಬಿಜೂರು ಸರಕಾರಿ ಹಿ.ಪ್ರಾ. ಶಾಲೆ

Team Udayavani, Nov 12, 2019, 5:42 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಉಪ್ಪುಂದ: ಬಿಜೂರು ಮೂರ‍್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದ ಬಳಿಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದ (ಸಾರಸ್ವತ ಮಠ) ಹೆಬ್ಟಾಗಿನಲ್ಲಿ 1914ರಲ್ಲಿ ಆರಂಭಗೊಂಡ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಶತಮಾನೋತ್ಸವ ಕಂಡಿದೆ.

ದಿ| ಶ್ರೀನಿವಾಸ ಮಯ್ಯ ಅವರ ನೇತೃತ್ವದಲ್ಲಿ ಶಾಲೆ ಆರಂಭಗೊಂಡಿದ್ದು, ಇವರೇ ಮುಖ್ಯ ಶಿಕ್ಷಕರಾಗಿ ಸುತ್ತಮುತ್ತಲಿನ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಕೆಲವು ವರ್ಷಗಳ ಬಳಿಕ ಆಗಿನ ಸರಕಾರ ನಾರಾಯಣ ದೇವಾಡಿಗ ಅವರ ಮನೆಯ ಕಟ್ಟಡದಲ್ಲಿ ಶಿಕ್ಷಣ ಮುಂದುವರಿಸಲು ಸೂಚಿಸಿತ್ತು. ಇದಕ್ಕೆ ಬಾಡಿಗೆಯನ್ನೂ ನಿಗದಿ ಪಡಿಸಲಾಗಿತ್ತು. ಹಲವು ವರ್ಷಗಳ ಬಳಿಕ ಈಗಿನ ಜಾಗಕ್ಕೆ ಶಾಲೆ ಸ್ಥಳಾಂತರ‌ಗೊಂಡಿತು. ದೇವಿದಾಸ ಪ್ರಭು ಮತ್ತು ಪರಮೇಶ್ವರ ವೈದ್ಯರು ಶಾಲೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಗೈದರು. ಅಬ್ಬು ರಾಮ ದೇವಾಡಿಗ ಮುಖ್ಯ ಶಿಕ್ಷಕರಾಗಿದ್ದರು. ಆರಂಭದಲ್ಲಿ ಒಂದು ಕೋಣೆಯನ್ನು ಮಾತ್ರ ಹೊಂದಿದ್ದು, 3.40 ಎಕ್ರೆ ಜಾಗವನ್ನು ಒಳಗೊಂಡಿದೆ. ಇದು ಸ್ಥಳೀಯರ ಅಧೀನದಲ್ಲಿದ್ದು ಬಳಿಕ ಶಾಲೆಗಾಗಿ ಬಿಟ್ಟುಕೊಟ್ಟಿರುವುದಾಗಿ ತಿಳಿದು ಬಂದಿದೆ.

ಗ್ರಾಮದ ಪ್ರಥಮ ಶಾಲೆ
1976-77ರಲ್ಲಿ 5,6,7ನೇ ತರಗತಿ ಆರಂಭಗೊಂಡು ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು. ಬಿಜೂರು ಗ್ರಾಮದ ಮೂರ‍್ಗೋಳಿಹಕ್ಲು, ಗರಡಿಸಾಲು, ದೊಂಬ್ಲಿಕೇರಿ, ಕಳಿಸಾಲು, ಶೆಟ್ರಕೇರಿ, ಹರ್ಕೆàರಿ, ಸಾಲಿಮಕ್ಕಿ, ದೀಟಿ ಮೊದಲಾದ ಪ್ರದೇಶಗಳಿಗೆ ಈ ಶಾಲೆಯೇ ಮೊದಲ ಪಾಠ ಶಾಲೆಯಾಗಿತ್ತು. ಮಕ್ಕಳ ಸಂಖ್ಯೆ ಅಧಿಕಗೊಂಡು ಊರಿನವರ ಸಹಕಾರದಿಂದ 5 ಕೊಠಡಿಗಳು ನಿರ್ಮಾಣಗೊಂಡವು. 10-12 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಶಿರೂರಿನ ಇಮಿ¤ಯಾಜ್‌ ಮತ್ತು ಸೋಮಯ್ಯ ಮಾಸ್ಟರ್‌ ಕಾಲದಲ್ಲಿ ತೆಂಗಿನ ಸಸಿ ಹಾಕಿ ಮಾಡಿರುವ ತೋಟ ಈಗಲೂ ನೋಡಬಹುದು.

ಶಾಲೆಗೆ ಬಂದಿದ್ದ ಹೆಲಿಕಾಪ್ಟರ್‌
1960ರಲ್ಲಿ ಹೆಲಿಕಾಪ್ಟರ್‌ವೊಂದು ದಾರಿ ತಪ್ಪಿ ವಿಶಾಲ ಮೈದಾನ ನೋಡಿ ಕೆಳಗೆ ಇಳಿಯಿತು. ಅದರಲ್ಲಿದ್ದವರು ಇಂಗ್ಲಿಷ್‌ ಮಾತನಾಡಿದಾಗ ಜನರು ಗಾಬರಿಗೊಂಡಿದ್ದರು. ಆಗ ಅವರೊಂದಿಗೆ ಇಂಗ್ಲಿಷ ಸಂವಾದ ನಡೆಸಿರುವುದು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪೊಲೀಸ್‌ ಅಧಿಕಾರಿ ಯಾಗಿದ್ದ (ಎಸ್‌ಐ) ಗೋವಿಂದಪ್ಪ. ಇದು ಮಿಲಿಟರಿಗೆ ಸಂಬಂಧಪಟ್ಟಿದು ಎಂದು ತಿಳಿಸಿದ್ದರು.

ಜಿಲ್ಲಾ ಕ್ರೀಡಾಂಗಣ
ವಿಶಾಲ ಮೈದಾನ ಹೊಂದಿರುವುದರಿಂದ 2002ರಲ್ಲಿ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣವೆಂದು ಘೋಷಣೆಯಾಗಿ ಜಿಲ್ಲಾ ಕ್ರೀಡಾಕೂಟ ನಡೆದಿತ್ತು. ಆಗ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಸ್ತುತ ಉಪ್ಪುಂದ ಪದವಿಪೂರ್ವ ಕಾಲೇಜು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಶಾಲೆಗಳಿಗೆ ಕ್ರೀಡಾಕೂಟ ನಡೆಸುವ ಪ್ರಮುಖ ಮೈದಾನವಾಗಿದೆ.

ಬಿಜೂರು ಶಾಲಾ ಮೈದಾನವು ಗಿನ್ನಿಸ್‌ ಪುಸ್ತಕದಲ್ಲಿ ಹೆಸರು ನಮೂದಿಸಿಕೊಂಡಿದೆ. ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ಆಶ್ರಯದಲ್ಲಿ 2012-13ರಲ್ಲಿ ನಡೆದ ಗಿನ್ನಿಸ್‌ ದಾಖಲೆ ಯೋಗ ಶಿಬಿರದಲ್ಲಿ ಎರಡು ಸಾವಿರ ವಿದ್ಯಾರ್ಥಿಗಳ ಸಾಮೂಹಿಕ ಯೋಗ ಪ್ರದರ್ಶಿಸುವ ಮೂಲಕ ಕ್ರೀಡಾಂಗಣಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದೆ. ಶಾಲೆಯು 105ನೇ ವರ್ಷದಲ್ಲಿದ್ದು ಹಳೆವಿದ್ಯಾರ್ಥಿಗಳ ಹಾಗೂ ಊರಿನವರ ಸಹಕಾರದಿಂದ ಶತಮಾನೋತ್ಸವದ ಆಚರಣೆಯ ಜತೆಗೆ ಅಭಿವೃದ್ಧಿಯ ಚಿಂತನೆ ನಡೆಯಬೇಕಿದೆ.

ಶಾಲೆ ಉಳಿವಿಗೆ ಊರಿನವರ ಕಾಳಜಿ ಹೆಚ್ಚಿದೆ. ಆ ಕಾಲದಲ್ಲಿ ಶಾಲೆಗೆ ಅಗತ್ಯ ಕೊಠಡಿ, ಸೌಕರ್ಯಗಳನ್ನು ಊರಿನವರ ಸಹಕಾರದಿಂದ ಮಾಡಲಾಗುತ್ತಿತ್ತು. ಈಗಲೂ ಹಳೆ ವಿದ್ಯಾರ್ಥಿಗಳು, ಊರಿನವರು ಶಾಲೆಯ ಉಳಿವಿಗೆ ಕೈಜೋಡಿಸಬೇಕು.
-ವಿಶ್ವೇಶ್ವರಯ್ಯ ಅಡಿಗ,ಹಳೆವಿದ್ಯಾರ್ಥಿ ಹಾಗೂ ನಿವೃತ್ತ ಶಿಕ್ಷಕರು

ನಿರ್ಮಾಣ ಹಂತದಲ್ಲಿರುವ ಶಾಲೆಯ ಒಂದು ಕಟ್ಟಡವು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು ಪೂರ್ಣಗೊಳ್ಳಬೇಕಿದೆ. ವಿಶಾಲ ಮೈದಾನವನ್ನು ಜಿಲ್ಲಾ ಮಾದರಿ ಕ್ರೀಡಾಂಗಣವಾಗಿ ರೂಪಿಸಬೇಕಿದೆ. ಕಂಪ್ಯೂಟರ್‌ ಕೊಠಡಿ ಹಾಗೂ ಪೀಠೊಪಕರಣಗಳ ಅಗತ್ಯವಿದೆ. ಇದಕ್ಕೆ ಇಲಾಖೆ ಹಳೆ ವಿದ್ಯಾರ್ಥಿಗಳ, ಊರಿನವರ ಸಹಕಾರ ಬೇಕು.
-ಅನಂತಪದ್ಮನಾಭ ಮಯ್ಯ,ಮುಖ್ಯಶಿಕ್ಷಕ

-ಕೃಷ್ಣ ಬಿಜೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ