ಶಿವಪುರ ಶಾಲೆಯಲ್ಲಿ ಶಿಕ್ಷಣದ ಜತೆ ಹಸಿರು ಕ್ರಾಂತಿ

ಸುಮಾರು ಅರ್ಧ ಎಕ್ರೆ ಜಾಗದಲ್ಲಿ ಬೆಳೆದ ತರಕಾರಿ ಕೃಷಿ.

Team Udayavani, Sep 12, 2019, 5:59 AM IST

ಸುಮಾರು ಅರ್ಧ ಎಕ್ರೆ ಜಾಗದಲ್ಲಿ ಬೆಳೆದ ತರಕಾರಿ ಕೃಷಿ.

ಹೆಬ್ರಿ: ಹೆಬ್ರಿ ತಾಲೂಕು ಶಿವಪುರ ಸ.ಹಿ.ಪ್ರಾ. ಶಾಲೆ ಗುಣಮಟ್ಟದ ಶಿಕ್ಷಣ ಜತೆ ಶಾಲಾ ಆವರಣದಲ್ಲಿ ತರಕಾರಿ ಬೆಳೆದು ಮಾದರಿಯಾಗಿದೆ.”ಎಂಕ್ಲೇನ ಸಾಲೆ, ಎಂಕ್ಲೇನ ತೋಟ’ ಯೋಜನೆಯಡಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಗ್ರಾ.ಪಂ. ಸಹಯೋಗದೊಂದಿಗೆ ಆಕರ್ಷಕ ಕೈ ತೋಟ ನಿರ್ಮಿಸಲಾಗಿದೆ. ಇಲ್ಲಿಯ ತರಕಾರಿ ಕೃಷಿಯನ್ನು ಗಮನಿಸಿದ ಶಿಕ್ಷಣ ಇಲಾಖೆ ಹಾಗೂ ಕುಂದಾಪುರ ಎಸಿ ಅವರು ತಾಲೂಕಿನ 20 ಶಾಲೆಗಳಲ್ಲಿ ತರಕಾರಿ ತೋಟ ನಿರ್ಮಿಸಲು ಶಿಫಾರಸು ಮಾಡಿದ್ದಾರೆ.

ಸಾವಯವ ಬೆಳೆ
ಶಾಲೆಯಲ್ಲಿ ಬೆಳೆದ ತರಕಾರಿಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ ಸಾವಯವ ಹಟ್ಟಿ ಗೊಬ್ಬರ ಬಳಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲಾ ಮಕ್ಕಳ ಹೆತ್ತವರು ಮತ್ತು ಶಿಕ್ಷಕರ ಮಾರ್ಗದರ್ಶನದೊಂದಿಗೆ ಶಾಲಾ ತೋಟದಲ್ಲಿ ಶಾಲಾ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಬೆಳೆಸಲಾಗುತ್ತಿದೆ.

ಏನೆಲ್ಲ ತರಕಾರಿ?
ಸುಮಾರು ಅರ್ಧ ಎಕ್ರೆಯಲ್ಲಿ ಮೂರು ವರ್ಷ ಗಳಿಂದ ನಿರಂತರ ತರಕಾರಿ ಬೆಳೆಯುತ್ತಿರುವ ಶಾಲೆಯು ಅಲಸಂಡೆ, ಹೀರೇಕಾಯಿ, ಪಡವಲ ಕಾಯಿ, ಸೋರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಸುವರ್ಣ ಗಡ್ಡೆ, ಸಾಮ್ರಾಣಿ ತರಕಾರಿಗಳನ್ನು ಬೆಳೆಸಲಾಗಿದೆ.

ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ ತನಕ ಒಂದು ಬೆಳೆ ಹಾಗೂ ಅಕ್ಟೋಬರ್‌ನಿಂದ ಮಾರ್ಚ್‌ ತನಕ ಇನ್ನೊಂದು ಬೆಳೆಯನ್ನು ಬೆಳೆಯಲಾಗುತ್ತದೆ. ಕಳೆದ ಬಾರಿ ಬೆಳೆದ ತರಕಾರಿ ದಿನ ಬಿಸಿಯೂಟದ ಬಳಕೆಗಿಂತ ಹೆಚ್ಚಾಗಿದ್ದ ಕಾರಣ ಅವನ್ನು ಅಂಗಡಿಗೆ ಮಾರಲಾಗಿದೆ. ಅದರಿಂದ ಬಂದ ಹಣದಿಂದ ದಿನಸಿ ಸಾಮಾನುಗಳನ್ನು ಖರೀದಿಸಲಾಗಿದೆ ಎನ್ನುತ್ತಾರೆ ಈ ಕಾರ್ಯಕ್ರಮದ ರೂವಾರಿ ದೈ.ಶಿ. ಶಿಕ್ಷಕ ರಮಾನಂದ ಶೆಟ್ಟಿ ಅವರು.

ಶಾಲಾ ಶಿಕ್ಷಕರು ಮಕ್ಕಳಲ್ಲಿ ಕೃಷಿಯತ್ತ ಒಲವು ಮೂಡಿಸಿ ಅವರಿಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲಾ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ ಆಚಾರ್ಯ, ಶಾಲಾ ಶಿಕ್ಷಕ ವೃಂದ, ಪೋಷಕರು, ಗ್ರಾಮಸ್ಥರು ರಮಾನಂದ ಶೆಟ್ಟಿ ಅವರ ನೇತೃತ್ವದ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಶೇ.100 ಹಾಜರಾತಿ
ಈ ಹಿಂದೆ ಮಕ್ಕಳು ನಿರಂತರವಾಗಿ ಶಾಲೆಗೆ ಬರುತ್ತಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಶೇ.100 ಹಾಜರಾತಿ ಇದೆ. ಇದಕ್ಕೆ ಕಾರಣ ಶಾಲೆಯ ವಠಾರದಲ್ಲಿ ಮಾಡಲಾಗುತ್ತಿರುವ ತರಕಾರಿ ಕೃಷಿ. ಮಕ್ಕಳಿಗೆ ಈ ಬಗ್ಗೆ ವಿಶೇಷ ಆಸಕ್ತಿಯಿದ್ದು, ಓದಿನ ಜತೆ ಕೃಷಿ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಕಾರಣ ಇದು ಸಾಧ್ಯವಾಗಿದೆ ಎಂಬುದು ರಮಾನಂದ ಶೆಟ್ಟಿ ಅವರ ಅಭಿಪ್ರಾಯ.

ವಿಶೇಷ ಆಸಕ್ತಿ
ಹೆತ್ತವರ ನಿರಂತರ ಸಹಕಾರ ಹಾಗೂ ಮಕ್ಕಳಲ್ಲಿ ಕೃಷಿ ಬಗ್ಗೆ ಇರುವ ವಿಶೇಷ ಆಸಕ್ತಿಯಿಂದ ಸತತ ಮೂರು ವರ್ಷಗಳಿಂದ ತರಕಾರಿ ಬೆಳೆಯಲಾಗುತ್ತಿದೆ. ತರಕಾರಿ ಕೃಷಿ ಕೆಲಸಕ್ಕೆ ಹೆತ್ತವರು ಶ್ರಮದಾನ ಮಾಡುವುದರ ಜತೆಗೆ ತಮ್ಮಲ್ಲಿರುವ ಹಟ್ಟಿ ಗೊಬ್ಬರವನ್ನು ಉಚಿತವಾಗಿ ನೀಡುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆಯ ನಿರಂತರ ಪ್ರೋತ್ಸಾಹ ಕೂಡ ಇದೆ.
-ಶ್ಯಾಮಲಾ ಶೆಟ್ಟಿ,
ಮುಖ್ಯ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಶಿವಪುರ

-  ಹೆಬ್ರಿ ಉದಯಕುಮಾರ್‌ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ