ಚಂದ್ರಶೇಖರ್‌ಗೆ ಮುಂದುವರಿದ ಚಿಕಿತ್ಸೆ

Team Udayavani, May 16, 2019, 6:30 AM IST

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ಸಹಿತ ನಾಪತ್ತೆಯಾದ ಭಟ್ಕಳದ ಮೀನುಗಾರ ರಮೇಶ್‌ ಮೊಗೇರ ಅವರ ಚಿಂತೆಯಲ್ಲಿ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅವರ ಸಹೋದರ ಚಂದ್ರಶೇಖರ್‌ ಮೊಗೇರ ಅವರ ಆರೋಗ್ಯದ ಸ್ಥಿತಿ ಬುಧವಾರ ಮತ್ತಷ್ಟು ಉಲ್ಬಣಿಸಿದೆ.

ಉಡುಪಿ ಆದರ್ಶ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಹೋರಾಟದ ಸ್ಥಿತಿಯಲ್ಲಿದ್ದಾರೆ.ಬೋಟ್‌ ನಾಪತ್ತೆಯಾದ ದಿನದಿಂದ ಖನ್ನತೆಗೆ ಒಳಗಾಗಿದ್ದ ಚಂದ್ರಶೇಖರ್‌ ಅವರು ಬೋಟ್‌ ಅವಶೇಷ ಪತ್ತೆಯ ಸುದ್ದಿ ತಿಳಿದು ಮತ್ತಷ್ಟು ನೊಂದುಕೊಂಡಿದ್ದರೆನ್ನಲಾಗಿದೆ.

ಸೋಮವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಂದ್ರಶೇಖರ ಭಟ್ಕಳದಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದರು. ಭಟ್ಕಳದ ಶನಿಯಾರ ಮೋಗರ ಅವರ 7 ಮಂದಿ ಮಕ್ಕಳಲ್ಲಿ ಚಂದ್ರಶೇಖರ್‌ 5ನೆಯವರು. ನಾಪತ್ತೆಯಾದ ರಮೇಶ್‌ ಸೇರಿ ಅವರಿಗೆ ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು ಮತ್ತು ಇಬ್ಬರು ಅಕ್ಕಂದಿರಿದ್ದಾರೆ. ವೃದ್ಧ – ತಂದೆ ತಾಯಿ ಕಣ್ಣೀರಿನಲ್ಲಿ ಮಗ ರಮೇಶನ ದಾರಿ ಕಾಯುತ್ತಿರುವ ವೇಳೆ ಇದೀಗ ಇನ್ನೊಬ್ಬ ಮಗ ವಿಷ ಸೇವಿಸಿದ ವಿಷಯ ತಿಳಿದು ಮತ್ತಷ್ಟು ಅಘಾತಗೊಂಡಿದ್ದಾರೆ.
ವಿಷ ದೇಹದೆಲ್ಲೆಡೆ ಪಸರಿಸಿದೆ. ರಕ್ತಸ್ರಾವವಾಗುತ್ತಿದೆ.

ಚಿಕಿತ್ಸೆ ಮುಂದುವರೆಸಿದ್ದೇವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ಡಿವೈಎಸ್ಪಿ ಜೈ ಶಂಕರ್‌, ಮಲ್ಪೆ ಪೊಲೀಸ್‌ ಠಾಣಾಧಿಕಾರಿ ಮಧು ಬಿ.ಇ. ಅವರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.

ಸಹಿ ಇನ್ನಷ್ಟೇ ಆಗಬೇಕಿದೆ
ಪರಿಹಾರ ನಿಧಿಯನ್ನು ಪಡೆಯುವಲ್ಲಿ ಅಗತ್ಯವಿರುವ ಕರಾರು ಪತ್ರಕ್ಕೆ ಉತ್ತರ ಕನ್ನಡದ ಮೀನುಗಾರರ ಕುಟುಂಬಗಳಿಂದ ಇನ್ನಷ್ಟೇ ಸಹಿ ಆಗಬೇಕಿದೆ. ಮಲ್ಪೆಯ ಎರಡು ಕುಟುಂಬಗಳು ಈಗಾಗಲೇ ಸಹಿ ಮಾಡಿದ್ದು, ಉ.ಕ.ದ 5 ಮಂದಿ ಮೀನುಗಾರ ಕುಟುಂಬಕ್ಕೂ ಸೂಚನೆ ನೀಡಲಾಗಿದ್ದು ಒಂದೆರಡು ದಿನದಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಕಾರವಾರ ಮೀನುಗಾರಿಕೆ ಉಪ ನಿರ್ದೇಶಕ ನಾಗರಾಜ್‌ ತಿಳಿಸಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ