ಕೆಜಿಗೆ 60 ರೂ. ಇದ್ದ ಕೊತ್ತಂಬರಿ ಸೊಪ್ಪಿಗೆ 280 ರೂ.!

ಬಹುತೇಕ ಎಲ್ಲ ತರಕಾರಿಗಳ ದರ ಗಣನೀಯ ಏರಿಕೆ 

Team Udayavani, Jun 24, 2019, 10:52 AM IST

ಕುಂದಾಪುರ: ಮೀನು ಮಾತ್ರವಲ್ಲ, ಈಗ ತರಕಾರಿಯೂ ದುಬಾರಿ. ವಾರದ ಹಿಂದೆ ಇನ್ನೂ ಅಧಿಕವಿದ್ದ ತರಕಾರಿ ದರ ಈಗ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ. ಆದರೆ ಕೆಲವು ದಿನಗಳ ಹಿಂದೆ ಒಂದು ಕೆಜಿ ಕೊತ್ತಂಬರಿ ಸೊಪ್ಪಿಗೆ 60 ರೂ. ಇದ್ದದ್ದು ಈಗ 270ರಿಂದ 280 ರೂ.ಕ್ಕೇರಿದೆ. ವಾರದ ಹಿಂದೆ ಇದು 350 ರೂ. ವರೆಗೂ ಇತ್ತು!

ಕೊತ್ತಂಬರಿ ಸೊಪ್ಪು ಸಹಿತ ಬಹುತೇಕ ಎಲ್ಲ ಬಗೆಯ ಸೊಪ್ಪು ತರಕಾರಿಗಳನ್ನು ಬೆಳೆಯುವ ಹುಬ್ಬಳ್ಳಿ – ಧಾರವಾಡ ದಲ್ಲಿ ಈಗ ನೀರಿನ ಅಭಾವ. ಮಳೆ
ಆರಂಭವಾಗಿದ್ದರೂ ಕೃಷಿಗೆ ಇದು ಬಳಕೆಯಾಗಲು ಹಲವು ದಿನವಾಗ
ಬಹುದು. ಹಾಗಾಗಿ ಇನ್ನು ವಾರ ಕಾಲ ಅಥವಾ 10 ದಿನದ ಮಟ್ಟಿಗೆ ಕೊತ್ತಂಬರಿ ಸೊಪ್ಪಿಗೆ ಇದೇ ದರ ಇರಬಹುದು ಎನ್ನುವುದು ಕುಂದಾಪುರದ ತರಕಾರಿ ವ್ಯಾಪಾರಸ್ಥರ ಅಭಿಪ್ರಾಯ.

ಟೊಮೇಟೋ ದರ ಇಳಿಕೆ
15 ದಿನಗಳ ಹಿಂದೆ ಟೊಮೆಟೋ ದರ ಕೆಜಿಗೆ 56-57 ರೂ. ಇದ್ದದ್ದು, ಈಗ 36 ರೂ.ಗೆ ಇಳಿಕೆಯಾಗಿದೆ. 100 ರೂ. ಇದ್ದ ಬೀನ್ಸ್‌ಗೆ ಈಗ 60 ರೂ. ಆಗಿದೆ. ಆದರೆ ರಿಂಗ್‌ ಬೀನ್ಸ್‌ ಮಾತ್ರ 120 ರೂ. ದರದಲ್ಲಿ ಮಾರಾಟವಾಗುತ್ತಿದೆ. ಸುವರ್ಣಗೆಡ್ಡೆಗೆ ಕೆಜಿಗೆ 40 ರೂ. ಇದೆ. 30 ರೂ. ಇದ್ದ ಹೂಕೊಸು 50 ರೂ.ಗೆ ಏರಿದೆ. ಮಳೆಗಾಲ ಆರಂಭವಾಗಿರುವುದರಿಂದ ಲಿಂಬೆ ಜ್ಯೂಸ್‌ಗೆ ಬೇಡಿಕೆ ಕಡಿಮೆ ಇದ್ದು, 1 ಲಿಂಬೆಕಾಯಿ ಬೆಲೆ 7 ರೂ.ನಿಂದ 4 ರೂ.ಗೆ ಇಳಿದಿದೆ.

ಇದ್ದುದರಲ್ಲಿ ಕಡಿಮೆಯಲ್ಲಿ ಸಿಗುವ ತರಕಾರಿಗಳಾದ ಸೌತೆಗೆ ಕೆಜಿಗೆ 20 –
22 ರೂ. ಮತ್ತು ಕುಂಬಳಕಾಯಿ ಕೆಜಿಗೆ 20-25 ರೂ. ದರವಿದೆ. ಕೆಜಿಗೆ 15 ರೂ. ಇದ್ದ ಮುಳ್ಳುಸೌತೆಗೆ  ಈಗ 40 ರೂ. ಈರುಳ್ಳಿಗೆ 25 ರೂ. ಆಗಿದ್ದು, ವಾರದ ಹಿಂದೆ 15-16 ರೂ. ಇತ್ತು. ಆಲೂಗಡ್ಡೆಗೆ 30 ರೂ., ಅಲಸಂಡೆಗೆ 60 ರೂ.
ಈಗ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವುದರಿಂದ ಬೇಡಿಕೆ ಯಷ್ಟು ಮೀನು ಸಿಗುತ್ತಿಲ್ಲ. ಸಿಕ್ಕರೂ ದರ ಹೌಹಾರುವಂತಿದೆ. ಆದ್ದರಿಂದ ತರಕಾರಿ ಕೊಳ್ಳುಗರೇ ಜಾಸ್ತಿ. ಹೀಗಾಗಿ ಈಗ ಶುಭ ಸಮಾರಂಭಗಳು ಕಡಿಮೆ ಯಿದ್ದರೂ ಕೆಲವು ದಿನಗಳಿಂದ ಎಲ್ಲ ತರಕಾರಿಗಳ ದರ ಧಾರಣೆಯಲ್ಲಿ ಗಣನೀಯ ಏರಿಕೆಯಾಗಿದೆ.

ಈ ಮೂರಕ್ಕೆ ಭಾರೀ ಬೇಡಿಕೆ
ಈಗ ಮಾರುಕಟ್ಟೆಯಲ್ಲಿ ಅಗ್ಗಕ್ಕೆ ಮೀನು ಸಿಗದೆ ಇರುವುದರಿಂದ ತರಕಾರಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಬೆಂಡೆಕಾಯಿ, ನವಿಲು ಕೋಸು ಮತ್ತು ಸೀಮೆ ಬದನೆಗೆ ಭಾರೀ ಬೇಡಿಕೆ. 15 ದಿನಗಳ ಹಿಂದೆ ಇವುಗಳ ದರ 50 ರೂ. ಆಸುಪಾಸಿನಲ್ಲಿತ್ತು. ಈಗ ಬೆಂಡೆ, ಬದನೆ, ನವಿಲು ಕೋಸುವಿನ ಬೆಲೆ 30 ರೂ. ಆಸುಪಾಸಿನಲ್ಲಿದೆ.

ಇನ್ನು ಸ್ವಲ್ಪ ದಿನ ಇದೇ ದರವಿರಬಹುದು. ಕೆಲವು ತರಕಾರಿಗಳಿಗೆ ಇನ್ನಷ್ಟು ಏರಿಕೆಯಾಗಬಹುದು. ಆದರೆ ಸದ್ಯ ಕಡಿಮೆ ಯಾಗುವುದಂತೂ ಕಷ್ಟ. ಎಲ್ಲೆಡೆ ನೀರಿನ ಅಭಾವದಿಂದ ಈ ರೀತಿಯ ಧಾರಣೆಯಿದೆ. ಹಿಂದಿನ ವರ್ಷಗಳಲ್ಲಿ ಇದೇ ಸಮಯ ತರಕಾರಿಗೆ ದರ ಇದಕ್ಕಿಂತಲೂ ಕಡಿಮೆ ಇತ್ತು. ಆದರೂ ಬೇಡಿಕೆ ಕಡಿಮೆಯಾಗಿಲ್ಲ.
– ಗಣೇಶ್‌ ಕುಂದಾಪುರ, ತರಕಾರಿ ವ್ಯಾಪಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ