ವಾರ್ಡ್‌ ಸದಸ್ಯರು ಪೂರೈಸುವ ಟ್ಯಾಂಕರ್‌ ನೀರೇ ಆಧಾರ

ಕಡಿಯಾಳಿ ವಾರ್ಡ್‌ ಬತ್ತಿಹೋದ ಬಾವಿಗಳು

Team Udayavani, May 18, 2019, 6:00 AM IST

ನೀರು ತುಂಬಿಸುತ್ತಿರುವುದು.

ಕಡಿಯಾಳಿ ಶಾಲೆಯ ಹಿಂಭಾಗದ ಸುಮಾರು 15 ಮನೆಗಳಿಗೆ ಈವರೆಗೂ ನೀರು ಸರಬರಾಜು ಆಗಿಲ್ಲ. ಇದರಿಂದ ಇಲ್ಲಿನವರ ಸಂಕಷ್ಟ ಹೇಳತೀರದಾಗಿದೆ.

ಉಡುಪಿ: ಟ್ಯಾಂಕರ್‌ ನೀರು ಪೂರೈಕೆಯಿಂದ ಕೆಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗುತ್ತಿದ್ದರೂ ಎಲ್ಲ ವಾರ್ಡ್‌ಗಳಿಗೆ ನೀರು ಸರಬರಾಜು ಆಗದ ಕಾರಣ ಕೆಲವರು ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.

ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗ ಸುಮಾರು 10ರಿಂದ 15 ಮನೆಗಳಿದ್ದು, ಈ ವರೆಗೆ ಯಾವುದೇ ಟ್ಯಾಂಕರ್‌ ನೀರು ಸರಬರಾಜು ಆಗಿಲ್ಲ. ಬಾವಿ ನೀರೇ ಇವರಿಗೆ ಆಧಾರವಾಗಿದೆ. ನಳ್ಳಿ ನೀರಿನ ಸಂಪರ್ಕವನ್ನು ಇಲ್ಲಿನವರು ಪಡೆದಿಲ್ಲ. ಆದರೆ ಇದೀಗ ಬಾವಿ ನೀರು ಬತ್ತಿ ಹೋಗಿವೆ. ಟ್ಯಾಂಕರ್‌ ನೀರು ಈವರೆಗೂ ಬಂದಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ಸಿರಿಲ್‌ ಡಿಮೆಲ್ಲೋ. ಬಾವಿ ನೀರು ಸಂಪೂರ್ಣ ಬರಿದಾಗಿದೆ. ನೀರಿನ ಅಗತ್ಯವನ್ನು ಮನಗಂಡು ಎರಡು ಮನೆಯವರು ಸೇರಿ ಒಂದು ಬಾರಿ ಟ್ಯಾಂಕರ್‌ ನೀರು ತಂದಿದ್ದೇವೆ. ನಳ್ಳಿ ನೀರು ಸಂಪರ್ಕ ಇಲ್ಲದ ಪ್ರದೇಶಗಳನ್ನೂ ಗುರುತಿಸಿ ನೀರು ಪೂರೈಸುವ ಕೆಲಸವಾದರೆ ಉತ್ತಮ
ಎಂಬುವುದು ರೀನಾ ಅವರ ಅಭಿಪ್ರಾಯ.

3 ದಿನಕ್ಕೊಮ್ಮೆ ನಳ್ಳಿ ನೀರು
ಬಜೆ ಡ್ಯಾಂನಲ್ಲಿ ಪಂಪಿಂಗ್‌ (ನೀರು ಹಾಯಿಸುವ ಪ್ರಕ್ರಿಯೆ) ನಡೆದ ಅನಂತರ ಈ ವಾರ್ಡ್‌ಗೆ 4ರಿಂದ 5 ದಿನಕ್ಕೊಮ್ಮೆ ನೀರು ಬರುತ್ತಿದೆ. ನಗರಸಭೆಯ ಟ್ಯಾಂಕರ್‌ ನೀರು ಬಾರದೆ 4 ದಿನವಾಯಿತು. ನಗರಸಭೆಯ ಸದಸ್ಯರು ನೀರು ಪೂರೈಸುತ್ತಿರುವುದರಿಂದ ಸ್ವಲ್ಪ ಅನುಕೂಲವಾಗುತ್ತಿದೆ ಎನ್ನುತ್ತಾರೆ ಪಾಡಿಗಾರು ಗೇಟ್‌ ನಿವಾಸಿ ಬೇಬಿ.

ನಿರ್ವಹಣೆಯಿಲ್ಲದ ಸರಕಾರಿ ಬಾವಿ
ಕಾತ್ಯಾಯಿನಿ ನಗರದಲ್ಲಿ ಸರಕಾರಿ ಬಾವಿಯಿದ್ದು ಅಕ್ಕಪಕ್ಕದ ಸುಮಾರು 20ರಿಂದ 25 ಮನೆಗಳ ನಿವಾಸಿಗಳು ಕುಡಿಯಲು ಉಪಯೋಗಿಸುತ್ತಿದ್ದರು. ಆದರೆ ಈಗ ನೀರು ಬತ್ತಿಹೋಗಿವೆ. ಬಾವಿ ತುಂಬಾ ಕೆಸರು ತುಂಬಿಕೊಂಡಿದ್ದು, ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ. ಕಳೆದ ವರ್ಷ ಸ್ಥಳೀಯರೇ ಇದರ ಮಣ್ಣು ತೆಗೆಯುವ ಕೆಲಸ ಮಾಡಿದ್ದರು. ನಗರಸಭೆ ಈವರೆಗೂ ಹೂಳು ತೆಗೆಯುವ ಕೆಲಸವನ್ನೇ ಮಾಡಿಲ್ಲ ಎಂದು ಇಲ್ಲಿನ ನಿವಾಸಿಗಳಾದ ಆಕಾಶ್‌ ಹಾಗೂ ಸತೀಶ್‌ ಕುಂದರ್‌ ಅವರು ಸಮಸ್ಯೆ ತೋಡಿಕೊಂಡರು.

ಬಹುತೇಕ ಬಾವಿಗಳು ಖಾಲಿ
ಕಡಿಯಾಳಿ ವಾರ್ಡ್‌ನಲ್ಲಿರುವ ಶೇ.70 ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಈ ಮೂಲಕ ಇಲ್ಲಿನ ನಿವಾಸಿಗಳು ಟ್ಯಾಂಕರ್‌ ಹಾಗೂ ನಳ್ಳಿ ನೀರಿನ ಬರುವಿಕೆಯನ್ನೇ ಕಾಯುವಂತಾಗಿದೆ. ಬಟ್ಟೆ, ಪಾತ್ರೆ ತೊಳೆಯಲಾದರೂ ಬಾವಿ ನೀರು ಉಪಯೋಗಿಸಬಹುದಿತ್ತು. ಆದರೆ ಅದಕ್ಕೂ ಈಗ ಕಷ್ಟಕರವಾಗಿದೆ. ದಿನನಿತ್ಯದ ಬಳಕೆಗೂ ಟ್ಯಾಂಕರ್‌, ನಳ್ಳಿ ನೀರನ್ನೇ ಆಶ್ರಯಿಸಬೇಕಾದ ಪ್ರಮೇಯ ಎದುರಾಗಿದೆ ಎಂದು ಮಾಹಿತಿ ನೀಡುತ್ತಾರೆ ವಾರ್ಡ್‌ ನಿವಾಸಿ ಸಂಜೀವ.

ದಿನಕ್ಕೆ 70 ಸಾವಿರ ಲೀ.ನಷ್ಟು ನೀರು ಪೂರೈಕೆ
ಕಡಿಯಾಳಿ ವಾರ್ಡ್‌ ಸದಸ್ಯೆ ಗೀತಾ ದೇವರಾಯ ಶೇಟ್‌ ಅವರು ಶಾಸಕರ ಸಹಕಾರದಲ್ಲಿ ವಾರ್ಡ್‌ನ ಪ್ರತೀ ಮನೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. 7 ಸಾವಿರ ಲೀ. ನೀರಿನ ಟ್ಯಾಂಕರ್‌ನಲ್ಲಿ ದಿನವೊಂದಕ್ಕೆ 10 ಟ್ರಿಪ್‌ನಂತೆ 70 ಸಾವಿರ ಲೀ. ನೀರನ್ನು ಪೂರೈಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಆರಂಭವಾದರೆ ರಾತ್ರಿ 1 ಗಂಟೆಯವರೆಗೂ ನೀರು ಪೂರೈಸಲಾಗುತ್ತಿದೆ.

ವಾರ್ಡ್‌ನವರ ಬೇಡಿಕೆ
– ಕುಡಿಯುವ ನೀರಿಗೆ ಸಮಸ್ಯೆಗೆ ಮುಕ್ತಿ ಸಿಗಲಿ.
– ಬಾವಿಗಳನ್ನು ದುರಸ್ತಿಗೊಳಿಸಿ
– ಟ್ಯಾಂಕರ್‌ ನೀರು ಸಮರ್ಪಕ ವಾಗಿ ಪೂರೈಕೆಯಾಗಲಿ.
– ವಾರ್ಡ್‌ನಲ್ಲಿ ಲಭ್ಯವಿರುವ ಬಾವಿ ನೀರು ತೆಗೆಯುವಂತಾಗಲಿ.

ಉದಯವಾಣಿ ಆಗ್ರಹ
ಆಯಾ ವಾರ್ಡ್‌ನಲ್ಲಿರುವ ಸರಕಾರಿ ಬಾವಿಗಳನ್ನು ಗುರುತಿಸಿ ಹೂಳು ತೆಗೆದು ನಿರ್ವಹಣೆ ಮಾಡಿದರೆ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಗಲಿದೆ.

– ಪುನೀತ್‌ ಸಾಲ್ಯಾನ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ