ಮೀನುಗಾರರಿಗೆ ಕಂಟಕ ತಂದಿದೆ ಕಾರ್ಗಿಲ್‌ ಮೀನು

ಮರೆಯಾದ ಮತ್ಸ್ಯ ಸಂತತಿ: ಆತಂಕದಲ್ಲಿದೆ ಪರ್ಸಿನ್‌ ಬೋಟ್‌ಗಳು

Team Udayavani, Oct 19, 2019, 5:27 AM IST

ಬೈಂದೂರು: ಕೆಲವೇ ವರ್ಷಗಳ ಹಿಂದೆ ಕಾರ್ಗಿಲ್‌ ಯುದ್ಧ ಇಡೀ ದೇಶದ ಗಮನ ಸೆಳೆದಿತ್ತು. ಆದರೆ ಈಗ ಮಂಗಳೂರಿನಿಂದ ಕಾರವಾರದವರೆಗಿನ ಕಡಲತಡಿಯ ಮೀನುಗಾರರು ಕಾರ್ಗಿಲ್‌ ಎನ್ನುವ ಒಂದು ಹೆಸರು ಕೇಳಿದರೆ ನಿದ್ದೆಯಲ್ಲೂ ಭಯ ಬೀಳುವಂತಾಗಿದೆ.ಇವರು ಕಾರ್ಗಿಲ್‌ ಯುದ್ಧದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಬದುಕಿಗೆ ಆತಂಕ ತರುತ್ತಿರುವ ಹೊಸ ಕಾರ್ಗಿಲ್‌ ಎನ್ನುವ ಮೀನು ಸಂತತಿಯಿಂದ ಸಮುದ್ರಕ್ಕೆ ತೆರಳಲು ಭಯಪಡುವಂತಾಗಿದೆ.

ಏನಿದು ಕಾರ್ಗಿಲ್‌ ಮೀನು
ತಲೆ ತಲಾಂತರಗಳಿಂದ ಮೀನುಗಾರಿಕೆ ನಡೆಸುತ್ತಿರುವ ಕರಾವಳಿ ಭಾಗದ ಮೀನುಗಾರರಿಗೆ ಇದೇ ಮೊದಲ ಬಾರಿ ಪ್ರತಿದಿನ ಟನ್‌ಗಟ್ಟಲೆ ವಿಚಿತ್ರ ಮೀನು ದೊರೆಯುತ್ತದೆ. ಇದನ್ನು ಕಾರ್ಗಿಲ್‌ ಮೀನು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಮೀನು ಅಂಡಮಾನ್‌ ದ್ವೀಪಗಳಲ್ಲಿ ಕಾಣಸಿಗುತ್ತಿತ್ತು. ಪ್ರಸಕ್ತ ವರ್ಷ ಮಂಗಳೂರು,ಗಂಗೊಳ್ಳಿ, ಮಲ್ಪೆ, ಭಟ್ಕಳದಿಂದ ಕಾರವಾರದವರೆಗೆ ಪರ್ಸಿನ್‌ ಬೋಟುಗಳಿಗೆ ಹೇರಳವಾಗಿ ಈ ಮೀನು ದೊರೆಯುತ್ತದೆ. ಕಾರ್ಗಿಲ್‌ ಮೀನಿನ ವಿಶೇಷತೆ ಎಂದರೆ ಕಪ್ಪು ಬಣ್ಣದಿಂದ ಹೊಂದಿರುವ ಇದು ದುರ್ವಾಸನೆ ಜತೆಗೆ ಮೇಲ್ಭಾಗದಲ್ಲಿ ಮುಳ್ಳು ಹೊಂದಿರುತ್ತದೆ.ವಿಚಿತ್ರ ಶಬ್ದ ಮಾಡಿ ಸಂಚರಿಸುವ ಈ ಮೀನುಗಳು ದಡಭಾಗಕ್ಕೆ ಬಂದರೆ ಉಳಿದ ಮೀನುಗಳು ಆಳಸಮುದ್ರದ ಕಡೆ ಸ್ಥಳಾಂತರಗೊಳ್ಳುತ್ತವೆ.

ಅತಿ ಉಷ್ಣತೆ ಇರುವ ಕಾರಣ ಇತರ ಮೀನುಗಳ ಜತೆಯಲ್ಲಿ ಕಾರ್ಗಿಲ್‌ ಮೀನುಗಳನ್ನು ಮಿಶ್ರ ಮಾಡಿ ತಂದಾಗ ಬಾಕಿ ಮೀನುಗಳು ಕೆಟ್ಟು ಹೋಗುತ್ತವೆ. ಕಳೆದ ಒಂದು ತಿಂಗಳಿಂದ ಸಾವಿರಾರು ಕೆ.ಜಿ ದೊರೆತಿರುವ ಕಾರ್ಗಿಲ್‌ ಮೀನಿನ ಪರಿಣಾಮದಿಂದಾಗಿ ಬಹುತೇಕ ಬಂದರುಗಳು ದುರ್ನಾತ ಬೀರುತ್ತಿವೆ.

ಮೀನುಗಾರಿಕೆಗೆ ಕಂಟಕ
ಸಾಮಾನ್ಯವಾಗಿ ಸೆಪ್ಟಂಬರ್‌ನಿಂದ ನವೆಂಬರ್‌ ತಿಂಗಳವರೆಗೆ ಮೀನುಗಾರರ ಸೀಸನ್‌ ಆಗಿದೆ. ಹೇರಳವಾಗಿ ಬಂಗುಡೆ,ಅಂಜಲ್‌,ಕೊಕ್ಕರ್‌,ಶಾಡಿ ಮುಂತಾದ ಮೀನುಗಳು ದೊರೆಯುತ್ತಿತ್ತು.ಸಮುದ್ರದಲ್ಲಿ ಮೀನಿನ ಕೊರತೆ ಆಗಿಲ್ಲ.ಆದರೆ ಕಾರ್ಗಿಲ್‌ ಮೀನುಗಳ ಆಗಮನದಿಂದ ಕರಾವಳಿ ಕಡಲಿನ ಮೀನುಗಳು ವಲಸೆ ಹೋಗಿವೆ. ಎಂದೆಂದೂ ಕಾಣದ ಮೀನಿನ ಬರಗಾಲ ಉಂಟಾಗಿದೆ.ವಾತಾವರಣದಲ್ಲಿ ಉಷ್ಣತೆ ಅಧಿಕವಾಗಿರುವುದೇ ಇವುಗಳ ಆಗಮನಕ್ಕೆ ಕಾರಣವಾಗಿದೆ. ಇದರಿಂದಾಗಿ ಪರ್ಸಿನ್‌ ಬೋಟ್‌ ಮಾಲಕರು ಕಂಗಾಲಾಗಿದ್ದಾರೆ.

ದರ ಕಡಿಮೆ
ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಈ ಮೀನು ಕಾಣಸಿಕ್ಕಿರುವುದರಿಂದ ಇವುಗಳಿಗೆ ಕಾರ್ಗಿಲ್‌ ಮೀನು ಎಂದು ಹೆಸರಿಸಲಾಗಿದೆ.ಕಾರ್ಗಿಲ್‌ ಮೀನುಗಳನ್ನು ಭಾರತದಲ್ಲಿ ಯಾರೂ ತಿನ್ನುವುದಿಲ್ಲ . ಚೀನದಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತದೆ. ಆದರೆ ದೊಡ್ಡ ದರ ದೊರೆಯುವುದಿಲ್ಲ. ದಿನದ ಖರ್ಚುಗಳಿಗೆ ಸರಿದೂಗಿಸುವ ಉದ್ದೇಶದಿಂದ ಇಷ್ಟವಿಲ್ಲದಿದ್ದರೂ ಇದೇ ಮೀನುಗಳನ್ನು ತುಂಬಿಸಿಕೊಂಡು ಬರಬೇಕಾಗಿದೆ ಎನ್ನುವುದು ಮೀನುಗಾರರ ಅಭಿಪ್ರಾಯವಾಗಿದೆ.

ಆತಂಕ ಪಡುವಂತಾಗಿದೆ
ಇದೇ ಮೊದಲಬಾರಿಗೆ ಮೊದಲ ಸೀಸನ್‌ನಲ್ಲಿ ಬಂಗುಡೆ ಕೊರತೆ ಕಂಡಿದ್ದೇವೆ. ವಾತಾವರಣದ ವ್ಯತ್ಯಯದಿಂದ ಕಾರ್ಗಿಲ್‌ ಮೀನುಗಳು ಕರಾವಳಿ ತೀರಕ್ಕೆ ಬಂದಿವೆ. ನೂರಾರು ಪರ್ಸಿನ್‌ ಬೋಟ್‌ಗಳು ಸಂಪಾದನೆಯಿಲ್ಲದೆ ಕೂಲಿಯವರು ಕೆಲಸಬಿಟ್ಟು ಹೋಗುತ್ತಿದ್ದಾರೆ.ಇದರಿಂದ ಬೋಟ್‌ ಮಾಲಕರು ಆತಂಕ ಪಡುವಂತಾಗಿದೆ. ಈ ರೀತಿ ಹಿಂದೆಂದೂ ಕಂಡಿರಲಿಲ್ಲ.
-ರಮೇಶ ಕುಂದರ್‌ ,
ಅಧ್ಯಕ್ಷರು ಪರ್ಸಿನ್‌ ಗಂಗೊಳ್ಳಿ.

-ಅರುಣ ಕುಮಾರ್‌ ಶಿರೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ