ಕಾರ್ಕಳ: ಸಂಭ್ರಮದ ಲಕ್ಷ ದೀಪೋತ್ಸವ ಸಂಪನ್ನ

Team Udayavani, Nov 20, 2019, 5:16 AM IST

ಕಾರ್ಕಳ: ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನ. 18ರಂದು ಸಂಭ್ರಮ ಸಡಗರದೊಂದಿಗೆ ಜರಗಿತು. ದೀಪೋತ್ಸವದಲ್ಲಿ ಊರ-ಪರವೂರ ಅಸಂಖ್ಯಾತ ಭಕ್ತರು ಭಾಗವಹಿಸಿ ಪುನೀತರಾದರು.

ಶ್ರೀ ವೆಂಕಟರಮಣ ದೇವರ ಮೂರ್ತಿಯನ್ನು ಪಲ್ಲಕ್ಕಿ ಹಾಗೂ ಚಪ್ಪರ ಶ್ರೀನಿವಾಸ ದೇವರನ್ನು ಬಂಗಾರದ ಮಂಟಪದಲ್ಲಿ ಕುಳ್ಳಿರಿಸಿ, ರಥಬೀದಿಯಾಗಿ ಅನಂತ ಶಯನದಿಂದ ವನಭೋಜನಕ್ಕೆ ಉತ್ಸವ ಮೂಲಕ ತೆರಳಲಾಯಿತು. ಅಲ್ಲಿ ಉಭಯ ದೇವರಿಗೆ ಪಂಚಾಮೃತಾಭಿಷೇಕ, ಮಹಾನೈವೇದ್ಯ, ಮಂಗಳಾರತಿ ನೆರವೇರಿತು.

ಸಾವಿರಾರು ಭಕ್ತರಿಂದ ಪ್ರಸಾದ ಸ್ವೀಕಾರ
ವನಭೋಜನದಲ್ಲಿ ಸಾವಿರಾರು ಭಕ್ತರು ಅನ್ನಸಂಪರ್ತಣೆ ಪ್ರಸಾದ ಸ್ವೀಕರಿಸಿದರು. ಬಳಿಕ 9 ಗಂಟೆಯ ವೇಳೆಗೆ ದೇವರ ಮೂರ್ತಿ ಪಲ್ಲಕ್ಕಿ ಹಾಗೂ ಬಂಗಾರದ ಮಂಟಪದಲ್ಲಿ ಮೆರವಣಿಗೆ ಮಣ್ಣಗೋಪುರಕ್ಕೆ ಸಾಗಿತು. ಉತ್ಸವದ ವೇಳೆ ರಥಬೀದಿಯಲ್ಲಿನ ಮನೆಯವರು ದೇವರಿಗೆ ಹಣ್ಣು ಕಾಯಿ ಅರ್ಪಿಸಿ, ಆರತಿಸೇವೆಗೈದರು. ಮುಂಜಾನೆ 2 ಗಂಟೆ ತನಕ ಸಾವಿರಾರು ಭಜಕರು ದೇವರ ದರ್ಶನ ಪಡೆದು ಕೃತಾರ್ಥರಾದರು. ಪಲ್ಲಕ್ಕಿಯಲ್ಲಿ ಸಾಗುವ ವೆಂಕಟರಮಣ ದೇವರಿಗೆ ಕುರಿಂದ ಕಟ್ಟೆಯಲ್ಲಿ ಪೂಜೆ ನೆರವೇರಿಸಲಾಯಿತು. ಬಳಿಕ ಉಭಯ ದೇವರು ಹನುಮಾನ್‌ ದೇವಸ್ಥಾನಕ್ಕೆ ಅಲ್ಲಿಂದ ವೆಂಕಟರಮಣ ದೇಗುಲಕ್ಕೆ ಆಗಮಿಸಿತು.

ಇಂದು ಅವಭೃತ ಓಕುಳಿ
ಮಂಗಳವಾರ ಅಪರಾಹ್ನ 3.30ರಿಂದ ಅವಭೃತ ಓಕುಳಿ ನಡೆಯಲಿದೆ. ಈ ವೇಳೆ ಪಟ್ಟದ ಶ್ರೀನಿವಾಸ ದೇವರು ಹಾಗೂ ಶ್ರೀ ವೆಂಕಟರಮಣ ದೇವರು ಬಂಗಾರದ ಒಂದೇ ಪಲ್ಲಕ್ಕಿಯಲ್ಲಿ ದೇವಸ್ಥಾನದಿಂದ ಅವಭೃತ ಉತ್ಸವದಲ್ಲಿ ರಾಮಸಮುದ್ರಕ್ಕೆ ತೆರಳಿ ಅವಭೃತ ಸ್ನಾನವಾಗಲಿದೆ. ಅಲ್ಲಿಂದ ದೇವರು ಅನಂತಶಯನ ಪದ್ಮಾವತಿ ದೇವಸ್ಥಾನಕ್ಕೆ ಬಂದು ಆರತಿಯಾದ ಬಳಿಕ ಉತ್ಸವದಲ್ಲಿ ವೆಂಕರಮಣ ದೇಗುಲಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ರಾತ್ರಿ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ