ಪುರಸಭೆಗೆ ಶಾಸಕ ಸುನಿಲ್‌ ಕುಮಾರ್‌ ದಿಢೀರ್‌ ಭೇಟಿ

ಕಡತಗಳ ಪರಿಶೀಲನೆ ; ಬಯೋ ಮೆಟ್ರಿಕ್‌ ಅಳವಡಿಕೆಗೆ ಸೂಚನೆ

Team Udayavani, Nov 15, 2019, 5:22 AM IST

ಕಾರ್ಕಳ: ಸರಕಾರದ ಮುಖ್ಯ ಸಚೇತಕ, ಶಾಸಕ ವಿ. ಸುನಿಲ್‌ ಕುಮಾರ್‌ ಅವರು ನ. 14ರಂದು ಕಾರ್ಕಳ ಪುರಸಭೆಗೆ ದಿಢೀರ್‌ ಭೇಟಿ ನೀಡಿ, ಸುಮಾರು ಒಂದೂವರೆ ಗಂಟೆಗಳ ಕಾಲ ಕಡತಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಗರಂ ಆದ ಶಾಸಕರು
ಪುರಸಭೆಗೆ ಎಂಟ್ರಿಕೊಟ್ಟ ತತ್‌ಕ್ಷಣ ಹಾಜರಿ ಪುಸ್ತಕ ತರಿಸಿಕೊಂಡ ಶಾಸಕರು ಸಿಬಂದಿ ಕುರಿತು ಮಾಹಿತಿ ಪಡೆದರು. ಕೆಲ ಸಿಬಂದಿ ಹಾಜರಿ ಪುಸ್ತಕದಲ್ಲಿ ಸಹಿ ಹಾಕದಿರುವ ಬಗ್ಗೆ ಪ್ರಶ್ನಿಸಿದರು. ಕರ್ತವ್ಯಕ್ಕೆ ಹಾಜರಾಗಿ ಹಾಜರಿ ಹಾಕದ ಸಿಬಂದಿಗಳ ವಿರುದ್ಧ ಗರಂ ಆದ ಶಾಸಕರು, ಮನ ಬಂದಂತೆ ಇರಲು ಇದೇನು ಮಾರುಕಟ್ಟೆಯೇ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಬಳಿಕ ಹಾಜರಿ ಪುಸ್ತಕದಲ್ಲಿ ರಜೆ ಎಂದು ನಮೂದಿಸಿದರು.

ಸಮರ್ಪಕ ಉತ್ತರ
ನಿಮ್ಮಲ್ಲಿರಬೇಕು
ಕಂದಾಯ ಅಧಿಕಾರಿ ಸಂತೋಷ್‌, ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್‌, ಸಮುದಾಯ ಸಂಘಟ ನಾಧಿಕಾರಿ ಈಶ್ವರ್‌ ನಾಯಕ್‌, ಕಚೇರಿ ಸಿಬ್ಬಂದಿ ಹೇಮಾ, ಜಗನ್ನಾಥ್‌, ರವಿ ಪೂಜಾರಿ ಹೀಗೆ ಪ್ರತಿಯೊಂದು ವಿಭಾಗದದ ಸಿಬಂದಿಯವರಲ್ಲೂ ಕಡತ ಗಳನ್ನು ತರಿಸಿ ಪರಿಶೀಲಿಸಿದರು. ನೀರು ಪೂರೈಕೆ, ಅದರಿಂದ ದೊರೆಯುವ ವಾರ್ಷಿಕ ಆದಾಯ, ತೆರಿಗೆ ಸಂಗ್ರಹ, ರೇಷನ್‌, ಬಿಪಿಎಲ್‌ ಕಾರ್ಡ್‌ದಾರರ ಮಾಹಿತಿ, ನಿವೇಶನಕ್ಕಾಗಿ ಸ್ಥಳ ಹಂಚಿಕೆ, ಸರಕಾರದ ವಿವಿಧ ಯೋಜನೆಗಳ ಮೂಲಕ ಮನೆ ನಿರ್ಮಾಣಕ್ಕಾಗಿ ಪಡೆದ ಪಲಾನುಭವಿಗಳ ಕುರಿತು ಮಾಹಿತಿ ಪಡೆದರು. ಕೆಲ ಅಧಿಕಾರಿಗಳು ಉತ್ತರಿಸಲು ತಡಕಾಡಿದಾಗ ನಿಮ್ಮ ನಿಮ್ಮ ವ್ಯಾಪ್ತಿಯ ಸಮರ್ಪಕ ಉತ್ತರ ನಿಮ್ಮಲ್ಲಿರಬೇಕೆಂದರು.

ಪುರಸಭಾ ಯೋಜನಾ ಪ್ರಾಧಿಕಾರದ ಕುರಿತು ಮಾಹಿತಿ ಪಡೆದ ಶಾಸಕರು, ಅರ್ಜಿಗಳನ್ನು ಕೇವಲ ಪ್ರಾಧಿಕಾರಕ್ಕೆ ಕಳುಹಿಸಿಕೊಟ್ಟು ಪೋಸ್ಟ್‌ ಮ್ಯಾನ್‌ ಕೆಲಸ ಮಾಡೋದಲ್ಲ. ಅದರ ಫಾಲೋ ಅಪ್‌ ನೀವೇ ಮಾಡಿ ಯಾವುದೇ ವಿಳಂಬ ನೀತಿ ಅನುಸರಿಸದೇ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು.

ಬಯೋ ಮೆಟ್ರಿಕ್‌ ಅಳವಡಿಸಲು ತಾಕೀತು
ಸರಿಯಾಗಿ 10 ಗಂಟೆಗೆ ಪುರಸಭೆಗೆ ಭೇಟಿ ನೀಡಿದ ಶಾಸಕರು ಪುರಸಭೆ ಕಿರಿಯ ಎಂಜಿನಿಯರ್‌ ಪದ್ಮನಾಭ ಹಾಗೂ ದ್ವಿತೀಯ ದರ್ಜೆ ಸಹಾಯಕ ಶಿವಕುಮಾರ್‌ ತಡವಾಗಿ ಆಗಮಿಸಿದ್ದನ್ನು ಪ್ರಶ್ನಿಸಿದರು. ಈ ವೇಳೆ ಅಧಿಕಾರಿಗಳು ಸಬೂಬು ನೀಡಲು ಮುಂದಾದಾಗ ಎಲ್ಲ ಸಿಬಂದಿ 10 ಗಂಟೆಗೆ ಪುರಸಭಾ ಕಚೇರಿಗೆ ಆಗಮಿಸಿ ಹಾಜರಿ ಹಾಕಿ ಬಳಿಕ ಕಾರ್ಯನಿರ್ವಹಣೆಗೆ ತೆರಳಬೇಕೆಂದು ಸೂಚಿಸಿದರು. ವಾರದೊಳಗಾಗಿ ಬಯೋಮೆಟ್ರಿಕ್‌ ಅಳವಡಿಸುವಂತೆಯೂ ಪರಿಸರ ಅಭಿಯಂತರ ಮದನ್‌ ಅವರಿಗೆ ತಾಕೀತು ಮಾಡಿದರು.

ಕರ್ತವ್ಯದಲ್ಲಿ ಉದಾಸೀನ ಸಲ್ಲದು
ಕಾರ್ಕಳ ಪುರಸಭೆಯಲ್ಲೇ ಕಳೆದ 5, 10 ವರ್ಷಗಳಿಂದ ಕೆಲಸಮಾಡುತ್ತಿರುವ ಅನೇಕ ಅಧಿಕಾರಿಗಳಿದ್ದೀರಿ. ಕರ್ತವ್ಯದಲ್ಲಿ ಉದಾಸೀನತೆ, ಆಲಸ್ಯ ಸಲ್ಲದು. ಪುರಸಭೆ ಸಿºಂದಿ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ 200, 500 ರೂ. ಇಸ್ಕೊಳ್ತಾರೆ, ಉದ್ದಟತನದಿಂದ ವರ್ತಿಸುತ್ತಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸಾರ್ವಜನಿಕ ವಲಯದಿಂದ ದೂರುಗಳು ಬರದಂತೆ ಚೆನ್ನಾಗಿ ಕಾರ್ಯನಿರ್ವಹಿಸಿ, ಇಲ್ಲದಿದ್ದಲ್ಲಿ ಕಠಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ದೂರು ಅರ್ಜಿ ಬಂದಾಗ 3, 4 ದಿನದೊಳಗಡೆ ಅರ್ಜಿ ವಿಲೇವಾರಿ ಆಗಬೇಕು ಮತ್ತು ಅವರಿಗೆ ಹಿಂಬರಹ ನೀಡಬೇಕು. ಮುಂದಿನ ತಿಂಗಳು ಕೂಡ ಭೇಟಿ ನೀಡುತ್ತೇನೆ ಎಂದು ಹೇಳಿ ಬಳಿಕ ತೆರಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ