ಕಾರ್ಕಳ: ತೇಜೋವಧೆ ಖಂಡಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

Team Udayavani, Feb 8, 2018, 8:15 AM IST

ಕಾರ್ಕಳ: ಕಾಂಗ್ರೆಸ್‌ನ ಹಿರಿಯ ನಾಯಕರಾದ ವೀರಪ್ಪ ಮೊಲಿ, ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಅವರನ್ನು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಹಾಗೂ ಬಿಜೆಪಿ ಮುಖಂಡರು ತೇಜೋವಧೆ ಮಾಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಹಾಗೂ ಯುವ ಕಾಂಗ್ರೆಸ್‌ ವತಿಯಿಂದ ಬುಧ ವಾರ ಬಂಡೀಮಠದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಮಾತನಾಡಿ, ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಲಿ ಹಾಗೂ ಗೋಪಾಲ ಭಂಡಾರಿ ಅವರನ್ನು ಬಿಜೆಪಿ ಮುಖಂಡರು ತೇಜೋವಧೆ ಮಾಡಿರುವುದು ಖಂಡನೀಯ. ಮೊಲಿ ಅವರು ಕಾರ್ಕಳಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ವೈಯಕ್ತಿಕ ನಿಂದನೆ ಸರಿಯಲ್ಲ. ಮೊಲಿ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್‌ ಮುಂದುವರಿಯಲಿದೆ. ಬಿಜೆಪಿಯಂತೆ ಶವದ ಮೇಲೆ ರಾಜಕೀಯ ನಡೆಸುವುದಿಲ್ಲ. ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಸುರತ್ಕಲ್‌ನ ಕಾರ್ಪೊರೇಟರ್‌ ಪ್ರತಿಭಾ ಕುಳಾ, ಕಾಂಗ್ರೆಸ್‌ ಮುಖಂಡ ಅಮೃತ್‌ ಶೆಣೈ ಮಾತನಾಡಿದರು. ಅನಂತಶಯನದಿಂದ ಬಂಡೀಮಠದವರೆಗೆ ಪ್ರತಿ ಭಟನ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

ಗೋದಾನ: ಈ ಸಂದರ್ಭ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಅವರು ಗೋಪಿನಾಥ ಪುರಾಣಿಕ್‌ ಅವರಿಗೆ ಗೋದಾನ ಮಾಡಿದರು. ಪುರಸಭೆಯ ಸದಸ್ಯ ಶುಭದ ರಾವ್‌ ಪ್ರಸ್ತಾವನೆಗೈದರು. ಕಾಂಗ್ರೆಸ್‌ನ ಪ್ರಮುಖರಾದ ಸಂತೋಷ್‌ ಶೆಟ್ಟಿ, ಶೈಲೇಶ್‌ ಸುವರ್ಣ, ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಗೀತಾ ವಾಗೆ, ಜ್ಯೋತಿ ಹೆಬ್ಟಾರ್‌, ಡಾ| ವರ್ಷಾ ಶೈಲೇಶ್‌ ಸುವರ್ಣ, ಯುವ ಮೋರ್ಚಾದ ವಿಶ್ವಾಸ್‌ ಅಮೀನ್‌, ದೀಪಕ್‌ ಕೋಟ್ಯಾನ್‌, ಪುರಸಭೆಯ ಸದಸ್ಯರಾದ ಶರೀಫ್, ಪ್ರತಿಮಾ, ಅಶಕ್‌, ರೆಹಮತ್‌ ಶೇಖ್‌ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ