ಮಳೆಗಾಲದ ಋತುವಿಗೆ ಕೊಂಕಣ ರೈಲ್ವೇ ಸಿದ್ಧ

Team Udayavani, May 26, 2019, 6:13 AM IST

ಉಡುಪಿ: ಬೇಸಗೆ ಋತುವಿನಲ್ಲಿ ವಿಶೇಷ ಸಾರಿಗೆ ವ್ಯವಸ್ಥೆಗೊಳಿಸಿದ್ದ ಕೊಂಕಣ ರೈಲ್ವೇ ಈಗ ಮಳೆಗಾಲದ ಋತುವಿಗೆ ಸನ್ನದ್ಧಗೊಂಡಿದೆ. ಜೂ. 10ರಿಂದ ಅಕ್ಟೋಬರ್‌ 31ರವರೆಗೆ ಮಳೆಗಾಲದ ವೇಳಾಪಟ್ಟಿ ಜಾರಿಗೆ ಬರಲಿದೆ.

ಹಿಂದಿನ ಬಾರಿ ಬೇಸಗೆಯಲ್ಲಿ 146 ವಿಶೇಷ ಟ್ರಿಪ್‌ಗ್ಳಲ್ಲಿ ಸಂಚರಿಸಿದ್ದರೆ ಈ ಬಾರಿ 196 ಬೇಸಗೆ ವಿಶೇಷ ರೈಲುಗಳನ್ನು ಹೊರಡಿಸಿತ್ತು. ಮುಂದಿನ ಗಣೇಶೋತ್ಸವದ ಅವಧಿಯಲ್ಲಿ 166 ವಿಶೇಷ ಟ್ರಿಪ್‌ಗ್ಳನ್ನು ಹೊರಡಿಸಲು ಈಗಾಗಲೇ ಘೋಷಿಸಲಾಗಿದೆ.

ರೋಹಾ ಸಮೀಪದ ಕೊಲಾಡ್‌ನಿಂದ ಮಂಗಳೂರು ತೋಕೂರುವರೆಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಸುರಕ್ಷಾ ಕ್ರಮ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದ ಅವಧಿಯಲ್ಲಿ ಸುಮಾರು 630 ಸಿಬಂದಿ ರೈಲ್ವೇ ಮಾರ್ಗ ದಲ್ಲಿ ಗಸ್ತು ತಿರುಗಲಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ 24 ಗಂಟೆ ಗಸ್ತು ತಿರುಗಲು ಇತರ ವಾಚ್‌ಮನ್‌ ನಿಯೋಜಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಇಕ್ಸವೇಟರ್‌ಗಳನ್ನು ಸಿದ್ಧಪಡಿಸಿಟ್ಟು ಕೊಳ್ಳಲಾಗಿದೆ. ಇಂತಹ ಸ್ಥಳಗಳಲ್ಲಿ ವೇಗ ಮಿತಿಯನ್ನು ಹಾಕಲಾಗಿದೆ.

ಭಾರೀ ಮಳೆಯಿಂದ ದಾರಿ ತೋರದೆ ಇದ್ದರೆ ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸಲು ಚಾಲಕರಿಗೆ ಸೂಚನೆ ನೀಡಲಾಗಿದೆ. ಎಆರ್‌ಟಿ (ಅಪಘಾತ ಪರಿಹಾರ ರೈಲು) ಜತೆ ರತ್ನಗಿರಿ (ಮಹಾರಾಷ್ಟ್ರ) ಮತ್ತು ವೆರ್ನಾದಲ್ಲಿ (ಗೋವಾ)ದಲ್ಲಿ ಎಆರ್‌ಎಂವಿಯೊಂದಿಗೆ (ಅಪಘಾತ ಪರಿಹಾರ ವೈದ್ಯಕೀಯ ವಾಹನ) ಶಸ್ತ್ರ ಚಿಕಿತ್ಸಾ ಕೊಠಡಿ ಮತ್ತು ತುರ್ತು ವೈದ್ಯಕೀಯ ಸಹಾಯಕ ಕೇಂದ್ರ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.

ಎಲ್ಲ ಸುರಕ್ಷಾ ಸಿಬಂದಿಗಳು ಕೇಂದ್ರ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಸಾಧಿಸಲು ಮೊಬೈಲ್ ಫೋನ್‌, ಚಾಲಕರು, ಗಾರ್ಡ್‌ಗಳಿಗೆ ವಾಕಿಟಾಕಿ ನೀಡಲಾಗಿದೆ. ಎಆರ್‌ಎಂವಿಯಲ್ಲಿರುವವರಿಗೆ ತುರ್ತು ಸೇವೆಗಳಿಗೆ ಆದೇಶ ನೀಡಿದಾಗ ಸಂಪರ್ಕಿ ಸಲು ಸೆಟ್ಲೈಟ್ ದೂರವಾಣಿ ಸಂಪರ್ಕ ಒದಗಿಸಲಾಗಿದೆ. ಎಲ್ಲ ಮುಖ್ಯ ಸೂಚನ ಸ್ಥಳಗಳಲ್ಲಿ ಸಿಗ್ನಲ್ ದೃಶ್ಯ ಹೆಚ್ಚು ಸ್ಪಷ್ಟವಾಗಿ ಕಾಣುವಂತಾಗಲು ಎಲ್ಇಡಿ ಬೆಳಕು ಹಾಕಲಾಗಿದೆ.

ಬೇಲಾಪುರ, ರತ್ನಗಿರಿ, ಮಡಗಾಂವ್‌ನಲ್ಲಿ 24×7 ಕಾರ್ಯಾಚರಿಸುವ ಮೂರು ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ವೆಬ್‌ಸೈಟ್ www.konkanrailway.com ಮೂಲಕ ಅಥವಾ 139 ಸಂಖ್ಯೆಗೆ ಕರೆ ಮಾಡಿ ರೈಲಿನ ಚಲನವಲನವನ್ನು ತಿಳಿದುಕೊಳ್ಳಬಹುದು.

ಮಳೆಗಾಲದ ವೇಳಾಪಟ್ಟಿ ಘೋಷಣೆ ಯಾಗುವ ಮೊದಲು ಟಿಕೆಟ್ ಪಡೆದು ಕೊಂಡವರು ಈ ಅವಧಿಯಲ್ಲಿ ರೈಲಿನ ವೇಳೆ ಮುಂಚಿತವಾಗಿ ತಿಳಿದುಕೊಳ್ಳಬೇಕು. ಪ್ರಯಾಣಿಕರು ಆನ್‌ಲೈನ್‌ನಲ್ಲಿ ಕೊಂಕಣ ರೈಲ್ವೇವೆಬ್‌ಸೈಟ್ ಮೂಲಕ ಅಥವಾ ಕೆಆರ್‌ಸಿಎಲ್ ಆ್ಯಪ್‌ ಡೌನ್‌ಲೋಡ್‌ ಮಾಡಿಮಾಹಿತಿ ಪಡೆಯಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ