ಕುಂದಾಪುರ : ಪಾದ ತೊಳೆಯುವ ದಿನಾಚರಣೆ

Team Udayavani, Apr 20, 2019, 6:55 AM IST

ಕುಂದಾಪುರ: ಇಲ್ಲಿನ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸು ಕ್ರಿಸ್ತರ ಕೊನೆಯ ಭೋಜನದ ಸಂಭ್ರಮ ಮತ್ತು ಶಿಷ್ಯರ ಪಾದ ತೊಳೆಯುವ ಧಾರ್ಮಿಕ ಕ್ರಿಯೆಗಳು ಗುರುವಾರ ನಡೆಯಿತು.

ಪ್ರಧಾನ ಧರ್ಮಗುರು ವಂ| ಸ್ಟಾನಿ ತಾವ್ರೊ ಅವರು, ವಿಶ್ವಾಸಿಗರ ಪಾದ ತೊಳೆಯುವ ಕ್ರಿಯೆಯನ್ನು ನೆರವೇರಿಸಿಕೊಟ್ಟು ಮಾತನಾಡಿ, ಈ ದೀನ ಯೇಸುವು ಶಿಷ್ಯರೊಟ್ಟಿಗೆ ಕೊನೆಯ ಭೋಜನವನ್ನು ಏರ್ಪಡಿಸಿ ಪರಮ ಪ್ರಸಾದದ ಸಂಸ್ಕಾರವನ್ನು ಸ್ಥಾಪಿಸಿದರು. ಯೇಸು ಹೇಳಿದಂತೆ ಕ್ರೈಸ್ತರು ಇಗರ್ಜಿಯಲ್ಲಿ ಪ್ರತಿ ದಿನ ಮತ್ತು ಕಡ್ಡಾಯವಾಗಿ ರವಿವಾರ ಅರ್ಪಿಸುವ ಪೂಜಾ ಬಲಿದಾನವೇ ಇದಾಗಿದೆ. ಅದನ್ನು ಪಾಲಿಸಿಕೊಂಡು ಹೋಗಲು ಧರ್ಮರಾಜ್ಯವನ್ನು ಮುಂದೆ ನಡೆಸಿಕೊಂಡು ಹೋಗಲು ತನ್ನ ಶಿಷ್ಯರಿಗೆ ಧರ್ಮಗುರುಗಳ ಸಂಸ್ಕಾರವನ್ನು ನೀಡಿದರು ಎಂದವರು ಹೇಳಿದರು.

ಪೆರಂಪಳ್ಳಿ ಟ್ರಿನಿಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ| ಅನಿಲ್‌ ಡಿಕೋಸ್ತಾ ಮಾತನಾಡಿ, ಯೇಸುವು ಕೊನೆಯ ಗುರುವಾರ ರೊಟ್ಟಿಯನ್ನು ಆಶಿರ್ವದಿಸಿದರು, ಅನಂತರ ಅದನ್ನು ಮುರಿದರು, ಮತ್ತು ಶಿಷ್ಯರಿಗೆ ಹಂಚಿಕೊಟ್ಟರು, ಯಾಕೆಂದರೆ ಮರುದಿನ ಪವಿತ್ರ ಶುಕ್ರವಾರದಂದು ನಾನು ನಿಮಗಾಗಿ ಪ್ರಪಂಚದ ಪಾಪಗಳಿಗಾಗಿ ಹಿಂಸೆ, ಅವಮಾನ ಅನುಭವಿಸಿ ನನ್ನ ಬಲಿಯನ್ನು ಅರ್ಪಿಸು ವೇನು, ಎಂದಿದ್ದರು. ನನ್ನ ರಕ್ತವು ನಿಮ್ಮ ಪಾಪಗಳನ್ನು ತೊಳೆದು ಹಾಕುವುವು, ನಿಮ್ಮ ಅತ್ಮಕ್ಕೆ ನನ್ನ ಶರೀರ ಪೋಷಣೆ ಮಾಡುವ ರೊಟ್ಟಿಯಾಗುವುದು, ಇದುವೇ “ಪರಮ ಪ್ರಸಾದ’ ಎಂದರು.

ಕುಂದಾಪುರ ಸಂತ ಮೇರಿಸ್‌ ಪಿ.ಯು. ಕಾಲೇಜಿನ ಪ್ರಾಂಶುಪಾಲ, ಧರ್ಮಗುರು ವಂ| ಪ್ರವೀಣ್‌ ಅಮ್ರತ್‌ ಮಾರ್ಟಿಸ್‌, ಸಹಾಯಕ ಧರ್ಮಗುರು ವಂ| ರೋಯ್‌ ಲೋಬೊ ಬಲಿದಾನದಲ್ಲಿ ಭಾಗಿಯಾದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ