ಮಾಳ್ಸಾಲು: ಹೊಳೆ ದಂಡೆ ಏರಿಸಲು ಬೇಡಿಕೆ

Team Udayavani, Jul 23, 2019, 5:36 AM IST

ಕುಂದಾಪುರ: ತಲ್ಲೂರು ಗ್ರಾಮದ ಉಪ್ಪಿನಕುದ್ರು ಸಮೀಪದ ಬೇಡರಕೊಟ್ಟಿಗೆಯ ಮಾಳ್ಸಾಲು ಎನ್ನುವಲ್ಲಿ ಹತ್ತಾರು ಎಕರೆ ಪ್ರದೇಶ ಗದ್ದೆಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಹೊಳೆ ದಂಡೆಯನ್ನು ಮತ್ತಷ್ಟು ಏರಿಸಬೇಕು ಎನ್ನುವ ಬೇಡಿಕೆ ಇಲ್ಲಿನ ರೈತರಿಂದ ಕೇಳಿ ಬಂದಿದೆ.

ಉಪ್ಪಿನಕುದ್ರುವಿನ ಶಾಲೆಯಿಂದ ಬೇಡರ ಕೊಟ್ಟಿಗೆಗೆ ಹೋಗುವ ರಸ್ತೆಯಲ್ಲಿ ಈ ಮಾಳ್ಸಾಲು ಎನ್ನುವ ಊರಿದ್ದು, ಇಲ್ಲಿ 20 ಎಕರೆಗೂ ಮಿಕ್ಕಿ ಪ್ರದೇಶದಲ್ಲಿ ಸುಮಾರು 25 ರಿಂದ 30 ರೈತ ಕುಟುಂಬಗಳು ಗದ್ದೆ ಬೇಸಾಯ ಮಾಡುತ್ತಾರೆ. ಪ್ರತಿ ವರ್ಷ ಇಲ್ಲಿ ಉಪ್ಪು ನೀರಿನದ್ದೆ ಸಮಸ್ಯೆಯಿಂದ ಭತ್ತದ ಕೃಷಿಗೆ ತೊಂದರೆಯಾಗುತ್ತಿದೆ.

ಸಮಸ್ಯೆಯೇನು?

ಈಗ ಇಲ್ಲಿರುವ ಗದ್ದೆಗಳ ಮಧ್ಯೆ ಹಾದು ಹೋಗುತ್ತಿರುವ ಈ ಸಣ್ಣ ಹೊಳೆಯಲ್ಲಿ ಹೂಳು ಕೂಡ ತುಂಬಿ, ಸ್ವಲ್ಪ ನೀರಿದ್ದರೂ ಕೂಡ ತುಂಬಿ ಹರಿಯುತ್ತದೆ. ಭಾರೀ ಮಳೆಯಾದರಂತೂ, ನೀರು ಮೈದುಂಬಿ ಗದ್ದೆಗಳಲ್ಲಿ ನೆಟ್ಟ ನೇಜಿಯು ಮುಳುಗಡೆಯಾಗುತ್ತದೆ. ದಂಡೆ ಏರಿಸದಿದ್ದರೆ ಇಲ್ಲಿನ ಹತ್ತಾರು ಎಕರೆ ಗದ್ದೆಗಳು ನೆರೆ ಬಂದಲ್ಲಿ ಮುಳುಗಡೆಯಾಗುವ ಭೀತಿ ಆವರಿಸಿದೆ. ಇದಲ್ಲದೆ ಬೇಸಗೆಯಲ್ಲಿ ಇಲ್ಲಿನ ರೈತರು ಎದುರಿಸುತ್ತಿರುವ ಪ್ರಮುಖವಾದ ಉಪ್ಪು ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ.

ಪ್ರಯೋಜನವೇನು?

ಇಲ್ಲಿ ಹೊಳೆ ದಂಡೆ ಏರಿಸಿದಲ್ಲಿ ಬೇಸಿಗೆಯಲ್ಲಿ ಗದ್ದೆಗಳಿಗೆ ಉಪ್ಪು ನೀರು ಪ್ರವೇಶಿಸಲು ಸಾಧ್ಯವಿಲ್ಲದಂತಾಗುತ್ತದೆ. ಇದಲ್ಲದೆ ಭತ್ತದ ಕೃಷಿ ಮುಗಿದ ನಂತರ ಉಪ ಬೆಳೆಗಳಾದ ತೊಗರಿ, ಅವರೆ ಇತ್ಯಾದಿ ಕೃಷಿ ಮಾಡಲು ಕೂಡ ಅನುಕೂಲವಾಗಲಿದೆ ಎನ್ನುವುದು ಇಲ್ಲಿನ ರೈತರ ಅಭಿಪ್ರಾಯ.

ಈ ಸಂಬಂಧ ತಲ್ಲೂರು ಗ್ರಾ.ಪಂ.ಗೂ ಇಲ್ಲಿನ ರೈತರೆಲ್ಲ ಮನವಿ ಸಲ್ಲಿಸಿದ್ದು, ಕೃಷಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಇಲ್ಲಿನ ನದಿ ದಂಡೆ ಏರಿಸುವ ಸಂಬಂಧ ಮನವಿ ಸಲ್ಲಿಸಿ, ಬೇಡಿಕೆ ಇಟ್ಟಿದ್ದರು.

ಕಿಂಡಿ ಅಣೆಕಟ್ಟಿದ್ದರೂ ನಿರ್ವಹಣೆಯಿಲ್ಲ

ಇಲ್ಲಿಗೆ ಸಮೀಪದ ಬೇಡರಕೊಟ್ಟಿಗೆ ಯಲ್ಲೊಂದು ಉಪ್ಪು ನೀರು ಹಾಗೂ ಸಿಹಿ ನೀರು ಬೇರ್ಪಡಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯಿಂದ ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡ ಸಣ್ಣ ಕಿಂಡಿ ಅಣೆಕಟ್ಟು ಇದೆ. ಆದರೆ ಅದು ನಿರ್ವಹಣೆಯಿಲ್ಲದೆ ಉಪ್ಪಿನಕುದ್ರು, ಬೇಡರಕೊಟ್ಟಿಗೆ ಸುತ್ತಮುತ್ತಲಿನ ಗದ್ದೆ ಪ್ರದೇಶಗಳಿಗೆ ಸಮಸ್ಯೆಯಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಆ ಡ್ಯಾಂನ ಹಲಗೆಗಳು ಕೆಟ್ಟು ಹೋಗಿದ್ದು, ಈಗ ಹಲಗೆ ಹಾಕುವ ವ್ಯವಸ್ಥೆಯೇ ಇಲ್ಲದೆ, ಡ್ಯಾಂ ಇದ್ದರೂ, ಇಲ್ಲದಂತಾಗಿದೆ.
ಹೊಳೆ ದಂಡೆ ಏರಿಸಲಿ

ಪ್ರತಿ ವರ್ಷ ವ್ಯವಸಾಯ ಮಾಡುವಾಗ ಉಪ್ಪು ನೀರಿನ ಸಮಸ್ಯೆ ಎದುರಾಗುತ್ತದೆ. ಕೆಲವೊಮ್ಮೆ ಕಟಾವಿಗೆ ಬಂದ ಭತ್ತದ ಪೈರು ಕೂಡ ಸುಟ್ಟು ಹೋದ ನಿದರ್ಶನಗಳು ಇವೆ. ಇದಕ್ಕೆ ಇಲ್ಲಿನ ಹೊಳೆ ದಂಡೆ ಏರಿಸಿದರೆ ಗದ್ದೆ ಬೇಸಾಯ ಮಾಡುವ ರೈತರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಕೆಲ ವರ್ಷಗಳ ಹಿಂದೆ ನಾವೇ ರೈತರೆಲ್ಲ ಸೇರಿ ಕಟ್ಟದ ರೀತಿ ಮಾಡಿ, ವ್ಯವಸಾಯ ಮಾಡುತ್ತಿದ್ದೇವೆ. ಪಂಚಾಯತ್‌ನಿಂದಲೂ ನಮಗೆ ಸಹಕಾರ ಸಿಕ್ಕರೆ ಅನುಕೂಲವಾದೀತು.

– ನಾಗರಾಜ್‌ ನಾಯ್ಕ,ಕೃಷಿಕರು

ರಿಂಗ್‌ ರೋಡ್‌ಗೆ ಬೇಡಿಕೆ ಸಲ್ಲಿಸಿದ್ದೇವೆ

ಉಪ್ಪಿನಕುದ್ರು ಭಾಗದ ಅನೇಕ ಕಡೆಗಳಲ್ಲಿ ಕೃಷಿಗೆ ಉಪ್ಪು ನೀರಿನ ಸಮಸ್ಯೆಯಾಗುತ್ತಿದೆ. ಇದಕ್ಕೆ ನಾವು ಈ ಹಿಂದೆಯೇ ಈ ಭಾಗಕ್ಕೆ ರಿಂಗ್‌ ರೋಡ್‌ ನಿರ್ಮಾಣಕ್ಕೆ ಸಂಬಂಧಪಟ್ಟವರಿಗೆ ಬೇಡಿಕೆ ಸಲ್ಲಿಸಿದ್ದೇವೆ. ರಿಂಗ್‌ ರೋಡ್‌ ಆದಲ್ಲಿ ಅಲ್ಲಲ್ಲಿ ಈ ರೀತಿಯ ಹೊಳೆ ದಂಡೆ ಏರಿಸಲು ಅನುಕೂಲವಾಗಲಿದೆ. ಅದಲ್ಲದೆ ಉಪ್ಪು ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ. ಬೇಡರಕೊಟ್ಟಿಗೆಯಲ್ಲಿ ಸಣ್ಣ ಕಿಂಡಿ ಅಣೆಕಟ್ಟಿದ್ದರೂ, ಅದು ಸರಿಯಾದ ನಿರ್ವಹಣೆಯಿಲ್ಲದೆ ಸಮಸ್ಯೆಯಾಗುತ್ತಿದೆ.

– ಆನಂದ ಬಿಲ್ಲವ, ಅಧ್ಯಕ್ಷರು, ತಲ್ಲೂರು ಗ್ರಾ.ಪಂ.

– ಪ್ರಶಾಂತ್‌ ಪಾದೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ