ಪ್ರಧಾನಿ ಕಚೇರಿಗೆ ಬರೆದ ಪತ್ರ ಕೆಲಸ ಮಾಡಿಸಿಕೊಟ್ಟಿತು

Team Udayavani, Apr 17, 2018, 8:55 AM IST

ಪಡುಬಿದ್ರಿ: ಹಿರಿಯ ನಾಗರಿಕರ ಸಹಾಯಕ್ಕೆ ಬಾರದ ಸರಕಾರಿ ವ್ಯವಸ್ಥೆಗೆ ಸಡ್ಡು ಹೊಡೆದ ಹೆಜಮಾಡಿ ಗುಡ್ಡೆ ಅಂಗಡಿಯ ಹಿರಿಯರೊಬ್ಬರು ನೇರ ಪ್ರಧಾನಿ ಕಚೇರಿಗೇ ಪತ್ರ ಬರೆದು ತಿದ್ದುಪಡಿ ಸಹಿತ ಆಧಾರ್‌ ಕಾರ್ಡ್‌ ಪಡೆದುಕೊಂಡು ಗೆದ್ದಿದ್ದಾರೆ. ಆಧಾರ್‌ ಕಾರ್ಡ್‌ ಪಡೆಯಲು ಆಗುತ್ತಿರುವ ತೊಂದರೆಗಳನ್ನು ನಿವೇದಿಸಿಕೊಂಡಿದ್ದ ಹೆಜಮಾಡಿ ಗುಡ್ಡೆಅಂಗಡಿ ನಟ್ಟಿ ಹೌಸ್‌ನ ಮೋಹನ್‌ ಕೆ. ಸುವರ್ಣ (77) ಅವರಿಗೆ ಆಧಾರ್‌ ಕಾರ್ಡ್‌ ಮನೆ ಬಾಗಿಲಿಗೆ ಬಂದು ತಲುಪಿದೆ. ಪ್ರಧಾನಿ ಕಚೇರಿಯ ಅವಿರತ ಫಾಲೋ ಅಪ್‌ ನಿಂದಾಗಿ ಇದು ಸಾಧ್ಯವಾಗಿದೆ.

ಬಸವಳಿದಿದ್ದ ಮೋಹನ್‌ ಸುವರ್ಣ

ಮೋಹನ್‌ ಸುವರ್ಣ ಅವರು ಮಹಾರಾಷ್ಟ್ರ ಎಲೆಕ್ಟ್ರಿಸಿಟಿ ಬೋರ್ಡ್‌ನ (MSEB) ನಿವೃತ್ತ ಸರಕಾರಿ ನೌಕರ. ನಿವೃತ್ತಿಯ ಬಳಿಕವೂ ಮುಂಬಯಿಯಲ್ಲಿ ನೆಲೆಸಿದ್ದ ಅವರು ಅಲ್ಲೇ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದರು. ಐದು ವರ್ಷಗಳ ಹಿಂದೆ ಹೆಜಮಾಡಿಗೆ ಬಂದು ನೆಲೆಸಿದ ಬಳಿಕ ಆಧಾರ್‌ ಕಾರ್ಡ್‌ನಲ್ಲಿ ಹೊಸ ವಿಳಾಸ, ಹೊಸ ಮೊಬೈಲ್‌ ಸಂಖ್ಯೆ ದಾಖಲು ಮತ್ತು ಜೋಡಣೆಗಾಗಿ ಕಾಪುವಿನ ನೆಮ್ಮದಿ ಕೇಂದ್ರ, ಕಾರ್ನಾಡ್‌ ಅಂಚೆ ಕಚೇರಿ ಸಹಿತ ಹಲವೆಡೆ ಪ್ರಯತ್ನಿಸಿದ್ದರು. ಬಸ್‌ ಹಿಡಿದು ಈ ಸರಕಾರಿ ಕಚೇರಿಗಳ ಸುತ್ತಾಟದಲ್ಲಿ ಬಸವಳಿದಿದ್ದರು. ಹಿಂದಿಗಿಂತ ಹಲವು ಪಟ್ಟು ಬೆಳೆದಿರುವ ಉಡುಪಿಯ ಬನ್ನಂಜೆಯಲ್ಲಿರುವ ಆಧಾರ್‌ ಕೇಂದ್ರವನ್ನು ತಲುಪಿ ಅಲ್ಲಿಯೂ ಸರತಿಯಲ್ಲಿ ಕಾದಿದ್ದರು.

ಪ್ರಧಾನಿ ಕಚೇರಿ ಉತ್ತರ
ಆಧಾರ್‌ ಪರಿಷ್ಕರಣೆಗೆ ಆಗುತ್ತಿರುವ ಸಮಸ್ಯೆಯನ್ನು ನಿವೇದಿಸಿ ಪ್ರಧಾನಿ ಕಚೇರಿಗೆ 2017ರ ಸೆ. 12ರಂದು ಪತ್ರ ಬರೆದಿದ್ದರು. ಪ್ರಧಾನಿ ಕಚೇರಿಯು ಕೇವಲ ಹತ್ತು ದಿನಗಳಲ್ಲಿ ಪ್ರತ್ಯುತ್ತರವನ್ನು ಅವರಿಗೆ ರವಾನಿಸಿತ್ತು, ಸೂಕ್ತ ಕ್ರಮಕ್ಕಾಗಿ ಸಂಬಂಧಿತರಿಗೆ ಪತ್ರ ರವಾನಿಸಲಾಗಿದೆ ಎಂದು ಮಾಹಿತಿ ನೀಡಿತ್ತು.

ಬೆಂಗಳೂರು ಕಚೇರಿಯಿಂದ ಪತ್ರ
ಈ ನಡುವೆ 2018ರ ಮಾ. 22ರಂದು ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ ಸುವರ್ಣರಿಗೆ ಪತ್ರವೊಂದು ರವಾನೆಯಾಗಿ, ಅವರ ಮೊಬೈಲ್‌ ಸಂಖ್ಯೆಯನ್ನು ಮಾ. 21ರಂದು ಆಧಾರ್‌ನೊಂದಿಗೆ ಜೋಡಿಸಲಾಗಿದೆ ಎಂಬ ಮಾಹಿತಿ ತಲುಪಿತ್ತು. ಕೈ ಬೆರಳಚ್ಚು ಹೊಂದಾಣಿಕೆ, ಇನ್ನಿತರ ಕ್ರಮಗಳಿಗಾಗಿ ಉಡುಪಿ ಬನ್ನಂಜೆಯ ಆಧಾರ್‌ ಕೇಂದ್ರದ ಅಧಿಕಾರಿಗಳು ಸಂಪರ್ಕಿಸಲಿರುವುದಾಗಿ ಬೆಂಗಳೂರಿನಿಂದ ದೂರವಾಣಿಯ ಮೂಲಕ ತಿಳಿಸಿದ್ದರು.

ತಿಂಗಳಿಂದೀಚೆಗೆ ನಡೆದದ್ದು ಅಚ್ಚರಿ
ಈಚೆಗೆ ಒಂದು ತಿಂಗಳ ಹಿಂದೆ ಬನ್ನಂಜೆ ಆಧಾರ್‌ ಕೇಂದ್ರದ ಅಧಿಕಾರಿಗಳು ಅಗತ್ಯ ಉಪಕರಣಗಳೊಂದಿಗೆ ಸುವರ್ಣ ಅವರ ಮನೆಗೆ ಆಗಮಿಸಿದ್ದರು. ಸುವರ್ಣ ಮತ್ತು ಅವರ ಪತ್ನಿಯ ಬೆರಳಚ್ಚು ಹೊಂದಾಣಿಕೆ ಮೊದಲಾದ ಉಪಕ್ರಮಗಳನ್ನು ಪೂರೈಸಿ ತೆರಳಿದ್ದರು. ಪತ್ನಿ ವಸಂತಿ ಸುವರ್ಣ (65) ವಿಳಾಸ ಬದಲಾವಣೆ ಮತ್ತು ಮೊಬೈಲ್‌ ಸಂಖ್ಯೆ ಜೋಡಣೆಯೊಂದಿಗೆ 15 ದಿನಗಳ ಹಿಂದೆ ಹೊಸ ಆಧಾರ್‌ ಕಾರ್ಡ್‌ ಪಡೆದಿದ್ದರು. ಇಂದು (ಸೋಮವಾರ) ಮೋಹನ ಕೆ. ಸುವರ್ಣ ಅವರಿಗೂ ನೂತನ ಆಧಾರ್‌ ಕಾರ್ಡ್‌ ತಲುಪಿದೆ.

— ಆರಾಮ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ