ಮಾ. 31: ವಿಜಯ ಸಂಕಲ್ಪ ಸಮಾವೇಶ
Team Udayavani, Mar 29, 2019, 6:12 AM IST
ಕಾರ್ಕಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಮಾ. 31ರಂದು ವಿಜಯ ಸಂಕಲ್ಪ ಸಮಾವೇಶ ನಡೆಯಲಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಮಾ. 28ರಂದು ಶಾಸಕರ ಕಚೇರಿ ವಿಕಾಸದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಸಮಾವೇಶದ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಮಾವೇಶ ಪ್ರಾರಂಭಗೊಳ್ಳುವುದು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶದಲ್ಲಿ ತಾಲೂಕಿನ 220 ಬೂತ್‌ಗಳಿಂದ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳುವರು. ಅಭ್ಯರ್ಥಿ ಶೋಭಾ ಕರಂದ್ಲಾಜೆ, ಯುವಮೋರ್ಚಾ, ಮಹಿಳಾ ಮೋರ್ಚಾದ ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಜನಪ್ರತಿನಿಧಿ, ಪಕ್ಷದ ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಬಿಜೆಪಿ ಪರ ವಾತಾವರಣ
6 ಮಹಾಶಕ್ತಿ ಕೇಂದ್ರಗಳಲ್ಲಿ ಈಗಾಗಲೇ ಕಾರ್ಯಕರ್ತರ ಸಭೆ, 33 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೂರ್ವ ತಯಾರಿ ಸಭೆ ಈಗಾಗಲೇ ಮುಕ್ತಾಯವಾಗಿದೆ. ಈ ಬಾರಿಯೂ ಮೋದಿ, ಬಿಜೆಪಿ ಪರವಾತಾ ವರಣ ಕ್ಷೆತ್ರದಾದ್ಯಂತ ಕಂಡುಬರುತ್ತಿದ್ದು, ರಾಜ್ಯ ಸಮ್ಮಿಶ್ರ ಸರಕಾರದ ವೈಫಲ್ಯದ ಬಗ್ಗೆ ಜನರು ಅಸಮಾಧಾನ ಹೊಂದಿದ್ದಾರೆ ಎಂದು ಅವರು ಹೇಳಿದರು.
ಎ. 2: ಪ್ರಬುದ್ಧರ ಗೋಷ್ಠಿ
ಎ. 2ರಂದು ಕಾರ್ಕಳದ ಶಿವತಿಕೆರೆ ಸವಿತಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ 5ರಿಂದ ಪ್ರಬುದ್ಧರ ಗೋಷ್ಠಿ, ಸಂವಾದ ನಡೆಯಲಿದೆ. ಶಾಸಕ ಸುರೇಶ್ ಕುಮಾರ್ ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದು, ವೈದ್ಯರು, ವಕೀಲರು, ನಿವೃತ್ತ ಸೈನಿಕರು, ವಿವಿಧ ದೇವಸ್ಥಾನಗಳ ಆಡಳಿತ ಸಮಿತಿ ಪದಾಧಿಕಾರಿ, ಉದ್ಯಮಿಗಳನ್ನು ಆಹ್ವಾನಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಅನಂತಕೃಷ್ಣ ಶೆಣೈ, ಬಿಜೆಪಿ ವಕ್ತಾರ ಹರೀಶ್ ಶೆಣೈ, ಕಾರ್ಯದರ್ಶಿ ನವೀನ್ ನಾಯಕ್, ಬೈಲೂರು ಶಕ್ತಿಕೇಂದ್ರದ ಅಧ್ಯಕ್ಷ ಅಂತೋನಿ ಡಿ’ಸೋಜಾ ಉಪಸ್ಥಿತರಿದ್ದರು.