ಗರಿಷ್ಠ ಪ್ರದೇಶ ತಲುಪಿದ ನೀರು: ದೂರಿನ ಪ್ರಮಾಣವೂ ಇಳಿಕೆ

Team Udayavani, May 18, 2019, 6:00 AM IST

ಶ್ರೀಕೃಷ್ಣ ಮಠದ ಆನೆ ಸುಭದ್ರೆಗೆ ಸ್ನಾನ ಮಾಡಿಸಲಾಯಿತು.

ಉಡುಪಿ: ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತಿದೆ. ಬಜೆ ಡ್ಯಾಂ ಬಳಿ ಡ್ರಜ್ಜಿಂಗ್‌ ಹಾಗೂ ನದಿಯಲ್ಲಿನ ಕಲ್ಲು, ಹೂಳಿನ ತಡೆ ತೆರವಿನಿಂದಾಗಿ ನೀರಿನ ಹರಿವು ಮತ್ತು ಸಂಗ್ರಹ ಹೆಚ್ಚಾಗಿದ್ದು ನಗರದ ಬೇಡಿಕೆಯನ್ನು ಒಂದು ಹಂತದವರೆಗೆ ಪೂರೈಸಲು ಸಾಧ್ಯವಾಗಿದೆ.

ಒಟ್ಟು 6 ವಿಭಾಗಗಳನ್ನಾಗಿ ನಗರವನ್ನು ವಿಂಗಡಿಸಿ ಒಂದೊಂದು ನಗರಕ್ಕೆ ಒಂದೊಂದು ದಿನ ನೀರು ಪೂರೈಸಲಾಗುತ್ತಿದೆ. ಕೆಲವು ಪ್ರದೇಶಗಳಿಗೆ ಅರ್ಧ ದಿನಕ್ಕೂ ಅಧಿಕ ಸಮಯ ನೀರು ಪೂರೈಕೆಯಾಗುತ್ತಿದೆ. ಇದರಿಂದಾಗಿ ನೀರು ಸಂಗ್ರಹಿಸಡಲು ಅನುಕೂಲವಾಗಿದೆ. ಎತ್ತರದ ಪ್ರದೇಶಗಳಿರುವ ವಿಭಾಗಗಳಲ್ಲಿ 8ರಿಂದ 12 ಗಂಟೆಯವರೆಗೂ ನೀರು ಪೂರೈಸಲಾಗುತ್ತಿದೆ.

19 ದೂರುಗಳು
ನೀರು ಸಮಸ್ಯೆ ಉಲ್ಬಣ ಹಂತ ತಲುಪಿದ್ದಾಗ ನಗರಸಭೆಗೆ ದಿನವೊಂದಕ್ಕೆ 80ಕ್ಕೂ ಅಧಿಕ ದೂರು ಕರೆಗಳು ಬರುತ್ತಿದ್ದವು. ಈಗ ನೀರಿಗಾಗಿ ಬೇಡಿಕೆಯ ಕರೆಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಗುರುವಾರ 19 ಕರೆಗಳು, ಶುಕ್ರವಾರ ಅದಕ್ಕಿಂತಲೂ ಕಡಿಮೆ ಕರೆಗಳು ಬಂದಿವೆ ಎಂದು ನಗರಸಭೆ ಮೂಲಗಳು ತಿಳಿಸಿವೆ. ಟ್ಯಾಂಕರ್‌ ನೀರಿನ ಬೇಡಿಕೆ ಇಳಿಮುಖವಾದ ಹಿನ್ನೆಲೆಯಲ್ಲಿ ನಗರಸಭೆಯು ಟ್ಯಾಂಕರ್‌ಗಳ ಸಂಖ್ಯೆಯನ್ನು ಕೂಡ 8ರಿಂದ 4ಕ್ಕೆ ಇಳಿಸಿದೆ.

ನೀರು ತುಂಬಿಸುವ ಸಮಸ್ಯೆ
“6 ದಿನಕ್ಕೊಮ್ಮೆ ನೀರು ಬರುತ್ತದೆ. ಸಾಕಷ್ಟು ಎಂಬಷ್ಟಿದೆ. ಆದರೆ ತುಂಬಿಸಿಡುವುದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಹಾಗಾಗಿ 6 ದಿನಕ್ಕೊಮ್ಮೆ ಅರ್ಧ ದಿನ ಅಥವಾ 12 ಗಂಟೆಗಳ ಕಾಲ ನೀರು ಪೂರೈಸುವ ಬದಲು ದಿನವೊಂದಕ್ಕೆ 4-5 ತಾಸು ನಿಗದಿಗೊಳಿಸಿ ಎರಡರಿಂದ ಮೂರು ವಿಭಾಗಗಳಿಗೆ ಪೂರೈಸಬೇಕು. ಆಗ 2-3 ದಿನಕ್ಕೊಮ್ಮೆ ನೀರು ಪೂರೈಸುವುದು ಕೂಡ ಸಾಧ್ಯವಾಗಬಹುದು. 6 ದಿನಕ್ಕೆ ಬೇಕಾದಷ್ಟು ನೀರು ಸಂಗ್ರಹಿಸಿಡುವ ಸಮಸ್ಯೆಯೂ ತಪ್ಪುತ್ತದೆ ಎಂಬ ಅಭಿಪ್ರಾಯವನ್ನು ಕೆಲವು ಪ್ರದೇಶದ ನಿವಾಸಿಗಳು ಮುಂದಿಟ್ಟಿದ್ದಾರೆ.

133 ಗ್ರಾಮಗಳಿಗೆ ಟ್ಯಾಂಕರ್‌
ಜಿಲ್ಲೆಯ ಒಟ್ಟು 89 ಗ್ರಾಮ ಪಂಚಾಯತ್‌ಗಳ 133 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು ಸಮರ್ಪಕವಾಗಿ ಮಾನಿಟರಿಂಗ್‌ ಮಾಡಲಾಗುತ್ತಿದೆ. ನೋಡೆಲ್‌ ಅಧಿಕಾರಿಗಳನ್ನು ಕೂಡ ಈಗಾಗಲೇ ನಿಯೋಜಿಸ ಲಾಗಿದೆ ಎಂದು ಜಿ.ಪಂ. ಅಧಿಕಾರಿಗಳು ತಿಳಿಸಿದ್ದಾರೆ.

ಸುಭದ್ರೆಗೆ 2,000 ಲೀ
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್‌ ನಗರದಲ್ಲಿ ಒಂದು ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ. ಇದೀಗ ಶ್ರೀಕೃಷ್ಣ ಮಠದ ಆನೆ ಸುಭದ್ರೆಯ ಸ್ನಾನಕ್ಕೂ ನೀರಿನ ಕೊರತೆ ಉಂಟಾಗಿದ್ದು ಸಮಿತಿಗೆ ಬೇಡಿಕೆ ಸಲ್ಲಿಸಲಾಗಿದೆ. ಅದರಂತೆ ಶುಕ್ರವಾರ ಸಮಿತಿ ಪದಾಧಿಕಾರಿಗಳು 2,000ದಷ್ಟು ಲೀಟರ್‌ ನೀರಿನಿಂದ ಆನೆಗೆ ಸ್ನಾನ ಮಾಡಿಸಿದರು. ಮುಂದೆಯೂ ಆನೆಗೆ ನೀರು ಬೇಕಾದರೆ, ಒಂದು ವೇಳೆ ಜನರಿಂದ ಹೆಚ್ಚಿನ ಬೇಡಿಕೆ ಬಾರದೆ ಇದ್ದರೆ ನೀರು ಒದಗಿಸಲು ಸಿದ್ಧ ಇರುವುದಾಗಿ ನಾಗರಿಕ ಸಮಿತಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ