ತನಿಖೆಯಲ್ಲಿ  ಮಧ್ಯಪ್ರವೇಶ ಇಲ್ಲ

Team Udayavani, Jul 21, 2018, 12:12 PM IST

ಉಡುಪಿ: ಶೀರೂರು ಶ್ರೀಗಳ ಸಾವಿನ ಹಿನ್ನೆಲೆಯಲ್ಲಿ ಉಂಟಾಗಿರುವ ಸಂಶಯಗಳ ಕುರಿತಾದ ಪ್ರಕರಣದ ತನಿಖೆಯಲ್ಲಿ ಸರಕಾರ ಮಧ್ಯ ಪ್ರವೇಶಿಸದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಶುಕ್ರವಾರ ಶೀರೂರಿನಲ್ಲಿರುವ ಮೂಲ ಮಠದಲ್ಲಿ ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ವೃಂದಾವನವನ್ನು ಸಂದರ್ಶಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ದೂರಿನ ಆಧಾರದಲ್ಲಿ ಇಲಾಖೆ ತನಿಖೆ ನಡೆಸುತ್ತದೆ. ಸರಕಾರ ಮಧ್ಯ ಪ್ರವೇಶಿಸದು. ಜಿಲ್ಲಾಡಳಿತ ಎಲ್ಲವನ್ನೂ ನಿರ್ವಹಿಸುತ್ತದೆ. ಒಂದು ವೇಳೆ ನ್ಯಾಯ ಸಿಗದು ಎಂದಾದರೆ ಮಾತ್ರ ಮಧ್ಯಪ್ರವೇಶಿಸಬಹುದು ಎಂದರು

“ಡಿಸಿಎಂ ಉನ್ನತ ತನಿಖೆಯ ಬಗ್ಗೆ ಹೇಳಿದ್ದಾರೆಯೇ?’ ಎಂದು ಪ್ರಶ್ನಿಸಿದಾಗ “ನನ್ನ ಗಮನಕ್ಕೆ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ನನ್ನ ಮತ್ತು ಶ್ರೀಗಳ ಮಧ್ಯೆ ಪ್ರೀತಿ, ವಿಶ್ವಾಸ, ಆತ್ಮೀಯತೆಯ ಸಂಬಂಧ ಇತ್ತು. ಆ ಹಿನ್ನೆಲೆಯಲ್ಲಿ ಅವರ ವೃಂದಾವನ ದರ್ಶನಕ್ಕೆ ಬಂದಿದ್ದೇನೆಯೇ ಹೊರತು ಸರಕಾರದ ಪ್ರತಿನಿಧಿಯಾಗಿ ಅಲ್ಲ. ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಜತೆ ಸಭೆ ಇದ್ದುದರಿಂದ ಬರಲಾಗಲಿಲ್ಲ ಎಂದರು. ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌ ಮತ್ತು ಅಭಯಚಂದ್ರ ಜೈನ್‌, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೋನ್ಸೆ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ನರಸಿಂಹ ಮೂರ್ತಿ, ದಿನೇಶ್‌ ಪುತ್ರನ್‌, ಕೃಷ್ಣಮೂರ್ತಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ