ಮಕ್ಕಳಿಗೆ ಕಲಿಕೆಯೊಂದಿಗೆ “ಸಾವಯವ ಕೃಷಿ’ ಪಾಠ

ಕುಂದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಮಾದರಿ "ಶಿಕ್ಷಣ' ; ಶಾಲಾವರಣದಲ್ಲಿಯೇ ತರಹೇವಾರಿ ತರಕಾರಿ ಬೆಳೆ

Team Udayavani, Sep 12, 2019, 5:33 AM IST

ಶಾಲಾ ಕೈತೋಟದಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು.

ಕುಂದಾಪುರ: ಶಾಲೆಗಳಲ್ಲಿ ಕಲಿಕೆಯೊಂದಿಗೆ ಕೃಷಿಯ ಒಲವು ಮೂಡಿಸಲು ಕೈತೋಟದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿನ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ(ಬೋರ್ಡ್‌ ಹೈಸ್ಕೂಲ್‌) ವಿಭಾಗದಲ್ಲಿ ಸಾವಯವ ಗೊಬ್ಬರ ಬಳಸಿ, ಹೇಗೆ ತರಕಾರಿ ಬೆಳೆಯಬಹುದು, ಉತ್ತಮ ಫಸಲು ತೆಗೆಯಬಹುದು ಎಂಬ ಪ್ರಾಯೋಗಿಕ ಶಿಕ್ಷಣವನ್ನು ಕೊಡಲಾಗುತ್ತಿದೆ.

ನಾವು ತಿನ್ನುವ ಆಹಾರ, ತರಕಾರಿ, ಹಣ್ಣುಗಳಿಗೆ ರಾಸಾಯನಿಕ ಗೊಬ್ಬರ ಹಾಕಿ ಬೆಳೆಸುವುದರಿಂದ ಆರೋಗ್ಯದ ಮೇಲೆ ದುಷ್ಪ‌ರಿಣಾಮ ಬೀರುತ್ತಿದ್ದು, ಇದರಿಂದ ಸಾವಯವ ಕೃಷಿಯತ್ತ ಈಗ ಎಲ್ಲರೂ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇಲ್ಲಿಯೂ ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಸಾವಯವ ಕೃಷಿಯತ್ತ ಆಸಕ್ತಿ ಹೊಂದಿ ಮಾದರಿಗಳಾಗಿದ್ದಾರೆ.

ಏನೆಲ್ಲ ಇದೆ?
ಶಾಲೆಯ ಆವರಣದಲ್ಲಿಯೇ ಶಿಕ್ಷಕರ ಮಾರ್ಗ ದರ್ಶನದಲ್ಲಿ ಮಕ್ಕಳೇ ಕೈತೋಟವನ್ನು ನಿರ್ಮಿಸಿದ್ದಾರೆ. ಈ ಕೈತೋಟದಲ್ಲಿ ಬೆಂಡೆಕಾಯಿ, ಹೀರೆಕಾಯಿ, ಅಲಸಂಡೆ ಹಾಗೂ ಟೊಮೆಟೋ ಬೆಳೆಯನ್ನು ಬೆಳೆಸಲಾಗಿದೆ. ಇದರಿಂದ ಸಿಗುವ ತರಕಾರಿಗಳನ್ನು ಅಕ್ಷರ ದಾಸೋಹ ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

ದಿನಕ್ಕೆ 5-6 ಕೆ.ಜಿ.
ಕಳೆದ ಮೇ – ಜೂನ್‌ ತಿಂಗಳಲ್ಲಿ ತರಕಾರಿ ತೋಟವನ್ನು ನಿರ್ಮಿಸಿ, ಬೀಜ ಹಾಕಿ ಬೆಳೆಸಲಾಗಿದ್ದು, ಈಗ ಫಸಲು ಕೊಯ್ಲಿಗೆ ಬಂದಿದ್ದು, ದಿನವೊಂದಕ್ಕೆ 5-6 ಕೆ.ಜಿ. ತರಕಾರಿ ಸಿಗುತ್ತಿದೆ. ಪ್ರೌಢಶಾಲೆಯ 8 ರಿಂದ 10ರವರೆಗಿನ ತರಗತಿಯಲ್ಲಿ ಪ್ರಸ್ತುತ 530 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಿತ್ಯ ಬಿಸಿಯೂಟಕ್ಕೆ ಸುಮಾರು 50 ಕೆ.ಜಿ. ತರಕಾರಿ ಅಗತ್ಯವಿದ್ದು, ಈ ಕೈ ತೋಟದಿಂದ ಸ್ವಲ್ಪ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತೋಟವನ್ನು ಮತ್ತಷ್ಟು ವಿಸ್ತರಿಸುವ ಯೋಚನೆ ಶಿಕ್ಷಕರು ಹಾಗೂ ಶಾಲಾ ಎಸ್‌ಡಿಎಂಸಿ ಸಮಿತಿಯದ್ದಾಗಿದೆ.

ಉತ್ತಮ ದಾಖಲಾತಿ
ಕಳೆದ ಬಾರಿ ಸುಮಾರು 300 ಮಂದಿ ವಿದ್ಯಾರ್ಥಿಗಳು ಮಾತ್ರವಿದ್ದರೆ, ಈ ಬಾರಿ ದಾಖಲಾತಿ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆ ಜತೆಗೆ ಕೃಷಿ ಅದರಲ್ಲೂ ಸಾವಯವ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಮಾದರಿ ಶಿಕ್ಷಣ ಎನ್ನುವುದು ಪೋಷಕರೊಬ್ಬರ ಮಾತು.

ಸಾವಯವ ಹೇಗೆ?
ಬಿಸಿಯೂಟಕ್ಕೆ ಬಳಸಿ, ಉಳಿದ ತರಕಾರಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳು, ಶಾಲೆಯ ಆವರಣದಲ್ಲಿರುವ ಮರಗಳಿಂದ ಬಿದ್ದ ತರಗೆಲೆಗಳನ್ನು ರಾಶಿ ಹಾಕಿ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಅದನ್ನು ಇಲ್ಲಿನ ತರಕಾರಿ ಬೆಳೆಗಳಿಗೆ ಬಳಸಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ತರಕಾರಿ ಗಿಡ ಬೆಳೆಸುವುದರ ಜತೆಗೆ ಸಾವಯವ ಗೊಬ್ಬರ ಹೇಗೆ ತಯಾರಿಸ ಬಹುದು ಎನ್ನುವುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.

ಸಾವಯವ ಕೃಷಿ ಅರಿವು
ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಾಗಿ ಇಲ್ಲಿಗೆ ಕಲಿಯಲು ಬರುತ್ತಿದ್ದು, ಪಠ್ಯದೊಂದಿಗೆ ಕೃಷಿಯ ಬಗ್ಗೆ ಒಲವು ಮೂಡಿಸುವುದು ಮಾತ್ರವಲ್ಲದೆ, ಈಗಿನ ತುರ್ತು ಅಗತ್ಯವಾಗಿರುವ ಸಾವಯವ ಕೃಷಿ ಕುರಿತು ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಕೂಡ ಅತೀವ ಆಸಕ್ತಿಯಿಂದಲೇ ತೊಡಗಿಸಿಕೊಳ್ಳುತ್ತಿದ್ದಾರೆ.
– ಮೋಹನ್‌ ರಾವ್‌, ಉಪ ಪ್ರಾಂಶುಪಾಲ, ಬೋರ್ಡ್‌ ಹೈಸ್ಕೂಲ್‌

ಪಠ್ಯೇತರಕ್ಕೆ ಒತ್ತು
ಪಾಠದೊಂದಿಗೆ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶ ಎಸ್‌ಡಿಎಂಸಿ ಹಾಗೂ ಶಿಕ್ಷಕರದ್ದು. ಅದರಂತೆ ಕ್ರೀಡೆ, ಸಾವಯವ ತರಕಾರಿ ತೋಟ ನಿರ್ಮಾಣದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗಿದೆ. ಶಾಲಾವರಣವನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಂಡು, ಕೈತೋಟವನ್ನು ಮತ್ತಷ್ಟು ವಿಸ್ತರಿಸಲಾಗುವುದು.
– ಮೋಹನ್‌ದಾಸ್‌ ಶೆಣೈ,
ಎಸ್‌ಡಿಎಂಸಿ ಅಧ್ಯಕ್ಷರು

-ಪ್ರಶಾಂತ್‌ ಪಾದೆ

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ