ಅಂಬಲಪಾಡಿ,ಅಂಬಾಗಿಲು,ಸಂತೆಕಟ್ಟೆಯಲ್ಲಿ ಅಪಘಾತಗಳ ಸರಮಾಲೆ

ಉಡುಪಿ ನಗರಕ್ಕೆ ಸ್ವಾಗತ ಕೋರುವ ಅಪಾಯಕಾರಿ ಜಂಕ್ಷನ್‌ಗಳು !

Team Udayavani, Sep 23, 2019, 5:48 AM IST

ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಾಮದಾಯಕ, ಸುಖಕರ, ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದೆಂದು ಭಾವಿಸಿದರೆ ತಪ್ಪಾಗಬಹುದು. ಕೃಷ್ಣನ ನಾಡಿಗೆ ಪ್ರವೇಶಿಸಿದೊಡನೆ ನಿಮಗೆ ಅಪಾಯಕಾರಿ ಜಂಕ್ಷನ್‌ಗಳು ಎದುರಾಗುತ್ತವೆ. ಅಂಬಲಪಾಡಿ, ನಿಟ್ಟೂರು, ಅಂಬಾಗಿಲು ಮತ್ತು ಸಂತೆಕಟ್ಟೆಯಲ್ಲಿ ಪ್ರಯಾಣಿಸುವಾಗ ಸವಾರರು ಗಂಭೀರ ಎಚ್ಚರ ವಹಿಸುವುದು ಅತ್ಯಗತ್ಯ.

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಉಡುಪಿ ನಗರ ಪ್ರವೇಶಿಸುವವರು ಈ ಎರಡು ಪ್ರಮುಖ ಜಂಕ್ಷನ್‌ಗಳಲ್ಲಿ ಎಚ್ಚರ ಕಾಯ್ದುಕೊಳ್ಳಬೇಕು: ಒಂದು ಅಂಬಲಪಾಡಿ. ಮತ್ತೂಂದು ಅಂಬಾಗಿಲು ಜಂಕ್ಷನ್‌. ಇಲ್ಲಿ ಅಪಘಾತಗಳು ಸಾಮಾನ್ಯ. ಅನೇಕ ಮಂದಿ ಜೀವ ಕಳೆದುಕೊಂಡರೂ ಸರಿಯಾದ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ.

ಬ್ರಹ್ಮಗಿರಿ-ಅಂಬಲಪಾಡಿ ಮುಖ್ಯರಸ್ತೆಗಳು ಸಂಧಿಸುವ ಈ ಸ್ಥಳ ವಾಹನ ಚಾಲಕರು, ಪಾದ ಚಾರಿಗಳಲ್ಲಿ ಸದಾ ಗೊಂದಲ ಮೂಡಿಸುತ್ತಲೇ ಇರುತ್ತದೆ. ಯಾವ ಕಡೆಗೆ ಯಾವ ವಾಹನಗಳು ಹೋಗುತ್ತವೆ ಎಂದು ತಿಳಿಯುವುದೇ ಇಲ್ಲ. ಪಾದಚಾರಿಗಳಂತೂ ರಸ್ತೆ ದಾಟಲು ಯೋಚಿಸುವಷ್ಟರಲ್ಲಿ ಇನ್ನೊಂದು ಕಡೆಯಿಂದ ವಾಹನಗಳು ನುಗ್ಗುವ ಅಪಾಯವಿದ್ದದ್ದೇ.

ಫ್ಲೈ ಓವರ್‌ಗಾಗಿ ನಡೆದ ಪ್ರತಿಭಟನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೊಪ್ಪು ಹಾಕಲಿಲ್ಲ. ಕನಿಷ್ಠ ಪಾದಚಾರಿಗಳು ಸುರಕ್ಷಿತ ವಾಗಿ ಅತ್ತಿಂದಿತ್ತ ಸಂಚರಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಿಲ್ಲ. ಕೆಲವೊಮ್ಮೆ ಪೊಲೀಸ್‌ ಸಿಬಂದಿ ಇಲ್ಲಿ ಕಾರ್ಯ ನಿರ್ವಹಿಸಿದರೂ ಬಹುತೇಕ ಹೊತ್ತು ಇಡೀ ಜಂಕ್ಷನ್‌ ಅನಾಥ. ಈ ಹೊತ್ತಿನಲ್ಲಿ ಎಲ್ಲ ಕಡೆಯಿಂದಲೂ ವಾಹನ ಸವಾರರು ನುಗ್ಗುತ್ತಲೇ ಇರುತ್ತಾರೆ.

ಅಂಬಾಗಿಲು ಅಪಘಾತದ ಬಾಗಿಲು !
ಕುಂದಾಪುರ ಕಡೆಯಿಂದ ಉಡುಪಿ ನಗರ – ಶ್ರೀಕೃಷ್ಣ ಮಠ, ಮಣಿಪಾಲ ಭಾಗಕ್ಕೆ ತೆರಳುವ ವರು ಹೆಚ್ಚಾಗಿ ಬಳಸುವ ಅಂಬಾಗಿಲು ಜಂಕ್ಷನ್‌ ಅಪಘಾತಗಳಿಗೆ ಕುಖ್ಯಾತ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಇಲ್ಲಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿ ಸರ್ವೀಸ್‌ ರಸ್ತೆಯೇ ಇಲ್ಲ. ಹಾಗಾಗಿ ಎಲ್ಲ ದಿಕ್ಕುಗಳಿಂದಲೂ ವಾಹನಗಳು ಮುನ್ನುಗ್ಗುತ್ತವೆ. ವಿರುದ್ಧ ದಿಕ್ಕಿನ ಸಂಚಾರವಂತೂ ಹೇಳತೀರದು.

ಕಲ್ಸಂಕ, ಪೆರಂಪಳ್ಳಿ ಮತ್ತು ಸುತ್ತಮುತ್ತಲಿಂದ ಬರುವ ವಾಹನ ಸವಾರರು ಹೆದ್ದಾರಿ ಸೇರಿ ಇನ್ನೊಂದು ಬದಿಗೆ ತೆರಳಲು ಸಂತೆಕಟ್ಟೆ ಬಳಿ ಯೂ ಟರ್ನ್ ಪಡೆದು ಬರಬೇಕು. ಅದನ್ನು ತಪ್ಪಿಸಲು ಅಂಬಾಗಿಲು ಜಂಕ್ಷನ್‌ ನಲ್ಲೇ ಬಲಬದಿಗೆ ನುಗ್ಗುತ್ತಾರೆ. ಈ ರಾಂಗ್‌ ಸೈಡ್‌ ಸಮಸ್ಯೆ ಅಪಾಯಕಾರಿಯಾಗಿದೆ.

ಇದೇ ರೀತಿ ಅಂಬಾಗಿಲು ಜಂಕ್ಷನ್‌ ಎಡಬದಿಯ ಪ್ರದೇಶದವರೂ ಹಾಗೆಯೇ ಸಂತೆಕಟ್ಟೆಯಲ್ಲಿ ಯೂ ಟರ್ನ್ ಪಡೆದು ಕಲ್ಸಂಕ, ಪೆರಂಪಳ್ಳಿ, ಕರಾವಳಿ ಜಂಕ್ಷನ್‌ಗೆ ತೆರಳಬೇಕು. ಬಹಳ ಮಂದಿ ಇದನ್ನು ತಪ್ಪಿಸಲು ರಾಂಗ್‌ ಸೈಡ್‌ನ‌ಲ್ಲೇ ಬರುತ್ತಾರೆ.
ಈ ಜಂಕ್ಷನ್‌ನಲ್ಲಿ ಪೊಲೀಸ್‌ ಸಿಬಂದಿ ಇಲ್ಲ. ಸೂಚನಾ ಫ‌ಲಕ, ಸಿಗ್ನಲ್‌ ಲೈಟ್‌ ಇಲ್ಲ. ರಾತ್ರಿ ಹೊತ್ತು ಕೆಲವೊಮ್ಮೆ ಇಲ್ಲಿನ ಲೈಟ್‌ ಉರಿಯುವುದಿಲ್ಲ. ಇಷ್ಟೆಲ್ಲ ಸಮಸ್ಯೆ ಇದ್ದರೂ ಯಾರೂ ಪರಿಹಾರ ಕ್ರಮಗಳತ್ತ ಯೋಚಿಸಿಯೇ ಇಲ್ಲ.

ಬಲಾಯಿಪಾದೆ-ಸಂತೆಕಟ್ಟೆ ಸೇತುವೆ
ಉದ್ಯಾವರ ಬಲಾಯಿಪಾದೆಯಿಂದ ಕಲ್ಯಾಣಪುರ ಸಂತೆಕಟ್ಟೆ ಸೇತುವೆಯ ವರೆಗೆ ಕಳೆದ 3 ವರ್ಷ 8 ತಿಂಗಳಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಒಟ್ಟು 50 ಮಂದಿ ಮೃತಪಟ್ಟು 258 ಮಂದಿ ಗಾಯಗೊಂಡಿದ್ದಾರೆ. ಕಳೆದ 8 ತಿಂಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ.

ಅಪಾಯಕಾರಿ ಸಂತೆಕಟ್ಟೆ ಜಂಕ್ಷನ್‌
ಸಂತೆಕಟ್ಟೆಯ ಜಂಕ್ಷನ್‌ ಅವೈಜ್ಞಾನಿಕ ಕಾಮಗಾರಿಗೆ ಕೈಗನ್ನಡಿ. ಇಲ್ಲಿ ಸರ್ವೀಸ್‌ ರಸ್ತೆ ಇದ್ದರೂ ಸಮಸ್ಯೆ ಬಗೆಹರಿದಿಲ್ಲ. ಹೆದ್ದಾರಿ ಯಲ್ಲೇ ನಿಲುಗಡೆಯಾಗುತ್ತಿದ್ದ ಬಸ್‌ಗಳು ಈಗ ಸರ್ವೀಸ್‌ ರಸ್ತೆಯಲ್ಲಿ ನಿಲ್ಲುತ್ತಿವೆ. ಆದರೆ ಸರ್ವೀಸ್‌ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಬಸ್‌ ನಿಲ್ದಾಣ ಜಂಕ್ಷನ್‌·ಪಕ್ಕವೇ ಇರುವುದರಿಂದಲೂ ಸಮಸ್ಯೆ ಹೆಚ್ಚು. ಸುರಕ್ಷಿತವಾಗಿ ಹೆದ್ದಾರಿ ದಾಟು ವುದು ಸವಾಲು. ಎಕ್ಸ್‌ಪ್ರೆಸ್‌ ಬಸ್‌ಗಳಿಗೆ ಪ್ರತ್ಯೇಕ ನಿಲುಗಡೆ ಬೇಕು, ಬ್ರಹ್ಮಾವರ ಕಡೆ ಹೋಗುವಲ್ಲಿ ಸಂತೆಕಟ್ಟೆ ಜಂಕ್ಷನ್‌ನಿಂದ ಮುಂದೆ ಬಸ್‌ ನಿಲ್ದಾಣ ಮಾಡಬೇಕು ಎಂಬ ಬೇಡಿಕೆ ಸ್ಥಳೀಯರದು.

ನಿಟ್ಟೂರು ಅಪಘಾತ ವಲಯ
ನಿಟ್ಟೂರು ಕೂಡ ಅಪಘಾತ ವಲಯವಾಗಿದೆ. ಕರಾವಳಿ ಜಂಕ್ಷನ್‌ ಕಡೆಯಿಂದ ವೇಗದಲ್ಲಿ ಬರುವ ವಾಹನಗಳು, ಕೊಡಂಕೂರು- ನಿಟ್ಟೂರು ರಸ್ತೆಗಳು ಹೆದ್ದಾರಿಗೆ ಸಂದಿಸುವ ಅಪಾಯಕಾರಿ ಜಾಗ ಇದು. ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪೊದಿಂದ ಉಡುಪಿ – ಮಂಗಳೂರು ಕಡೆಗೆ ತೆರಳಲು ಇದೇ ಜಂಕ್ಷನ್‌ನಲ್ಲಿ ತಿರುವು ಪಡೆದುಕೊಳ್ಳುತ್ತವೆ. ಇಲ್ಲಿ ಸರ್ವೀಸ್‌ ರಸ್ತೆಯಾಗಲಿ, ದಾರಿದೀಪವಾಗಲಿ ಇಲ್ಲ. ಬಸ್‌ಗಳನ್ನು ಕೂಡ ಹೆದ್ದಾರಿಯಲ್ಲೇ ನಿಲ್ಲಿಸಲಾಗುತ್ತದೆ.

ಕರಾವಳಿ ಜಂಕ್ಷನ್‌ ಹೊಂಡಮಯ
ಕರಾವಳಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ನಿರ್ಮಾಣದಿಂದ ವಾಹನ ದಟ್ಟಣೆ ಕಡಿಮೆ ಯಾಗಿದೆ. ಆದರೆ ಮಲ್ಪೆಯಿಂದ ನಿಟ್ಟೂರು ಕಡೆಗೆ ತಿರುಗುವಲ್ಲಿ ಬಸ್‌ ನಿಲುಗಡೆಗೆ ಸೂಕ್ತ ಸ್ಥಳ ಗುರುತಿಸದೆ ತೊಂದರೆಯಾಗಿದೆ. ಇದು ಅಪಾಯಕಾರಿ ಸ್ಥಳ. ಪ್ರಸ್ತುತ ಇಲ್ಲಿ ಹೊಂಡಗಳು ಇವೆ. ಅಂಬಲಪಾಡಿ ಕಡೆಗೆ ತಿರುಗುವಲ್ಲೂ ಸ‌ರ್ವಿಸ್‌ ರಸ್ತೆ ಹೊಂಡಗಳಿಂದ ತುಂಬಿದೆ.

ಬಸ್‌ ನಿಲುಗಡೆಯಿಂದ ಸಮಸ್ಯೆ
ಸಂತೆಕಟ್ಟೆ ಜಂಕ್ಷನ್‌ನ ಸಮೀಪದ ಸರ್ವಿಸ್‌ ರಸ್ತೆಯಲ್ಲಿಯೇ ಎಲ್ಲ ಬಸ್‌ಗಳನ್ನು ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗಿದೆ. ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಹೆದ್ದಾರಿಯಲ್ಲಿ ಜಂಕ್ಷನ್‌ನಿಂದ ಮುಂದಕ್ಕೆ ನಿಲ್ಲಿಸಬೇಕು. ಕಲ್ಯಾಣಪುರ, ಕೆಮ್ಮಣ್ಣು ಕಡೆಗೆ ಹೋಗುವ ಬಸ್‌ಗಳನ್ನು ಜಂಕ್ಷನ್‌ಗಿಂತ ಸ್ವಲ್ಪ ದೂರ ಇರುವ ನಗರಸಭೆಯ ವಾಣಿಜ್ಯ ಸಂಕೀರ್ಣ ಬಳಿ ನಿಲ್ಲಿಸಬೇಕು. ಆಗ ದಟ್ಟಣೆ, ಅಪಾಯ ಸ್ವಲ್ಪವಾದರೂ ಕಡಿಮೆಯಾಗಬಹುದು. ಸಂತೆಕಟ್ಟೆಯಿಂದ ಅಂಬಾಗಿಲುವರೆಗೆ ಎರಡೂ ಕಡೆ ಸರ್ವಿಸ್‌ ರಸ್ತೆಯಾಗಬೇಕು. –ಜಯರಾಮ್‌,
ಮಾಜಿ ಅಧ್ಯಕ್ಷರು, ರಿಕ್ಷಾ ಚಾಲಕ ಮಾಲಕರ ಸಂಘ, ಸಂತೆಕಟ್ಟೆ

6 ಬಾರಿ ಮನವಿ
ಅಂಬಾಗಿಲು ಜಂಕ್ಷನ್‌ ಭಾರೀ ಅಪಾಯಕಾರಿ. ಇದಕ್ಕೆ ಮುಖ್ಯ ಕಾರಣ ಸರ್ವಿಸ್‌ ರಸ್ತೆ ಇಲ್ಲದಿರುವುದು. ಸರ್ವಿಸ್‌ ರಸ್ತೆಗಾಗಿ ಸಂಸದ ರಿಗೆ 6 ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಸರ್ವೀಸ್‌ ರಸ್ತೆಗಾಗಿ ಸ್ವಾಧೀನ ಮಾಡಿರುವ ಜಾಗದಲ್ಲಿ 10 ಅಡಿ ಅಗಲದ ಮಣ್ಣಿನ ರಸ್ತೆಯನ್ನಾದರೂ ನಿರ್ಮಿಸಲಿ.
-ದೇವದಾಸ್‌ ಶೆಟ್ಟಿಗಾರ್‌, ಅಂಬಾಗಿಲು

ನೀವೂ ಸಮಸ್ಯೆ ತಿಳಿಸಿ
ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾ.ಹೆ. 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗ ಬೇಕೆನ್ನುವುದು ಉದಯವಾಣಿ ಕಾಳಜಿ. ಈ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ನಿಮ್ಮ ಸಲಹೆ- ಅಭಿಪ್ರಾಯ, ಸಮಸ್ಯೆಯನ್ನು 9632369999 ಈ ಸಂಖ್ಯೆಗೆ ಫೋಟೋ ಸಮೇತ ವಾಟ್ಸಾ ಪ್‌ ಮಾಡಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ