ನಾವುಂದ: ಅಂಡರ್ ಪಾಸ್‌ಗೆ ಸ್ಥಳೀಯರಿಂದ ವ್ಯಾಪಕ ವಿರೋಧ
Team Udayavani, Mar 25, 2017, 1:11 PM IST
ಮರವಂತೆ: ನಾವುಂದದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚತುಷ್ಪಥ ಹೆದ್ದಾರಿ ಅಂಡರ್ ಪಾಸ್‌ಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅದರ ಕುರಿತು ಪರ-ವಿರೋಧ ಅಭಿಪ್ರಾಯ ಮೂಡಿಬಂದ ಕಾರಣ ಶುಕ್ರವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಜನರ ಅಹವಾಲು ಆಲಿಸಿದರು.
ಈ ಸಂದರ್ಭ ಸೇರಿದ್ದ ನೂರಾರು ಜನರು ಪದ್ಮಾವತಿ ದೇವಸ್ಥಾನದ ಎದುರು ಅಂಡರ್ ಪಾಸ್ ಬದಲು ಯು ಟರ್ನ್ ನೀಡಬೇಕು ಎಂದು ಆಗ್ರಹಿಸಿದರು.
ಸಂಸದ ಬಿ.ಎಸ್. ಯಡಿಯೂರಪ್ಪ ಅವರ ಖಾಸಗಿ ಕಾರ್ಯದರ್ಶಿ ಪುರುಷೋತ್ತಮ ಎರಡು ವ್ಯವಸ್ಥೆಗಳ ಸಾಧಕ ಬಾಧಕ ವಿವರಿಸಿ ಜನರು ತಮ್ಮ ತೀರ್ಮಾನ ತಿಳಿಸಬೇಕು ಎಂದರು.
ತಾ. ಪಂ. ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಗ್ರಾ. ಪಂ. ಅಧ್ಯಕ್ಷ ಎನ್. ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಪುತ್ರನ್, ಸ್ಥಳೀಯ ಮುಖಂಡರು ಮತ್ತು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಯು ಟರ್ನ್ ಪರ ಏಕಾಭಿಪ್ರಾಯ ಮುಂದಿಟ್ಟರು. ಪುರುಷೋತ್ತಮ ಜನರ ತೀರ್ಮಾನಕ್ಕೆ ಸಮ್ಮತಿ ಸೂಚಿಸಿ ವಿವಾದಕ್ಕೆ ತೆರೆ ಎಳೆದರು.
ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ, ಬಿಜೆಪಿ ಮುಖಂಡ ಬಿ.ಎಂ. ಸುಕುಮಾರ ಶೆಟ್ಟಿ, ದೀಪಕ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಸ್ಥಳೀಯ ಮುಖಂಡರಾದ ಅಶೋಕ ಕುಮಾರ ಶೆಟ್ಟಿ, ಆನಂದ ತೋಳಾರ್, ಭಾಸ್ಕರ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.