“ಆದಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ

ಕಾರ್ಕಳ: ತಾಲೂಕು ದಲಿತ ಕುಂದುಕೊರತೆ ಸಭೆ

Team Udayavani, Jul 21, 2019, 5:50 AM IST

ಅಜೆಕಾರು: ಹಲವು ಶತಮಾನಗಳಿಂದ ಅರಣ್ಯದೊಳಗೆ ಆದಿವಾಸಿಗಳು ಜೀವನ ನಡೆಸುತ್ತ ಬಂದಿದ್ದು ದಶಕಗಳಿಂದ ಮೂಲ ಸೌಕರ್ಯ ಒದಗಿಸುವಂತೆ ನಿರಂತರ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪ್ರತೀ ಕುಂದುಕೊರತೆ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾವ ಮಾಡಲಾಗುತ್ತಿದೆಯಾದರೂ ಅಭಿವೃದ್ಧಿ ಮಾತ್ರ ನಡೆಯುತ್ತಿಲ್ಲ ಎಂದು ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಗೌಡ ಹೇಳಿದರು.

ಕಾರ್ಕಳ ತಾಲೂಕು ವ್ಯಾಪ್ತಿಯ ದಲಿತ ಕುಂದು ಕೊರತೆ ಸಭೆಯು ಜು. 20ರಂದು ತಹಶೀಲ್ದಾರ್‌ ಪುರಂದರ್‌ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕಿನ ರೆಂಜಾಳದ ಮಲೆಬೆಟ್ಟು, ದಡ್ಡು, ಕಜಂಬೊಟ್ಟು, ಕಬ್ಬಿನಾಲೆಯ ಪಾರಿಕಲ್ಲು ನೂರಾಲ್‌ಬೆಟ್ಟುವಿನ ಕನ್ಯಾಲು ಭಾಗದ ಆದಿವಾಸಿಗಳಿಗೆ ವಿದ್ಯುತ್‌, ರಸ್ತೆ ಸಂಪರ್ಕ ಕಲ್ಪಿಸುವಂತೆ ನಿರಂತರ ಮನವಿ ಮಾಡುತ್ತಿದ್ದರೂ ಕಾನೂನಿನ ನೆಪ ಹೇಳಲಾಗುತ್ತಿದೆ. ಆದರೆ ಅರಣ್ಯವಾಸಿಗಳಿಗೆ ರಸ್ತೆ, ವಿದ್ಯುತ್‌ ಸೇರಿದಂತೆ ಮೂಲ ಸೌಕರ್ಯ ಒದಗಿಸುವಂತೆ ಅರಣ್ಯ ಹಕ್ಕು ಕಾಯ್ದೆಯಲ್ಲಿಯೇ ಇದೆ. ಕಂದಾಯ, ಅರಣ್ಯ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ
ಕುಂದುಕೊರತೆ ಸಭೆ
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಪ.ಜಾತಿ, ಪ.ಪಂಗಡದ 8 ಕಾಲನಿಗಳಿದ್ದು ಈ ಎಲ್ಲ ಕಾಲನಿಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಈ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಯ ಕುಂದುಕೊರತೆ ಸಭೆಯನ್ನು ಪುರಸಭೆಯಲ್ಲಿ ನಡೆಸುವಂತೆ ಶ್ರೀನಿವಾಸ್‌ ಕಾರ್ಲ ಒತ್ತಾಯಿಸಿದರು.

ಗಣಿಗಾರಿಕೆ ಪರವಾನಿಗೆ: ಆಕ್ರೋಶ
ಪಳ್ಳಿಯಲ್ಲಿ ಜನರಿಗೆ ಸಮಸ್ಯೆಯಾಗುವ ಗಣಿಗಾರಿಕೆಗೆ ಪರವಾನಿಗೆ ನೀಡಿರುವ ಬಗ್ಗೆ ಅಣ್ಣಪ್ಪ ನಕ್ರೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹಿಂದಿನ ಕುಂದುಕೊರತೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಲಾಗಿದ್ದು ಗಣಿಗಾರಿಕೆಯಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಗಿತ್ತು. ಕಳೆದ 4 ವರ್ಷಗಳಿಂದ ವಿರೋಧ ಮಾಡುತ್ತಾ ಬಂದಿದ್ದರೂ ಗಣಿಗಾರಿಕೆಗೆ ಅಧಿಕೃತವಾಗಿ ಪರವಾನಿಗೆ ನೀಡಲಾಗಿದೆ. ಹಾಗಾದರೆ ಕುಂದುಕೊರತೆ ಸಭೆ ನಡೆಸುವ ಅಗತ್ಯ ಏನು ಎಂದು ಪ್ರಶ್ನಿಸಿದರು.

ಅಂಬೇಡ್ಕರ್‌ ಪ್ರತಿಮೆಗೆ ಆಗ್ರಹ
ತಾಲೂಕು ಕೇಂದ್ರ ಬಳಿಯ ಬಂಡೀಮಠದಲ್ಲಿರುವ ಅಂಬೇಡ್ಕರ್‌ ಪ್ರತಿಮೆಯು ಕುಸಿಯುವ ಹಂತದಲ್ಲಿದ್ದು ಹೊಸ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣ ಮಾಡುವ ಬಗ್ಗೆ ಹಿಂದಿನ ಸಭೆಯಲ್ಲಿಯೇ ಪುರಸಭೆಗೆ ಮನವಿ ಮಾಡಲಾಗಿತ್ತಾದರೂ ಅಧಿಕಾರಿಗಳು ಈ ವರೆಗೂ ಈ ಬಗ್ಗೆ ಗಮನಹರಿಸಿಲ್ಲ ಎಂದು ಅಣ್ಣಪ್ಪ ನಕ್ರೆ ಅವರು ಹೇಳಿದರು. ಈ ಬಗ್ಗೆ ಮಾತನಾಡಿದ ತಹಶೀಲ್ದಾರ್‌ ಕೂಡಲೇ ಅಂಬೇಡ್ಕರ್‌ ಪ್ರತಿಮೆ ಪುನರ್‌ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆಗೆ ಮನವಿ
ಮಾಳ ಪಂಚಾಯತ್‌ ವ್ಯಾಪ್ತಿಯ ಹನೆಗುಂಡಿ, ಮುಗ್ಗೇರ್ಕಳ ಪ್ರದೇಶದಲ್ಲಿ ಪ.ಜಾತಿ, ಪ.ಪಂಗಡದ ಸುಮಾರು 25ರಿಂದ 30 ಮನೆಗಳಿದ್ದು ಸೂಕ್ತ ರಸ್ತೆ ಇಲ್ಲದೆ ಸಂಕಷ್ಟಪಡುವಂತಾಗಿದೆ. ಒಂದೆರಡು ಪ.ಜಾತಿ ಪ.ಪಂಗಡದ ಅನುದಾನದಿಂದ ಈ ರಸ್ತೆ ಅಭಿವೃದ್ಧಿ ಶೀಘ್ರದಲ್ಲಿ ನಡೆಯಬೇಕಾಗಿದೆ ಎಂದು ವಿಟuಲ ಗೌಡ ಹೇಳಿದರು. ಅಲ್ಲದೆ ಮಾಳದಲ್ಲಿರುವ ಸಮಾಜ ಮಂದಿರಕ್ಕೆ ಹೋಗಲು ಸೂಕ್ತ ರಸ್ತೆಯ ಅಗತ್ಯವಿದೆ ಹಾಗೂ ಈ ಸಮಾಜ ಮಂದಿರದ ಸುತ್ತಲಿನ ಜಾಗ ಅತಿಕ್ರಮಣವಾಗಿದೆ ಎಂದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ತಹಶೀಲ್ದಾರ್‌ ಅವರು ನೀಡಿದರು.

ಹೆಬ್ರಿಯಲ್ಲಿ ಕುಂದುಕೊರತೆ ಸಭೆಗೆ ಆಗ್ರಹ
ಹೆಬ್ರಿ ಪ್ರತ್ಯೇಕ ತಾಲೂಕು ಕೇಂದ್ರವಾಗಿರುವುದರಿಂದ ಹೆಬ್ರಿಯ ಜನರ ಅನುಕೂಲಕ್ಕಾಗಿ ಹೆಬ್ರಿಯಲ್ಲಿ ಕುಂದುಕೊರತೆ ಸಭೆ ನಡೆಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್‌ ಅವರು ಹೆಬ್ರಿಯಲ್ಲಿ ಎಲ್ಲ ಇಲಾಖೆಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿಯೇ ಕುಂದುಕೊರತೆ ಸಭೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಬ್ರಿಯಲ್ಲಿ ಸಭೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಹೆಬ್ರಿ ತಹಶೀಲ್ದಾರ್‌ ಸತೀಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವಿಜಯಕುಮಾರ್‌ ಅವರು ಸ್ವಾಗತಿಸಿ, ವಂದಿಸಿದರು.

94ಸಿ ಯಡಿ ದಲಿತರಿಗೆ ಅನ್ಯಾಯ
ನಲ್ಲೂರು ಪಂಚಾಯತ್‌ ವ್ಯಾಪ್ತಿಯಲ್ಲಿ 94ಸಿ ಅಡಿಯಲ್ಲಿ ಇತರ ಸಮುದಾಯದವರಿಗೆ ಹಕ್ಕುಪತ್ರ ನೀಡಲಾಗಿದ್ದು ದಲಿತ ಸಮುದಾಯದವರಿಗೆ ಈ ವರೆಗೂ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಅಣ್ಣಪ್ಪ ನಕ್ರೆ ಹೇಳಿದರು. ಈ ಸಂದರ್ಭ ಸ್ಪಷ್ಟನೆ ನೀಡಿದ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರು 94ಸಿ ಅಡಿ ಅರ್ಜಿ ಸಲ್ಲಿಸಲಾದ ಸ್ಥಳವು ಡೀಮ್ಡ್ ಫಾರೆಸ್ಟ್‌ ಆಗಿದ್ದು ಈಗಾಗಲೇ ನೀಡಲಾಗಿರುವ ಹಕ್ಕುಪತ್ರಗಳನ್ನು ರದ್ದುಗೊಳಿಸಲಾಗುವುದು ಎಂದರು.

ನಿರ್ಮಾಣವಾಗದ ಅಂಬೇಡ್ಕರ್‌ ಭವನ
ಕಾರ್ಕಳದ ಕಾಬೆಟ್ಟುವಿನಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 1.60 ಲಕ್ಷ ರೂ. ಅನುದಾನ ಮಂಜೂರಾಗಿ 2 ವರ್ಷಗಳು ಕಳೆದಿದ್ದರೂ ಇನ್ನೂ ಟೆಂಡರ್‌ ಪ್ರಕ್ರಿಯೆ ನಡೆಯದಿರುವ ಬಗ್ಗೆ ರಮೇಶ್‌ ಪೆರ್ವಾಜೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರು, ಇದು ಸರಕಾರದ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆಯಾಗಿದ್ದು ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದೆ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪ್ರತಿ ಅಡಿಯ ಗಣಪತಿಗೆ 1.5ರಿಂದ 2 ಕೆ.ಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಬಳಕೆಯಾಗುತ್ತದೆ. ಇನ್ನು ಸರಾಸರಿ 5 ಅಡಿ ಗಣಪನಿಗೆ ಕನಿಷ್ಠ 20 ಕೆಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌...

  • ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಲಂಟಾನ ತೆರವುಗೊಳಿಸಬೇಕು, ಬಿದಿರು ಬೆಳೆಯಲು ಕ್ರಮ...

  • ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿರುವ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದ್ದು, ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ...

  • ಬೆಂಗಳೂರು: ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದು ರಾಜಕೀಯ ಮುಖಂಡರು ಮಾತ್ರವಲ್ಲದೆ, ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳಲ್ಲಿ...

  • ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳೀಗ ಪ್ಲಾಸ್ಟಿಕ್‌ ಬಳಕೆಯಿಂದ ಮುಕ್ತವಾಗಿವೆ. ವಿದ್ಯಾರ್ಥಿಗಳನ್ನು...

  • ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಭಾನುವಾರ ಪ್ರಹ್ಲಾದರಾಜರ ರಥೋತ್ಸವ ಅಸಂಖ್ಯ ಭಕ್ತರ...