ಬಸ್ರೂರು ಮೂರುಕೈ ಹೊಸ ಅಂಡರ್‌ಪಾಸ್‌ ನಿರಾತಂಕ

Team Udayavani, Nov 15, 2019, 5:48 AM IST

ಕುಂದಾಪುರ: ಬಸ್ರೂರು ಮೂರು ಕೈಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಪಾದಚಾರಿ ಅಂಡರ್‌ಪಾಸ್‌ ಕಾಮಗಾರಿ ನಿರಾತಂಕ ವಾಗಿ ನಡೆಯಲಿದೆ. ಕೋಡಿ ಭಾಗದ ಜನರ ಬೇಡಿಕೆಯಾಗಿ ಯು ಟರ್ನ್ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ “ಉದಯವಾಣಿ’ ಜತೆ ಮಾತನಾಡಿದರು.

ಬಸ್ರೂರು ಮೂರುಕೈಯಲ್ಲಿ ಈಗಾಗಲೇ ದೊಡ್ಡ ಅಂಡರ್‌ಪಾಸ್‌ ಕಾಮಗಾರಿ ಮುಗಿದಿದೆ. ಬಸ್ರೂರು ಕಡೆಯಿಂದ ಬರುವ ವಾಹನಗಳು ಕುಂದಾಪುರ ಕಡೆಗೆ ಬರಲು ಈ ಅಂಡರ್‌ಪಾಸ್‌ ಮೂಲಕ ತೆರಳಬಹುದು. ಇದರಲ್ಲಿ ತಲಾ 3 ಅಡಿಗಳಂತೆ ಎರಡು ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡಲು ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗ ಕಡೆಯಿಂದ ಬರುವ ಘನವಾಹನಗಳು, ದೊಡ್ಡ ಟ್ಯಾಂಕರ್‌ಗಳು, 10 ಚಕ್ರದ ವಾಹನಗಳು ತಿರುವು ಕಷ್ಟ ಎಂದು ಈ ಕಾಮಗಾರಿ ಸಂದರ್ಭ ವಾಹನ ಹೋಗಲು ಅನುವು ಮಾಡಿ ಪಾದಚಾರಿ ರಸ್ತೆಯನ್ನು ತೆಗೆಯಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ನೀಡಲೇಬೇಕು. ಇದರಿಂದಾಗಿ ಪ್ರತ್ಯೇಕ ಅಂಡರ್‌ಪಾಸ್‌ ರಚನೆಗೆ ಮಂಜೂರಾತಿ ದೊರಕಿದ್ದು ಟಿ.ಟಿ. ರೋಡ್‌ಗೆ ತಿರುಗುವಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿದ್ದರು. ಪರಿಶೀಲಿಸಿ ಸಂಬಂಧಪಟ್ಟವರ ಬಳಿ ಮಾತನಾಡಿ, ಈಗಾಗಲೇ ಕಾಮಗಾರಿ ಆರಂಭಿಸಿ ಪಂಚಾಂಗ ಹಾಕಿದ ಕಾರಣ ಸ್ಥಳಾಂತರ ಕಷ್ಟ. ಒಂದೊಮ್ಮೆ ಸ್ಥಳಾಂತರ ಮಾಡುವುದಾದರೂ, ರದ್ದು ಮಾಡುವುದಾದರೂ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಚೇರಿ ದಿಲ್ಲಿಯಿಂದಲೇ ಅನುಮತಿ ಬರಬೇಕು. ಇದು ಮತ್ತಷ್ಟು ಸಮಯ ಕೊಲ್ಲುತ್ತದೆ. ಕಾಮಗಾರಿ ವಿಳಂಬವಾಗುತ್ತದೆ. ಪಾದಚಾರಿಗಳಿಗೆ ದಾಟುವಷ್ಟು ಮಾತ್ರ ವ್ಯವಸ್ಥೆಯ ಅಂಡರ್‌ಪಾಸ್‌ ಇದಾಗಿದ್ದು 3.5 ಮೀ. ಎತ್ತರ ಇರುತ್ತದೆ. ವಿನಾಯಕ ಬಳಿ ಹೆದ್ದಾರಿ ಆರಂಭವಾದಲ್ಲಿಗೆ ಅಂಡರ್‌ಪಾಸ್‌ನ ಇಳಿಜಾರು ಮುಕ್ತಾಯವಾಗುತ್ತದೆ. ಆದ್ದರಿಂದ ಇಳಿಜಾರು ಮುಂದಕ್ಕೆ ಸಾಗುತ್ತದೆ ಎಂಬ ಕುರಿತು ಆತಂಕ ಬೇಡ. ಕೋಡಿ ಪ್ರದೇಶಕ್ಕೆ ಹೋಗುವವರಿಗೆ ಅನುಕೂಲವಾಗಿಸಲು ಅಪಘಾತ ತಾಣವಾಗದಂತೆ ಜಾಗರೂಕತೆ ವಹಿಸಿ, ಸಾಧ್ಯತೆಗಳನ್ನು ಪರಿಶೀಲಿಸಿ ಯು ಟರ್ನ್ ಮಾಡಿಕೊಡಲಾಗುವುದು ಎಂದು ಶಾಸಕರು ಪ್ರತಿಕ್ರಿಯಿಸಿದರು.

ಬಿಜೆಪಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಂಜು ಬಿಲ್ಲವ, ವಿನಾಯಕ ರಿಕ್ಷಾ ಸ್ಟಾಂಡ್‌ ಅಧ್ಯಕ್ಷ ಮಹೇಶ್‌ ಶೆಣೈ, ಸಿಐಟಿಯುವಿನ ವಿ. ಚಂದ್ರ, ಲಕ್ಷ್ಮಣ ಬರೆಕಟ್ಟು, ಹಂಗಳೂರು ಪಂಚಾಯತ್‌ ಮಾಜಿ ಅಧ್ಯಕ್ಷ ಆನಂದ ಪೂಜಾರಿ, ಇಂಟಕ್‌ನ ಮಹಾಬಲ, ದಿವಾಕರ ಕಡ್ಗಿ ಉಪಸ್ಥಿತರಿದ್ದರು.

ಯು ಟರ್ನ್ಗೆ ಮನವಿ
ಕೋಡಿ ಪ್ರದೇಶಕ್ಕೆ ಹೋಗುವ ನಾಗರಿಕರಿಗೆ ಅನುಕೂಲ ವಾಗುವಂತೆ ವಿನಾಯಕ ಥಿಯೇಟರ್‌ ಬಳಿ ರಾಷ್ಟ್ರೀಯ ಹೆದ್ದಾರಿಗೆ ಡಿವೈಡರ್‌ ನೀಡಬೇಕು ಎಂದು ಹಂಗಳೂರು ಕೋಡಿ ನಾಗರಿಕ ಹಿತರಕ್ಷಣಾ ಸಮಿತಿ ಕುಂದಾಪುರ ಆಗ್ರಹಿಸಿತ್ತು. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಪುರಸಭೆ ವ್ಯಾಪ್ತಿಯ ಮತ್ತು ಹಂಗಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿ ಹೊಂದಿಕೊಂಡಿರುವ ವಿನಾಯಕ ಟಾಕೀಸ್‌ ಬಳಿ ರಸ್ತೆ ತಿರುವನ್ನು ಮೀಸಲಿಡಬೇಕು. ಖಾಸಗಿ ವಿದ್ಯಾ ಸಂಸ್ಥೆಗಳು ಸೇರಿದಂತೆ ಅನೇಕ ವಿದ್ಯಾ ಸಂಸ್ಥೆಗಳು, ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಇದ್ದು 20ಕ್ಕೂ ಅಧಿಕ ಶಾಲಾ ವಾಹನಗಳು, ಖಾಸಗಿ ಬಸ್ಸುಗಳು ಬೆಳಗ್ಗೆಯಿಂದ ಸಂಜೆವರೆಗೆ ಅನೇಕ ವಾಹನಗಳು ಓಡಾಡುತ್ತವೆ. ಉಡುಪಿ ಕಡೆಯಿಂದ, ಕುಂದಾಪುರ ಕಡೆಯಿಂದ ಬರುವ ಪ್ರಯಾಣಿಕರು ಇಲ್ಲಿಯೇ ಬಸ್ಸಿಳಿಯುತ್ತಾರೆ. ಕೋಡಿ ಶಿಕ್ಷಣ ಸಂಸ್ಥೆಗಳಲಿ ಸುಮಾರು 1 ಸಾವಿರ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಇವರಿಗೆಲ್ಲ ಅನುಕೂಲವಾಗಲು ವಿನಾಯಕ ಥಿಯೇಟರ್‌ ಬಳಿಯೇ ಯು ಟರ್ನ್ ನೀಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ