“ಯಕ್ಷಗಾನದ ಅಂತಃಸತ್ವಕ್ಕೆ ಕುಂದುಂಟಾಗದಂತೆ ಪೋಷಿಸಿ’
Team Udayavani, Mar 29, 2018, 8:00 AM IST
ಕೊಲ್ಲೂರು: ಯಕ್ಷಗಾನದ ಅಂತಃಸತ್ವಕ್ಕೆ ಕುಂದುಂಟಾಗದಂತೆ ಪೋಷಿಸಿ ಬೆಳೆಸುವಲ್ಲಿ ಕಲಾವಿದರ ಸಾಧನೆ ಸಮಾಜಕ್ಕೊಂದು ಮಾದರಿ ಎಂದು ಕೊಲ್ಲೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಅರುಣ ಪ್ರಕಾಶ್ ಶೆಟ್ಟಿ ಹೇಳಿದರು.
ಕೇಂದ್ರ ಸಂಸ್ಕೃತಿ ಇಲಾಖೆ ಸಹಕಾರದೊಡನೆ ಹಾಲ್ಕಲ್ ಜೈನ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಉದಯ ಬೋವಿ ಅವರ ಸಂಯೋಜನೆಯಲ್ಲಿ ಪರಂಪರೆಯ ಯಕ್ಷಗಾನ ಆಯೋಜಿಸಿರುವುದು ಶ್ಲಾಘನೀಯ. ಯಕ್ಷಗಾನ ಕಲಾವಿದರ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸಲು ಸರಕಾರ ಹೊಸ ನೀತಿ ಪಾಲಿಸಬೇಕೆಂದರು.
ಅವಿರತ ಪ್ರಯತ್ನದೊಡನೆ ಶ್ರದ್ಧೆ, ಅಧ್ಯಯನವಿದ್ದಲ್ಲಿ ಮಾಡುವ ಕಾರ್ಯದಲ್ಲಿ ಯಶಸ್ಸು ಸಾಧ್ಯ. ಹಣ ಗಳಿಕೆಗಾಗಿ ಮಾತ್ರ ಕಲೆಯಾಗಬಾರದು. ಯಕ್ಷಗಾನದ ಪರಂಪರೆ ಉಳಿಸುವಲ್ಲಿ ಕಲಾವಿದರೊಡನೆ ಪ್ರೇಕ್ಷಕರ ಪ್ರತಿಕ್ರಿಯೆ ಬಹು ಮುಖ್ಯವಾದದ್ದು ಎಂದು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಕೆ. ಮೋಹನ್ ಹೇಳಿದರು. ಜಡ್ಕಲ್ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ ಸಭಾಧ್ಯಕ್ಷತೆ ವಹಿಸಿದ್ದರು.
ಕೋಟೆ ಜೈನ ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಸುಬ್ರಾಯ ಮಲ್ಯ, ಜಡ್ಕಲ್ ಗ್ರಾ.ಪಂ. ಸದಸ್ಯ ದೇವದಾಸ ಉಪಸ್ಥಿತರಿದ್ದರು.
ಯಕ್ಷ ದೇಗುಲ ಹಾಗೂ ಯಕ್ಷಾಂಗಣ ಟ್ರಸ್ಟ್ ರೂವಾರಿಗಳಾದ ಕೆ. ಮೋಹನ್ ಮತ್ತು ವೀಣಾ ಮೋಹನ್ ದಂಪತಿಯನ್ನು ಸಮ್ಮಾನಿಸಲಾಯಿತು. ಉದಯ ಬೋವಿ ಸ್ವಾಗತಿಸಿದರು. ಲಂಬೋದರ ಹೆಗಡೆ ನಿಟ್ಟೂರು ನಿರೂಪಿಸಿ, ವಂದಿಸಿದರು.