ವೀರಶೈವ, ಲಿಂಗಾಯತ ಹಿಂದೂ ಧರ್ಮದ ಅಂಗ: ಪೇಜಾವರ ಶ್ರೀ

Team Udayavani, Jul 25, 2017, 11:15 AM IST

ಉಡುಪಿ: ಹಿಂದೂ ದೇವತೆಗಳನ್ನು ಒಪ್ಪಿ ಆರಾಧಿಸುವವರು ಹಿಂದೂಗಳೇ ಆಗಿದ್ದಾರೆ. ಆದ್ದರಿಂದ ಲಿಂಗಾಯತರು ತಾವು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವೀರಶೈವ, ಲಿಂಗಾಯತ ಸಮಾಜದ ಹೊರಗಿನವನಾದರೂ ಈ ಸಮಾಜದ ಅನೇಕ ಮಠಾಧೀಶರೊಂದಿಗೆ ಆತ್ಮೀಯ ಒಡನಾಟವಿದ್ದ ಕಾರಣ ಇದನ್ನು ಹೇಳುತ್ತಿದ್ದೇನೆ. ಯಾರೂ ವಿಘಟನೆಗೆ ಅವಕಾಶ ಕೊಡದೆ ಸಂಘಟಿತರಾಗಬೇಕು ಎಂದರು.

ಶಿವ ಹಿಂದೂ ಧರ್ಮದ ದೇವತೆ ಹೌದೋ ಅಲ್ಲವೋ? ವೀರಶೈವರೂ, ಲಿಂಗಾಯತರೂ, ಬಸವಣ್ಣನವರೂ ಶಿವ ಪಾರಮ್ಯವನ್ನು ಒಪ್ಪಿದವರು. ಲಿಂಗಾಯತ ಧರ್ಮವು ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಯನ್ನು ಒಪ್ಪದಿರಬಹುದು. ಈ ಕಾರಣಕ್ಕಾಗಿಯೇ ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳುವುದು ಸರಿಯಾಗದು. ಜಾತಿ ವ್ಯವಸ್ಥೆಯನ್ನು ಒಪ್ಪದ ರಾಮಕೃಷ್ಣ ಆಶ್ರಮ, ಆರ್ಯ ಸಮಾಜ, ಸ್ವಾಮಿ ನಾರಾಯಣ ಪಂಥ, ಚೈತನ್ಯ ಪಂಥಗಳು ಹಿಂದೂ ಧರ್ಮದ ಭಾಗವೇ ಆಗಿಲ್ಲವೆ? ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೊಡ್ಡ ಸಂಖ್ಯೆಯಲ್ಲಿ ಶಿವನೇ ಪರದೈವವೆಂದು ನಂಬುವ ಹಿಂದೂಗಳಿರುವಾಗ ಶಿವಭಕ್ತರಾದ ಲಿಂಗಾಯತರು ಮಾತ್ರ ಹಿಂದೂಗಳಲ್ಲ ಎಂದು ಹೇಳುವುದು ಹೇಗೆ? ಶಿವಭಕ್ತರು, ವಿಷ್ಣು ಭಕ್ತರು ಹಿಂದೂಗಳಲ್ಲವಾದರೆ ಹಿಂದೂಗಳು ಯಾರು? ಆದ್ದರಿಂದ ಜಾತಿ ವ್ಯವಸ್ಥೆ ಒಪ್ಪಲಿ, ಒಪ್ಪದೆ ಇರಲಿ ಶಿವಭಕ್ತರೆಲ್ಲ ಹಿಂದೂಗಳೇ ಎಂದರು.

ಹಿಂದಿನ ಅನುಭವ…
ಹಿಂದೆ ಅಲ್ಪಸಂಖ್ಯಾಕರೆಂದು ಘೋಷಿಸಿಕೊಳ್ಳಲು ರಾಮ ಕೃಷ್ಣಾಶ್ರಮದವರು ಪ್ರಯತ್ನಿಸಿದಾಗ ಅದನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪಲಿಲ್ಲ. ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಂತಹ ಪ್ರಯತ್ನ ನಡೆದಿದೆ ಎಂದು ಅವರಲ್ಲಿಯೇ ಬಹಿರಂಗ ಹೇಳಿಕೆ ನೀಡಿದವರೂ ಇದ್ದಾರೆ ಎಂದರು.

ಸ್ವಲ್ಪ ವ್ಯತ್ಯಾಸ ಇದ್ದದ್ದೇ…
ವೀರಶೈವ ಮತ್ತು ಲಿಂಗಾಯತ ಮತಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿರಬಹುದು. ಬಸವಣ್ಣನವರು ವೇದವನ್ನು ಒಪ್ಪದಿದ್ದರೂ ಪುರಾಣಗಳ ವಾಕ್ಯಗಳನ್ನು ಉಲ್ಲೇಖೀಸಿಯೇ ಶಿವ ಪಾರಮ್ಯವನ್ನು ಪ್ರತಿಪಾದಿಸಿದ್ದಾರೆ. ವೀರಶೈವರಿಗೂ, ಲಿಂಗಾಯತರಿಗೂ ಇಷ್ಟಲಿಂಗ ಪೂಜೆ ಮುಖ್ಯ. ಬಸವಣ್ಣನವರನ್ನು ಶಿವಭಕ್ತಿ ಭಂಡಾರಿ ಎನಿಸಿಕೊಂಡಿದ್ದಾರೆ. ಆದ್ದರಿಂದ ವೀರಶೈವ ಅಥವಾ ಲಿಂಗಾಯತರ ಹೆಸರಿನಲ್ಲಿ ಒಂದಾಗಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಜಾತಿಗಳೊಳಗೆ ಸಾಮರಸ್ಯ
ಜಾತಿ ವ್ಯವಸ್ಥೆಯನ್ನು ಎಷ್ಟು ಮಟ್ಟಿಗೆ ತೊಡೆದು ಹಾಕುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಜಾತಿ ವ್ಯವಸ್ಥೆಯನ್ನು ನಾನೊಬ್ಬನೇ ತೊಡೆದು ಹಾಕಲಾಗುವುದಿಲ್ಲ. ಜಾತಿ ವ್ಯವಸ್ಥೆಯೂ ಅಷ್ಟು ಬಲವಾಗಿದೆ. ನಾವು ಜಾತಿಗಳೊಳಗೆ ಸಾಮರಸ್ಯವನ್ನು ತರಲು ಪ್ರಯತ್ನಿಸುತ್ತೇನೆ ಎಂದರು.

ಧಾರ್ಮಿಕ ಸ್ವಾತಂತ್ರ್ಯವೂ ಇದೆ
ದಲಿತರನ್ನು ಗರ್ಭಗುಡಿಗೆ ಬಿಡುತ್ತೀರಾ? ನಿಮ್ಮೊಳಗೆ ಸಾಮರಸ್ಯ ಎಷ್ಟಿದೆ? ಏಕಾದಶಿ ಬೇರೆ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನಾವು ದಲಿತರಿಗೂ ದೀಕ್ಷೆಯನ್ನು ಕೊಡುತ್ತಿದ್ದೇವೆ. ಮಠ, ದೇವಸ್ಥಾನಗಳೊಳಗಿನ ವ್ಯವಸ್ಥೆ ಬೇರೆ ಇರುತ್ತದೆ. ಇದು ಧಾರ್ಮಿಕ ವಿಚಾರ. ಪ್ರತಿಯೊಂದು ಸಮಾಜದಲ್ಲಿಯೂ ತಾತ್ವಿಕ ವಿಚಾರಗಳು ಬೇರೆ ಇರುತ್ತವೆ. ಪ್ರಾಚೀನ ಗಣಿತ ಸರಿಯೋ? ದೃಗ್ಗಣಿತ ಸರಿಯೋ ಎಂಬ ಜಿಜ್ಞಾಸೆ ಇರುವಾಗ ಬಲಾತ್ಕಾರ ಮಾಡಲು ಸಾಧ್ಯವಿಲ್ಲ. ಏಕಾದಶಿ ಬೇರೆ ಮಾಡಿದರೂ ತಣ್ತೀ ಸಿದ್ಧಾಂತಕ್ಕೆ ತೊಂದರೆ ಇಲ್ಲ, ನಾವು ಸಾಮಾಜಿಕವಾಗಿ ಒಂದಾಗಿದ್ದೇವೆ  ಎಂದರು.

ಅಹಿಂದಕ್ಕೆ ವಿರೋಧವಿಲ್ಲ, ಆದರೆ…
ಸಿದ್ದರಾಮಯ್ಯನವರು ಅಹಿಂದವನ್ನು ಬಲಪಡಿಸುವ ಜತೆಗೆ ಹಿಂದುತ್ವದ ಪರವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರಲ್ಲ? ಎಂಬ ಪ್ರಶ್ನೆಗೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ನಾವು ಅಹಿಂದಕ್ಕೆ ವಿರೋಧಿಯಲ್ಲ. ಯಾರಿಗೂ ಅನ್ಯಾಯವಾಗಬಾರದು. ಅಧಿಕಾರಿಗಳು ತಪ್ಪು ಮಾಡಿದರೆ ಶಿಕ್ಷೆ ಕೊಡಬಹುದೆ ವಿನಾ ಧೋರಣೆ ಅನುಸರಿಸಿ ಶಿಕ್ಷೆ ಕೊಡುವುದು ತಪ್ಪು ಎಂದರು.

ಪಾಕ್‌ ಸೌಹಾರ್ದಕ್ಕೆ ಕಾಶ್ಮೀರ ಬಿಡಬೇಕೆ?
ಈದ್‌ ಉಪಾಹಾರ ಕೂಟಕ್ಕೆ ಸಂಬಂಧಿಸಿ, ಶಾಂತಿ ಸೌಹಾರ್ದದಲ್ಲಿ ಕಳಕಳಿ ಇದ್ದರೆ ರಾಮಮಂದಿರ ಚಳವಳಿಯಿಂದ ಹಿಂದೆ ಸರಿಯಬೇಕೆಂದು ಕೆಲವು ಬುದ್ಧಿಜೀವಿಗಳು ಹೇಳುತ್ತಿದ್ದಾರೆ. ಸೌಹಾರ್ದವೆಂದರೆ ನಮ್ಮ ಸಿದ್ಧಾಂತ, ಧೋರಣೆಯನ್ನು ತೊರೆದು ಶರಣಾಗತಿಯಲ್ಲ. ಪಾಕಿಸ್ಥಾನ, ಚೀನ ಜತೆಗೆ ಸೌಹಾರ್ದದಿಂದ ಇರಬೇಕಾದರೆ ಗಡಿ ಪ್ರದೇಶವನ್ನು ಬಿಟ್ಟುಕೊಡಬೇಕೆಂದು ಅರ್ಥವೆ? ನಮ್ಮ ಸಿದ್ಧಾಂತವನ್ನು ಇಟ್ಟುಕೊಂಡೇ ಸೌಹಾರ್ದಕ್ಕೆ ಪ್ರಯತ್ನ ಮಾಡಬಹುದು. ವಿ.ಪಿ.ಸಿಂಗ್‌, ಪಿ.ವಿ.ನರಸಿಂಹ ರಾವ್‌ ಅವರ ಕಾಲದಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಯಲು ಪ್ರಯತ್ನಿಸಿದ್ದೆ. ಮಂದಿರ ನಿರ್ಮಾಣ ಚಳವಳಿಗೆ ಈಗಲೂ ಬದ್ಧ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ