ಪೊಲೀಸ್‌ ಇಲಾಖೆಯ ಗೃಹ ರಕ್ಷಕರಿಗಿಲ್ಲ ಆರ್ಥಿಕ ರಕ್ಷೆ !

ಸರಿಯಾದ ಸಮಯಕ್ಕೆ ಬಾರದ ಸಂಬಳ ; ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ಸೇವೆ ,ಜೀವನ ಭದ್ರತೆಗಾಗಿ ಹೋರಾಟ

Team Udayavani, Aug 27, 2019, 5:26 AM IST

ಉಡುಪಿ: ಸರಕಾರದ ಆರ್ಥಿಕ ಅನುದಾನದ ಕೊರತೆಯಿಂದ ಅವಿಭಜಿತ ಪೊಲೀಸ್‌ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸಿಬಂದಿಗೆ ಕಳೆದ 2 ತಿಂಗಳಿಂದ ಸಂಬಳ ದೊರೆತಿಲ್ಲ. ಹೀಗಾಗಿ ಪೊಲೀಸರೊಂದಿಗೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಕೈಜೋಡಿಸಿದವರ ಜೀವನದಲ್ಲಿ ಇದೀಗ ನೆಮ್ಮದಿ ಮಾಯವಾಗಿದೆ.

ಉಡುಪಿ: 500 ಗೃಹರಕ್ಷಕ ಸಿಬಂದಿ
ಉಡುಪಿ ಜಿಲ್ಲೆಯಲ್ಲಿ 500 ಮಂದಿ ಗೃಹರಕ್ಷಕರಿದ್ದು, ಅವರಲ್ಲಿ 132 ಜನ ಕರಾವಳಿ ಪೊಲೀಸ್‌ ಪಡೆ, 106 ಆರಕ್ಷಕರ ಠಾಣೆ, ಪ್ರವಾಸಿ ಮಿತ್ರದಲ್ಲಿ 10, ಗಣಿ ಇಲಾಖೆ 5, ಅಗ್ನಿಶಾಮಕ ದಳ 19, ನೆರೆ ನಿರ್ವಹಣೆ 10, ಜೈಲು ಕರ್ತವ್ಯ 10 ಜನರು ಗೃಹ ರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಪೊಲೀಸ್‌ ಇಲಾಖೆಯಡಿ ಕರ್ತವ್ಯ ನಿರ್ವಹಿಸುವವರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ.

ದ.ಕ.: 1000 ಗೃಹ ರಕ್ಷಕ ಸಿಬಂದಿ
ದ.ಕ. ಜಿಲ್ಲೆಯಲ್ಲಿ ಒಟ್ಟು 1,000 ಮಂದಿ ಗೃಹರಕ್ಷಕರಿದ್ದಾರೆ, ಅವರಲ್ಲಿ 400 ಜನರು ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 600 ಮಂದಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಖಾತೆಗೆ ನೇರ ಸಂದಾಯ
ಪೊಲೀಸ್‌ ಸಿಬಂದಿ ಕೊರತೆಯ ಕಾರಣದಿಂದಾಗಿ ಗೃಹ ಇಲಾಖೆ ಕೆಲವು ವರ್ಷಗಳ ಹಿಂದೆ ಗೃಹ ರಕ್ಷಕ ದಳದ ಸಿಬಂದಿಯನ್ನೇ ಗೌರವಧನದ ಆಧಾರದ ಮೇಲೆ ಸೇವೆಗೆ ನಿಯೋಜಿಸಿಕೊಂಡಿತ್ತು. ಆರಂಭದಲ್ಲಿ ಪೊಲೀಸ್‌ ಇಲಾಖೆ ಗೃಹ ರಕ್ಷಕರ ಸಂಬಳವನ್ನು ಇಲಾಖೆ ಮೂಲಕ ಪಾವತಿ ಮಾಡುತ್ತಿತ್ತು. ಆದರೆ ಕೆಲವು ಸಮಯದ ಹಿಂದೆ ಪೊಲೀಸ್‌ ಇಲಾಖೆ ಸಿಬಂದಿಯ ಬ್ಯಾಂಕ್‌ ಖಾತೆಗೆ ಗೌರವಧನವನ್ನು ನೇರವಾಗಿ ಸಂದಾಯ ಮಾಡಲಾಗುತ್ತಿತ್ತು. ಇದೀಗ ಸಿಬಂದಿಗಳ ಸಂಬಳ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ ಎನ್ನುವ ಆರೋಪಗಳಿವೆ.

ಸಾಲಕ್ಕೆ ಮೊರೆ
ಪೊಲೀಸ್‌ ಕಾರ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳ ಸಿಬಂದಿಗಳಿಗೆ ಸದ್ಯ ಸಂಬಳವಿಲ್ಲದೆ ಜೀವನ ನಿರ್ವಹಣೆಗಾಗಿ ಸಾಲದ ಮೊರೆಹೋಗಿ, ಸಂಕಷ್ಟಕ್ಕೆ ಸಿಲುಕಿದ್ದಾರೆ.ಭದ್ರತೆಗಾಗಿ ಪರದಾಡುವ ಸ್ಥಿತಿ ಪೊಲೀಸ್‌ ಇಲಾಖೆ ವತಿಯಿಂದ ಪ್ರತಿದಿನಕ್ಕೆ 380 ರಂತೆ ಗೌರವಧನ ನೀಡಲಾಗುತ್ತದೆ. ತಿಂಗಳಪೂರ್ತಿ ಕೆಲಸ ಮಾಡಿದರೆ 9 ಸಾವಿರ ಸಂಬಳ ಸಿಗುತ್ತದೆ. ಅನಾರೋಗ್ಯ, ಇನ್ನಾವುದೋ ಕಾರಣಕ್ಕೆ ರಜೆ ಹಾಕಿದರೆ ಅದರಲ್ಲಿ ಕೂಡ ಕಡಿತವಾಗುತ್ತದೆ. ಗೃಹರಕ್ಷಕರು ಇವತ್ತು ಜೀವನ ಭದ್ರತೆಗಾಗಿ ಪರದಾಡುವ ಸ್ಥಿತಿ ಬಂದಿದೆ ಎಂದು ಗೃಹ ರಕ್ಷಕದಳದ ಸಿಬಂದಿಯೊಬ್ಬರು ಬೇಸರ ವ್ಯಕ್ತಪಡಿದರು.

ರಾಜ್ಯದ ಸಮಸ್ಯೆ
ಪೊಲೀಸ್‌ ಇಲಾಖೆಯಡಿ ಕರ್ತವ್ಯ ನಿರ್ವಹಿಸುವವರಿಗೆ ಇಲಾಖೆಯೇ ವೇತನ ನೀಡಬೇಕು. ಪ್ರಸ್ತುತ ಸರಕಾರದಿಂದ ಪೊಲೀಸ್‌ ಇಲಾಖೆಗೆ ಅನುದಾನ ಬಂದಿಲ್ಲ. ಇದರಿಂದಾಗಿ ಗೃಹರಕ್ಷಕ ಸಿಬಂದಿಗಳಿಗೆ ಕಾರಣ ವೇತನ ಪಾವತಿಯಾಗುತ್ತಿಲ್ಲ. ಇದು ರಾಜ್ಯದ ಸಮಸ್ಯೆಯಾಗಿದೆ.

ದ.ಕ. ಜಿಲ್ಲೆಯಲ್ಲಿ ಗೃಹ ರಕ್ಷಕ ಸಿಬಂದಿಗಳ ವೇತನ ಪಾವತಿಯಾಗಿದೆ. ಯಾವುದೇ ಸಮಸ್ಯೆಯಿಲ್ಲ.
-ಡಾ| ಮುರಲೀ ಮೋಹನ್‌ ಚೂಂತಾರು, ಸಮಾದೇಷ್ಟರು, ದ.ಕ. ಜಿಲ್ಲಾ ಗೃಹರಕ್ಷಕದಳ

ವೇತನ ಬರುತ್ತಿದೆ. ಕೆಲವು ಸಂದರ್ಭ ತಾಂತ್ರಿಕ ಕಾರಣಗಳಿಂದ ವೇತನ ಬಟವಾಡೆಯಲ್ಲಿ ತಡವಾಗಿರಬಹುದು.
– ಡಾ|ಪ್ರಶಾಂತ ಶೆಟ್ಟಿ, ಸಮಾದೇಷ್ಟರು, ಉಡುಪಿ ಜಿಲ್ಲಾ ಗೃಹರಕ್ಷಕದಳ.

-ತೃಪ್ತಿ ಕುಮ್ರಗೋಡು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ