“ಪವರ್‌ ಮ್ಯಾನ್‌’ಗಳಿಗೂ ಸಹನಾಶಕ್ತಿ ಪರೀಕ್ಷೆ!

Team Udayavani, Oct 22, 2019, 5:37 AM IST

ಉಡುಪಿ: ನಗರದ ಅಜ್ಜರಕಾಡು ಮೈದಾನದಲ್ಲಿ ನಡೆದ ಮೆಸ್ಕಾಂ ಕಿರಿಯ ಪವರ್‌ ಮ್ಯಾನ್‌ (ಲೈನ್‌ ಮ್ಯಾನ್‌) ಸಹನಾಶಕ್ತಿ ಪರೀಕ್ಷೆಯಲ್ಲಿ ಸಾವಿರಾರು ಮಂದಿ ಅಭ್ಯರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ಮೆಸ್ಕಾಂ ಸೇರಿದಂತೆ ರಾಜ್ಯದ ಇತರೆ 5 ವಿದ್ಯುತ್‌ ಕಂಪೆನಿಗಳು ಹಾಗೂ ಕೆಪಿಟಿಸಿಎಲ್‌ ಕಿರಿಯ ಪವರ್‌ ಮ್ಯಾನ್‌ಹುದ್ದೆ ನೇಮಕಾತಿ ಪ್ರಕ್ರಿಯೆ ಏಕಕಾಲಕ್ಕೆ ಪ್ರಾರಂಭಿಸಿದೆ. ಎಸ್‌ಎಸ್‌ಎಲ್‌ಸಿ ಅಂಕದ ಅರ್ಹತೆ ಆಧಾರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯಲ್ಲಿ ಅ. 21, 22ರಂದು ಸಹನಾ ಶಕ್ತಿ ಪರೀಕ್ಷೆ ನಡೆಯುತ್ತಿದೆ.

ಉಡುಪಿ ಜಿಲ್ಲೆಗೆ 182 ಹುದ್ದೆ
ನೇಮಕಾತಿಯಿಂದ ದ.ಕ., ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳನ್ನು ಒಳ‌ಗೊಂಡ ಮೆಸ್ಕಾಂನಲ್ಲಿ ಖಾಲಿಯಿರುವ 667 ಹುದ್ದೆ ಭರ್ತಿಯಾಗಲಿದೆ. ಜಿÇÉೆಯಲ್ಲಿ ಕಳೆದ ನಾಲ್ಕು ವರ್ಷದಿಂದ ವಿವಿಧ ಕಾರಣಗಳಿಂದ ತೆರವಾದ 182 ಪವರ್‌ ಮ್ಯಾನ್‌ ಹುದ್ದೆಗಳು ಈ ನೇಮಕಾತಿಯ ಮೂಲಕ ಭರ್ತಿಯಾಗಲಿದೆ.

ಎರಡು ದಿನ ಪರೀಕ್ಷೆ
ಮೆಸ್ಕಾಂಗೆ ಹುದ್ದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1,095 ಅಭ್ಯರ್ಥಿಳು ಉಡುಪಿಯಲ್ಲಿ ನಡೆಯುತ್ತಿರುವ ಮೆಸ್ಕಾಂ ಕಿರಿಯ ಪವರ್‌ಮ್ಯಾನ್‌ ಸಹನಾ ಶಕ್ತಿ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಮೊದಲ ದಿನ ಸೋಮವಾರ 548 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ.

ಆಯ್ಕೆ ಹೇಗೆ?
ಸಹನಾ ಪರೀಕ್ಷೆಯಲ್ಲಿ ಮುಖ್ಯವಾಗಿ ಅಭ್ಯರ್ಥಿ ಕಂಬ ಹತ್ತುವ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಯಶಸ್ವಿಯಾದವರನ್ನು ಎರಡನೇ ಸುತ್ತಿನ ಪರೀಕ್ಷೆಗೆ ಅನುಮತಿ ನೀಡಲಾಗುತ್ತಿದೆ. 100 ಮೀ., 800 ಮೀ. ಓಟ, ಗುಂಡು ಎಸೆತ, ಸ್ಕಿಪ್ಪಿಂಗ್‌ನಲ್ಲಿ ಸ್ಪರ್ಧೆ ಇರಲಿದೆ. ಇವುಗಳಲ್ಲಿ ಯಾವುದಾದರೂ ಎರಡು ವಿಭಾಗದಲ್ಲಿ ನಿಗದಿ ಸಮಯದೊಳಗೆ ಗುರಿ ಮುಟ್ಟಿದರನ್ನು ಆಯ್ಕೆ ಮಾಡಲಾಗುತ್ತದೆ.

7 ಕ್ಯಾಮೆರಾ – 200 ಸಿಬಂದಿ
ಜಿಲ್ಲಾ ಮೆಸ್ಕಾಂ ಕಿರಿಯ ಲೈನ್‌ ಮ್ಯಾನ್‌ಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸುಮಾರು 7 ಕ್ಯಾಮೆರಗಳನ್ನು ಪರೀಕ್ಷೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಯಾವ ಅಭ್ಯರ್ಥಿ ಎಲ್ಲ ಪರೀಕ್ಷೆಗಳನ್ನು ಸರಿಯಾಗಿ ಎದುರಿಸಿದರೆ ಮಾತ್ರ ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 200 ಸಿಬಂದಿಗಳು ಹಾಗೂ 12 ಮಂದಿ ದೈಹಿಕ ಶಿಕ್ಷಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

1,500 ಜನರಿಗೆ ಊಟದ ವ್ಯವಸ್ಥೆ
ದೂರದ ಊರಿನಿಂದ ಕಿರಿಯ ಪವರ್‌ಮ್ಯಾನ್‌ ನೇಮಕಾತಿಗೆ ಆಗಮಿಸಿ ಅಭ್ಯರ್ಥಿ ಹಾಗೂ ಪೋಷಕರಿಗೆ ಮೆಸ್ಕಾಂ ಸಹೋದ್ಯೋಗಿ ಸ್ನೇಹಿತರು, ವಿದ್ಯುತ್‌ ಸಂಚಾರಿ, ಹಿತೈಷಿ, ಗುತ್ತಿಗೆದಾರ ಮಿತ್ರರು ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.ಮೊದಲ ದಿನ 1,500 ಜನರು ಊಟ ಸೇವಿಸಿದ್ದಾರೆ.

ಸ್ಥಳೀಯರ ಕೊರತೆ
ಕಿರಿಯ ಪವರ್‌ಮ್ಯಾನ್‌ ಹುದ್ದೆ ನೇಮಕಾತಿಯಲ್ಲಿ ಸ್ಥಳೀಯ ಅಭ್ಯರ್ಥಿಗಳ ಕೊರತೆ ಇತ್ತು. ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿನಲ್ಲಿ ಶೇ. 85ರಷ್ಟು ಅಂಕ ಪಡೆಯುವುದು ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದರಿಂದಾಗಿ ಈ ಹುದ್ದೆಗೆ ಆಸಕ್ತಿ ವಹಿಸುತ್ತಿಲ್ಲ. ಆಸಕ್ತಿ ಇರುವವರಿಗೆ ಮಾರ್ಕ್‌ ಕೊರತೆಯಿಂದ ಅರ್ಜಿ ಸಲ್ಲಿಸುತ್ತಿಲ್ಲ. ಇದರಿಂದಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೂರು ವರ್ಷ ತರಬೇತಿ
ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ಮೂರು ವರ್ಷಗಳ ತರಬೇತಿ ನೀಡಲಾಗುತ್ತದೆ. ಮೂರು ವರ್ಷಗಳ ಪ್ರತಿ ತಿಂಗಳು 10,000 ರಿಂದ 12,000 ಶಿಷ್ಯ ವೇತನ ನೀಡಲಾಗುತ್ತದೆ. ಆ ಬಳಿಕ ಸರಕಾರದ ಮಾನದಂಡದಲ್ಲಿ 30,000 ರೂ. ಮಾಸಿಕ ವೇತನ ದೊರೆಯಲಿದೆ.

ಕಂಬವೇರಿದ “ಪವರ್‌ (ವು)ಮನ್‌’ಗಳು
ಪವರ್‌ ಮ್ಯಾನ್‌ ಸಹನಾಶಕ್ತಿ ಪರೀಕ್ಷೆಯಲ್ಲಿ 25 ಮಂದಿ ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಅವರಲ್ಲಿ ಮೂರು ಮಹಿಳಾ ಅಭ್ಯರ್ಥಿಗಳು ಪುರುಷರಿಗೆ ಸರಿಸಮಾವಾಗಿ ವಿದ್ಯುತ್‌ ಕಂಬವೇರಿ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಾರೆ.

ರ್‍ಯಾಂಕಿಂಗ್‌ ಆಧಾರ
ಉಡುಪಿ ಅಜ್ಜರಕಾಡಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಪಟ್ಟಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಅಲ್ಲಿ ಅಭ್ಯರ್ಥಿಗಳ ರ್‍ಯಾಂಕಿಂಗ್‌ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.
-ನರಸಿಂಹ ಪಂಡಿತ್‌, ಮೆಸ್ಕಾಂ ಅಧೀಕ್ಷಕ ಉಡುಪಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ