ಕುಂದಾಪುರ: ಫ್ಲೈಓವರ್‌ಗಾಗಿ ಹೆದ್ದಾರಿಗಿಳಿದ ಪ್ರತಿಭಟನಕಾರರು

ರಸ್ತೆ ತಡೆಗೆ ನಿರಾಕರಿಸಿದ ಪೊಲೀಸರು, ಮಾತಿನ ಚಕಮಕಿ

Team Udayavani, Dec 3, 2019, 5:56 PM IST

ಕುಂದಾಪುರ: ಕುಂದಾಪುರ ನಗರದ ಅಂದಗೆಡಿಸಿ ಸುಂದರ ಕುಂದಾಪುರ ಕನಸನ್ನು ಭಗ್ನಗೊಳಿಸಿದೆ ಎಂದು ಆರೋಪಿಸಿ ಫ್ಲೈಓವರ್‌ ಕಾಮಗಾರಿ ಬೇಗ ಪೂರೈಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ರಾ.ಹೆದ್ದಾರಿ ತಡೆಗೆ ಮುಂದಾದರು. ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ. ಹೆದ್ದಾರಿ ಅಧಿಕಾರಿಗಳ ಜತೆ ಪ್ರತಿಭಟನಕಾರರಿಗೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಗೆ ಬೆಂಬಲ ಸೂಚಿಸಲು ಬಂದಿದ್ದ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರು ಪ್ರತಿಭಟನೆಯಲ್ಲಿದ್ದ ಕೆಲವರ ವರ್ತನೆಯಿಂದಾಗಿ ಅರ್ಧದಿಂದ ಹೊರನಡೆದು ಮನವೊಲಿಸಿದ ಬಳಿಕ ಮರಳಿ ಬಂದ ಘಟನೆಗೂ ಪ್ರತಿಭಟನೆ ಸಾಕ್ಷಿಯಾಯಿತು. ಸ್ಥಳಕ್ಕೆ ಎಸಿ, ರಾ.ಹೆ. ಎಂಜಿನಿಯರ್‌, ನವಯುಗ ಎಂಜಿನಿಯರ್‌ ಭೇಟಿ ನೀಡಿದರು. ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ಗಡುವು
ಮನವಿ ಆಲಿಸಿದ ಸಹಾಯಕ ಕಮಿಷನರ್‌ ಕೆ. ರಾಜು, 4 ದಿನದಲ್ಲಿ ಕೆಲಸ ಚುರುಕುಗೊಳಿಸಲು ಸೂಚಿಸಿದರು. ವಾರಕ್ಕೊಮ್ಮೆ ಕೆಲಸದ ಮಾಹಿತಿ ನೀಡಬೇಕು, ಈಗಾಗಲೇ ಹಾಕಿದ ಸೆಕ್ಷನ್‌ 133ನ್ನು ಮತ್ತೆ ತೆರೆಯುವುದಾಗಿ ಹೇಳಿದರು.

ರಾ.ಹೆ. ಎಂಜಿನಿಯರ್‌ ರಮೇಶ್‌, ನವಯುಗ ಎಂಜಿನಿಯರ್‌ ರಾಘವೇಂದ್ರ, ಮಾ.31ಕ್ಕೆ ಫ್ಲೈಓವರ್‌, ಮೇ 31ಕ್ಕೆ ಬಸೂÅರು ಮೂರುಕೈ ಅಂಡರ್‌ಪಾಸ್‌ ಕೆಲಸ ಮುಗಿಸುವುದಾಗಿ ಭರವಸೆ ನೀಡಿದರು.

ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಬಾಕಿ ಸರ್ವಿಸ್‌ ರಸ್ತೆ, ಫ್ಲೈಓವರ್‌, ಸೇತುವೆಗಳಿಗಾಗಿ ಇಲ್ಲಿ ಹೋರಾಡುವುದರ ಜತೆಗೆ ದಿಲ್ಲಿಯಲ್ಲೂ ಹೋರಾಡಬೇಕು. ಬಾಕಿ ಉಳಿದ ಕಾಮಗಾರಿಯನ್ನು ಬದಲಿ ಗುತ್ತಿಗೆದಾರರಿಗೆ ಒಳಗುತ್ತಿಗೆ ನೀಡುವ ಕುರಿತು ತೀರ್ಮಾನವಾಗಬೇಕು. ಕಾಮಗಾರಿ ಅಭಿವೃದ್ಧಿಯ ಮಾಹಿತಿಯನ್ನು ವಾರಕ್ಕೊಮ್ಮೆ ಎಸಿಗೆ ಕೊಡಬೇಕು ಎಂದರು.

ಮಾಹಿತಿಯಿಲ್ಲ
ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿ ಹಾಗೂ ಕುಂದಾಪುರ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಆಯೋಜನೆಯಾಗಿತ್ತು. ಜಾಗೃತ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಹೆದ್ದಾರಿ ಸ್ಥಿತಿ ಏನಾಗುತ್ತಿದೆ ಎಂದು ಜನಪ್ರತಿನಿಧಿಗಳಿಗೇ ಮಾಹಿತಿಯಿಲ್ಲ. ಶೇ. 45 ಮಾತ್ರ ಕೆಲಸವಾಗಿದ್ದು 93 ಶೇ. ಎಂದು ಸುಳ್ಳು ಹೇಳುತ್ತಿದ್ದಾರೆ. 640 ಕೋ.ರೂ.ಗಳಿಂದ 1,200 ಕೋ.ರೂ.ಗೆ ಕಾಮಗಾರಿ ವೆಚ್ಚ ಏರಿದೆ ಎಂದರು.

ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಸುಂಕ ಕಟ್ಟಿ ಸಂಕಟಪಡುವ ಸ್ಥಿತಿ ಬಂದಿದೆ. ನಮ್ಮ ರಸ್ತೆ ನಮ್ಮ ಹಕ್ಕು. ಅಪಘಾತ ಸಂದರ್ಭ ಪ್ರಾಧಿಕಾರ, ಗುತ್ತಿಗೆದಾರರ ಮೇಲೆ ಕೇಸು ಹಾಕಬೇಕು ಎಂದರು.

ಹೋರಾಟ ಸಮಿತಿಯ ಕಿಶೋರ್‌ ಕುಮಾರ್‌ ಕುಂದಾಪುರ, ಜನರ ತಾಳ್ಮೆಗೆ ಮಿತಿಯಿದೆ. 10 ವರ್ಷಗಳಿಂದ ಈ ದುರವಸ್ಥೆ ನೋಡಿ ಸಾಕಾಗಿದೆ. ಮತಯಾಚನೆಗೆ ಬರುವವರು ಆಮೇಲೆ ಜನಹಿತ ಮರೆತು ಬಿಡುವ ಸ್ಥಿತಿ ಬಂದಿದೆ. ಜನರ ಮುಗ್ಧತೆಯ ದುರುಪಯೋಗವಾಗುತ್ತಿದೆ ಎಂದರು.

ಮುಷ್ಕರ
ಸಿಪಿಐಎಂ ಮುಖಂಡ ಎಚ್‌.ನರಸಿಂಹ, ಮುಂದಿನಹ ತಿಂಗಳು ಎಡಪಕ್ಷಗಳಿಂದ ಸಾರ್ವತ್ರಿಕ ಮುಷ್ಕರ ನಡೆಯಲಿದ್ದು ಫ್ಲೈಓವರ್‌ ವಿಚಾರವೂ ಇರಲಿದೆ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಗುತ್ತಿಗೆದಾರರು ಕೇವಲ ಗಡುವು ನೀಡುತ್ತಿದ್ದಾರೆ. ಕೆಲಸ ಮಾಡುವುದೇ ಕಾಣುವುದಿಲ್ಲ ನಂಬಿಕೆ ಹೇಗೆ ಬರಬೇಕು ಎಂದರು.

ಉಪಸ್ಥಿತಿ
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ನಿತ್ಯಾನಂದ ಶೆಟ್ಟಿ ಅಂಪಾರು, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ಕಾಂಗ್ರೆಸ್‌ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿನೋದ್‌ ಕ್ರಾಸ್ಟೊ, ಆಶಾ, ಕೇಶವ ಭಟ್‌, ತಾ.ಪಂ. ಸದಸ್ಯ ವಾಸುದೇವ ಪೈ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಗಿರೀಶ್‌ ಜಿ.ಕೆ., ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಬ್ಬು ಮಹಮ್ಮದ್‌, ವಿದ್ಯುತ್‌ ಗುತ್ತಿಗೆದಾರ ಕೆ.ಆರ್‌. ನಾಯಕ್‌, ಗಣ್ಯರಾದ ಕೃಷ್ಣಪ್ರಸಾದ ಅಡ್ಯಂತಾಯ, ಅನಂತಕೃಷ್ಣ ಕೊಡ್ಗಿ, ನ್ಯಾಯವಾದಿ ಎ.ಎಸ್‌.ಎನ್‌. ಹೆಬ್ಟಾರ್‌, ರೋಟರಿ ಕ್ಲಬ್‌ ಮಿಡ್‌ಟೌನ್‌ ಕಾರ್ಯದರ್ಶಿ ಪ್ರವೀಣ್‌, ಹೆದ್ದಾರಿ ಹೋರಾಟ ಸಮಿತಿ ಸಾಸ್ತಾನ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ, ನಿಯೋಜಿತ ಅಧ್ಯಕ್ಷ ಶ್ಯಾಮಸುಂದರ ನಾಯರಿ ಮೊದಲಾದವರು ಉಪಸ್ಥಿತರಿದ್ದರು.

ಕೇಳಿದ್ದು
– ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದ ಅನಂತರ ದೀರ್ಘ‌ ಅವಧಿಯ ಯುಗ ಅಂದರೆ ನವಯುಗ!
-ಮಾ.31ಕ್ಕೆ ಪೂರ್ಣ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದಾರೆ ಯಾವ ವರ್ಷ ಎಂದೂ ಸ್ಪಷ್ಟಪಡಿಸಬೇಕು.
-ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಟೋಲ್‌ ತೆಗೆದುಕೊಳ್ಳಬೇಕು. ಕಷ್ಟದ ಅರಿವಾಗುತ್ತದೆ.
-ದಿನಕ್ಕೆ 25 ಲಕ್ಷ ರೂ. ಸಂಗ್ರಹವಾಗುವ ಕಾರಣ 2 ತಿಂಗಳ ಟೋಲ್‌ ಸಂಗ್ರಹವೇ ಫ್ಲೈಓವರ್‌ ಕೆಲಸ ಮುಗಿಸಲು ಸಾಕು.
-ಪ್ರಾಧಿಕಾರದ ಎಂಜಿನಿಯರ್‌ ಮನೆ ಮೇಲೆ ಐಟಿ ರೈಡ್‌, ಗುತ್ತಿಗೆದಾರ ಕಂಪೆನಿಗಳ ಮೇಲೆ ಕೇಸ್‌ ಆಗಬೇಕು.

ಡಿ.31ಕ್ಕೆ ವಿಶ್ವಾದ್ಯಂತ ಪ್ರತಿಭಟನೆ!
ಫ್ಲೈಓವರ್‌ನಿಂದಾಗಿ ಕುಂದಾಪುರದ ಸೌಂದರ್ಯ ಹಾಳಾಗಿದೆ ಎಂದು ಆರೋಪಿಸಿ ಐ ಹೇಟ್‌ ನವಯುಗ ಅಭಿಯಾನ ನಡೆಯಲಿದ್ದು ಡಿ. 31ರಂದು ವಿಶ್ವಾದ್ಯಂತ ಇರುವ ಕುಂದಾಪುರದವರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಬೇಕು  – ರಾಜೇಶ್‌ ಕಾವೇರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ