ಕರಾವಳಿ: ನಿರಂತರ ಮಳೆ; ಕಡಲು ಪ್ರಕ್ಷುಬ್ಧ

Team Udayavani, Jun 12, 2019, 9:40 AM IST

ಮಂಗಳೂರು/ಉಡುಪಿ: ಯುಭಾರ ಕುಸಿತ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಮಳೆಯಾಗಿದೆ. ಇನ್ನು, ಕಡಲು ಕೂಡ ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರ ಹೆಚ್ಚಾಗಿತ್ತು.

ಮಂಗಳೂರು ನಗರದಲ್ಲಿ ಬೆಳಗ್ಗಿನಿಂದಲೇ ಬಿಟ್ಟು ಬಿಟ್ಟು ಮಳೆಯಾಗಿತ್ತು. ಪುತ್ತೂರು, ಕಾರ್ಕಳ, ಬೆಳ್ತಂಗಡಿ, ಪುಂಜಾಲಕಟ್ಟೆ, ಮೂಲ್ಕಿ, ವಿಟ್ಲ, ಅನಂತಾಡಿ, ಸುರತ್ಕಲ್‌, ಕಡಬ, ಉಪ್ಪಿನಂಗಡಿ, ವೇಣೂರು, ನಾರಾವಿ, ಗುರುವಾಯನಕೆರೆ, ಧರ್ಮಸ್ಥಳ, ಕನ್ಯಾನ, ಬಿ.ಸಿ.ರೋಡು, ಮಾಣಿ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಉಡುಪಿ, ಮಣಿಪಾಲ, ಕುಂದಾಪುರ, ಕೋಟೇಶ್ವರ, ಕೊಲ್ಲೂರು, ಸಿದ್ದಾಪುರ, ಕಾರ್ಕಳ, ಬ್ರಹ್ಮಾವರದಲ್ಲಿ ನಿರಂತರ ಸಾಧಾರಣ ಮಳೆಯಾದರೆ, ಪಡುಬಿದ್ರಿ ಯಲ್ಲಿ ಸಿಡಿಲಿನಿಂದ ಕೂಡಿದ ಮಳೆ, ತೆಕ್ಕಟ್ಟೆ, ಬೆಳ್ಮಣ್ಣಿನಲ್ಲಿ ಉತ್ತಮ ಮಳೆಯಾಯಿತು.

ಪಣಂಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ ಕಡತ ತೀರಗಳಲ್ಲಿ ಅಲೆಗಳ ಅಬ್ಬರ ಜಾಸ್ತಿ ಇದ್ದು, ಪ್ರವಾಸಿಗರನ್ನು ನೀರಿನಲ್ಲಿ ಆಡವಾಡಲು ಬಿಡುತ್ತಿಲ್ಲ. ಲೈಫ್‌ಗಾರ್ಡ್‌ಗಳನ್ನು ಕೂಡ ನಿಗಾ ಇಡಲು ಸೂಚಿಸಲಾಗಿದೆ.

ಉಳ್ಳಾಲ: ನಿರಂತರ ಗಾಳಿ-ಮಳೆಗೆ ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ ಯಾಗಿದೆ. 40ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. 50ಕ್ಕೂ ಮರಗಳು ಸಮುದ್ರ ಪಾಲಾಗಿವೆ.

ಸೋಮೇಶ್ವರ ಉಚ್ಚಿಲದ ಬೀಚ್‌
ರೋಡ್‌ನ‌ ಫೆರಿಬೈಲು ಮತ್ತು ಬಟ್ಟಪ್ಪಾಡಿ ಬಳಿ ಹೆಚ್ಚು ಹಾನಿಗೀಡಾ ಗಿದ್ದು ವಿಶ್ವನಾಥ್‌, ನಾಗೇಶ್‌ ಅವರ ಮನೆಗಳು ಹೆಚ್ಚು ಹಾನಿಯಾಗಿದ್ದು, 6ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಿಲೇರಿಯಾ ನಗರದಲ್ಲಿ ಮೈಮುನಾ ಇಕ್ಬಾಲ್‌ ಮತ್ತು ಝೊಹರಾ ಅವರ ಮನೆಗೆ ಹಾನಿಯಾಗಿದೆ. ಉಳ್ಳಾಲ ಬೀಚ್‌ ಸಮೀಪದ ಸಮ್ಮರ್‌ ಸ್ಯಾಂಡ್‌ ರೆಸಾರ್ಟ್‌ನ ಶೌಚಾಲಯ ಕಟ್ಟಡ, ಭಾಗಶಃ ಹಾನಿಯಾಗಿದೆ.
ಕಿಲೇರಿಯಾ ಮಸೀದಿ, ಕೈಕೊದಲ್ಲಿ ರುವ ರಿಫಾಯಿಯ ಮಸೀದಿ ಕಟ್ಟಡಕ್ಕೂ ಅಲೆಗಳು ಬಡಿಯುತ್ತಿವೆ.

ಕಡಲ್ಕೊರೆತ ಪ್ರದೇಶಗಳಿಗೆ ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌, ಉಳ್ಳಾಲ ನಗರಸಭೆ ಪೌರಾಯುಕ್ತ ಶ್ರೀನಿವಾಸ ಮೂರ್ತಿ ತಹಶೀಲ್ದಾರ್‌ ಗುರುಪ್ರಸಾದ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಚಿವ-ಸಂಸದರ ಭೇಟಿ
ಉಳ್ಳಾಲ ಮತ್ತು ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಯು.ಟಿ. ಖಾದರ್‌ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲು ಜೂ. 12ರಂದು ಭೇಟಿ ನೀಡಲಿದ್ದಾರೆ.

ರಾಜಕಾಲುವೆಗೆ ಕಡಲ ನೀರು
ಸುರತ್ಕಲ್‌: ಸಮುದ್ರ ಉಕ್ಕೇರುತ್ತಿರುವು ದರಿಂದ ಉಪ್ಪುನೀರು ಚಿತ್ರಾಪುರ ರಾಜಕಾಲುವೆಯ ಮೂಲಕ ನಗರದತ್ತ ಬರಲಾರಂಭಿಸಿದೆ. ಈ ಬಾರಿಯೂ ತಗ್ಗು ಪ್ರದೇಶದಲ್ಲಿ ನೆರೆ ಭೀತಿ ಉಂಟಾಗಿದೆ.

ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ. ಮಳೆ ನೀರು ರಭಸದಿಂದ ಹರಿದರೆ ಕಡಲ ನೀರು ಇತ್ತ ಹರಿಯುವ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಸ್ಥಳೀಯ ಕಾರ್ಪೊರೇಟರ್‌ ಗಣೇಶ್‌ ಹೊಸಬೆಟ್ಟು.

ಕಾಸರಗೋಡು: ಎಲ್ಲೋ ಅಲರ್ಟ್‌
ಕಾಸರಗೋಡು: ಮುಂಗಾರು ಪ್ರವೇಶಿಸಿರುವಂತೆ ಭಾರೀ ಮಳೆ ಸಹಿತ ಚಂಡಮಾರುತ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆ ಸಹಿತ ರಾಜ್ಯದ ಆರು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮೂರು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಮುಸೋಡಿಯಲ್ಲಿ ಕಡಲ್ಕೊರೆತ
ಉಪ್ಪಳ ಮುಸೋಡಿಯಲ್ಲಿ ಕಡಲ್ಕೊರೆತ ಆರಂಭಗೊಂಡಿದ್ದು, ಅಪಾಯದ ಭೀತಿಯಲ್ಲಿರುವ ನೆಫೀಸ ಮತ್ತು ಮೊಹಮ್ಮದ್‌ ಕುಟುಂಬದ ಸದಸ್ಯರನ್ನು ಸ್ಥಳಾಂತರಿಸಲಾಗಿದೆ. ಅಬ್ಟಾಸ್‌, ಬೀಫಾತಿಮ್ಮ, ಮೂಸಾ, ಆಸ್ಯಮ್ಮ, ಮಾಹಿನ್‌, ಮರಿಯುಮ್ಮ ಮೊದಲಾದವರ ಮನೆಗಳು ಅಪಾಯದಂಚಿನಲ್ಲಿವೆ. ಇಸ್ಮಾಯಿಲ್‌ ಹಾಗೂ ಖೈರುನ್ನೀಸ ಅವರ ತಲಾ 200 ಗಾಳಿ ಮರಗಳು, ಅಹಮ್ಮದ್‌ ಕುಂಞಿ ಅವರ 12ರಷ್ಟು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.

ಮಲ್ಪೆ ಬೀಚ್‌ ಕೊರೆತ
ಮಲ್ಪೆ: ಬೆಳಗ್ಗೆ ಶಾಂತವಾಗಿದ್ದ ಸಮುದ್ರ ಮಧ್ಯಾಹ್ನದ ಬಳಿಕ ಅಬ್ಬರಿಸತೊಡಗಿದೆ. ಮಲ್ಪೆ ಬೀಚ್‌, ಕಿದಿಯೂರು ಪಡುಕರೆ, ಕಡೆಕಾರು ಪಡುಕರೆ, ತೊಟ್ಟಂ ಪ್ರದೇಶದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಬೀಚ್‌ ಭಾಗದಲ್ಲಿಸಮುದ್ರ ಮುಂದೆ ಬಂದಿದ್ದು ಉತ್ತರ ಭಾಗದಲ್ಲಿ ತಡೆಗೋಡೆ ಹಾಕಿರುವ ಜಾಗದಲ್ಲಿ ಸುಮಾರು 25 ಅಡಿಗಳಷ್ಟು ಕೊರೆತ ಕಾಣಿಸಿಕೊಂಡಿದೆ. ನೆರಳಿಗಾಗಿ ಬೀಚ್‌ನಲ್ಲಿ ಅಳವಡಿಸಿರುವ ಎಲ್ಲ ಹಟ್‌ಗಳನ್ನು ತೆರವುಗೊಳಿಸಲಾಗಿದೆ.

ಕಾಪು: ಕಡಲ್ಕೊರೆತ ಭೀತಿ
ಕಾಪು: ಕಾಪು, ಪೊಲಿಪು, ಕೈಪುಂಜಾಲು, ಮೂಳೂರು, ಉಚ್ಚಿಲ ಸೇರಿದಂತೆ ಕರಾವಳಿಯುದ್ದಕ್ಕೂ ಕಡಲ ತೆರೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಮುಂಗಾರು ಮಳೆಗೆ ಮೊದಲೇ ಕಡಲ್ಕೊರೆತದ ಲಕ್ಷಣ ಗಳು ಕಾಣಿಸಿಕೊಂಡಿವೆ.

ಜಿ.ಪಂ. ಆಧ್ಯಕ್ಷ, ತಹಶೀಲ್ದಾರ್‌ ಭೇಟಿ
ಕಟಪಾಡಿ: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಪಡುಕರೆ ಪರಿಸರದಲ್ಲಿ ಕಡಲಿನ ಅಬ್ಬರವು ಮಂಗಳವಾರವೂ ಮುಂದುವರಿದಿದೆ. ತೆರೆಗಳು ಮಲ್ಪೆ ಸಂಪರ್ಕದ ಪ್ರಮುಖ ರಸ್ತೆಯನ್ನೂ ದಾಟಿದ್ದು, ರಸ್ತೆಯ ಮೇಲೆಲ್ಲಾ ಮರಳು ತುಂಬಿದೆ. ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ಸ್ಥಳಕ್ಕಾಗಮಿಸಿದ್ದಾರೆ.

ಕಡಲ್ಕೊರೆತ: ತತ್‌ಕ್ಷಣ ಕ್ರಮಕ್ಕೆ ಸಿಎಂ ಸೂಚನೆ
ಮಂಗಳೂರು: ಕಡಲ್ಕೊರೆತ ತಡೆ ಹಾಗೂ ಸಂತ್ರಸ್ತರಿಗೆ ಪರಿಹಾರ ಕಾರ್ಯ ವನ್ನು ತತ್‌ಕ್ಷಣದಿಂದಲೇ ಕೈಗೊಳ್ಳು ವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರನ್ನು ಮಂಗಳವಾರ ಭೇಟಿಯಾಗಿ ಉಳ್ಳಾಲ ಹಾಗೂ ಇತರೆಡೆ ಉಂಟಾ ಗಿರುವ ಕಡಲ್ಕೊರೆತದ ಬಗ್ಗೆ ವಿವರಿಸಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿ ದ್ದೇನೆ.

ಮುಖ್ಯಮಂತ್ರಿಯವರು ಕಡಲ್ಕೊರತ ತಡೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ, ಆಸ್ತಿ ನಷ್ಟಕ್ಕೆ ಪರಿಹಾರ ನೀಡುವಂತೆ ಹಾಗೂ ಪರಿಸ್ಥಿತಿ ಕುರಿತು ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ