ಮಕ್ಕಳ ಸಮಸ್ಯೆ ಗುರುತಿಸಲ್ಪಟ್ಟರೆ ಪರಿಹಾರ ಸಾಧ್ಯ

ಮಕ್ಕಳ ಸಹಾಯವಾಣಿ ದಿನಾಚರಣೆ ಉದ್ಘಾಟಿಸಿ ಸಿಇಒ ಸಿಂಧೂ ರೂಪೇಶ್‌

Team Udayavani, May 18, 2019, 6:05 AM IST

ಉಡುಪಿ: ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಮಕ್ಕಳಿಗೆ ಸಂಬಂಧಿ ಸಿದ ಸಮಸ್ಯೆಗಳು ಪರಿಹಾರವಾಗಬೇಕಾದರೆ ಮೊದಲು ಆ ಸಮಸ್ಯೆಗಳನ್ನು ಗುರುತಿಸಿ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದು ಅತೀ ಮುಖ್ಯ ಎಂದು ಜಿ.ಪಂ. ಸಿಇಒ ಸಿಂಧೂ ರೂಪೇಶ್‌ ಹೇಳಿದರು.

ಮೇ 17ರಂದು ಉಡುಪಿ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದಲ್ಲಿ ಜರಗಿದ ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೂರುದಾರರಲ್ಲಿ ವಿಶ್ವಾಸ ಮೂಡಿಸಿ
ಮಕ್ಕಳ ಮೇಲಿನ ವಿವಿಧ ರೀತಿಯ ದೌರ್ಜನ್ಯಗಳು ಒಂದೆಡೆಯಾದರೆ ಅಂಕ ಗಳಿಕೆಗಾಗಿ ಒತ್ತಡ, ಅದರಿಂದ ಖನ್ನತೆ ಉಂಟಾಗುವುದು ಇನ್ನೊಂದು ರೀತಿಯ ಸಮಸ್ಯೆ. ಇದನ್ನು ನೋಡುವಾಗ ಸಮಾಜ ತಪ್ಪು ದಾರಿಯಲ್ಲಿ ಹೋಗುತ್ತಿದೆ, ನಾವು ತಪ್ಪು ಮಾಡುತ್ತಿ ದ್ದೇವೆ ಎಂಬ ಭಾವನೆ ಮೂಡುತ್ತದೆ. ಮಕ್ಕಳು ಎದುರಿಸುತ್ತಿರುವ ತೊಂದರೆಗಳು ಪರಿಹಾರ ವಾಗಬೇಕಾದರೆ ಸಮಸ್ಯೆಯ ಕುರಿತಾದ ಮಾಹಿತಿ ಮಕ್ಕಳ ಸಹಾಯವಾಣಿಗೆ (1098) ತಲುಪಬೇಕು. ಸಹಾಯವಾಣಿಗೆ ಬಂದ ಕರೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಸಮಸ್ಯೆ ಪರಿಹರಿಸಿ ಕೊಟ್ಟು ದೂರುದಾರರಲ್ಲಿ ವಿಶ್ವಾಸ ಮೂಡಿಸು ವುದು ಸಹಾಯವಾಣಿಯವರ ಜವಾಬ್ದಾರಿ ಎಂದು ಸಿಂಧೂ ರೂಪೇಶ್‌ ಹೇಳಿದರು.

ಪ್ರೀತಿಯ ಕೊರತೆ, ಬಡತನ
ಉಡುಪಿ ಮಕ್ಕಳ ನ್ಯಾಯ ಮಂಡಳಿಯ ಅಧ್ಯಕ್ಷೆ ಲಾವಣ್ಯಾ ಅವರು ಮಾತನಾಡಿ “ಬಾಲಾಪರಾಧಿಗಳಾಗಿರುವ (ಕಾನೂನು ಸಂಘರ್ಷಕ್ಕೊಳಗಾದವರು) ಮಕ್ಕಳ ಪೈಕಿ ಹೆಚ್ಚಿನವರು ಬಡತನ ರೇಖೆಯೊಳಗಿರುವ ಕುಟುಂಬದ ಮಕ್ಕಳು. ಅಲ್ಲದೆ ಹೆತ್ತವರ ಪ್ರೀತಿಯಿಂದ ವಂಚಿತರಾದವರು ಇದ್ದಾರೆ. ಹೆತ್ತವರ ಒತ್ತಾಯಕ್ಕೆ ಮಕ್ಕಳು ಕೆಲಸ, ಭಿಕ್ಷಾಟನೆಯಲ್ಲಿ ಕೂಡ ತೊಡಗಿಕೊಂಡಿರುವುದು ಗಮನಕ್ಕೆ ಬಂದಿದೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌ ಅವರು ಮಾತನಾಡಿ, ಉಡುಪಿಯಲ್ಲಿ 2019ರ ಮಾರ್ಚ್‌ನಲ್ಲಿ ಮಕ್ಕಳ ಸಹಾಯವಾಣಿ ಆರಂಭಗೊಂಡಿದ್ದು ಇದುವರೆಗೆ 11 ಪ್ರಕರಣಗಳು ದಾಖಲಾಗಿವೆ. ಹಿಂದೆ ಚೈಲ್ಡ್‌ಲೈನ್‌ಗೆ (1098) ಕರೆ ಮಾಡಿದರೆ ಆ ಕರೆ ಬೆಂಗಳೂರು, ಮಂಗಳೂರಿಗೆ ಹೋಗಿ ಅನಂತರ ಅವರು ಉಡುಪಿಗೆ ಸಂಪರ್ಕ ನೀಡುತ್ತಿದ್ದರು. ಆದರೆ ಈಗ ಕರೆಗಳು ನೇರವಾಗಿ ಉಡುಪಿಗೆ ಬರುತ್ತವೆ. ಕ್ಷಿಪ್ರವಾಗಿ ಸ್ಪಂದಿಸಲು ಸಾಧ್ಯವಾಗುತ್ತಿದೆ. ಮಾಹಿತಿ ನೀಡಿದವರ ಹೆಸರನ್ನು ಕೂಡ ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್‌ ಪಿ. ಪುರ್ಟಾಡೊ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಓಂ ಪ್ರಕಾಶ್‌ ಕಟ್ಟಿàಮನಿ ಉಪಸ್ಥಿತರಿದ್ದರು.

ಚೈಲ್ಡ್‌ಲೈನ್‌ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಅರವಿಂದ ಕಾರ್ಯಕ್ರಮ ನಿರ್ವಹಿಸಿದರು. ರಾಮಾಂಜಿ ಮತ್ತು ತಂಡದಿಂದ ಮಕ್ಕಳ ರಕ್ಷಣೆ ಜಾಗೃತಿ ಕುರಿತು ಬೀದಿನಾಟಕ ಪ್ರದರ್ಶನಗೊಂಡಿತು.

ಉಡುಪಿಯಲ್ಲಿ
ಅತ್ಯಧಿಕ ಪ್ರಕರಣ
ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ಅವರು ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಶಿಕ್ಷಣದ ಪ್ರಮಾಣ, ಜಾಗೃತಿ ಹೆಚ್ಚು. ಹಾಗಾಗಿ ಒಂದು ವೇಳೆ ದೌರ್ಜನ್ಯಗಳು ನಡೆದರೂ ಕೂಡ ಆ ಬಗ್ಗೆ ದೂರುಗಳು ದಾಖಲಾಗುತ್ತಿವೆ. 1,000 ಘಟನೆಗಳಲ್ಲಿ 600 ಘಟನೆಗಳ ಬಗ್ಗೆ ಪ್ರಕರಣಗಳು ದಾಖಲಾಗುತ್ತವೆ. ಆದರೆ ಇದರಲ್ಲಿ ಶಿಕ್ಷೆಯ ಪ್ರಮಾಣ ಶೇ.16 ಮಾತ್ರ. ಇದಕ್ಕೆ ಸೂಕ್ತ ಸಾಕ್ಷಿಗಳ ಕೊರತೆ ಕಾರಣ. ಮಕ್ಕಳ ರಕ್ಷಣೆ ಬಗ್ಗೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.

ವರ್ಷದಲ್ಲಿ 203 ಪ್ರಕರಣ
ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ 2018ರಲ್ಲಿ ಒಟ್ಟು 203 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 72 ಪೋಕೊÕà ಪ್ರಕರಣಗಳು. 2019ರಲ್ಲಿ ನಾಲ್ಕು ತಿಂಗಳಲ್ಲಿ 92 ಪ್ರಕರಣಗಳು ದಾಖಲಾಗಿವೆ.

ಏನಿದು ಚೈಲ್ಡ್‌ ಲೈನ್‌ 1098?
ಕಳೆದು ಹೋದ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಓಡಿ ಹೋದ ಮಕ್ಕಳು, ವೈದ್ಯಕೀಯ ನೆರವು ಅಗತ್ಯವಿರುವ ಮಕ್ಕಳು, ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಎಲ್ಲ ಮಕ್ಕಳ ನೆರವಿಗಾಗಿ 1098 ಸಹಾಯವಾಣಿ ಇದೆ. ಇದು ದಿನದ 24 ಗಂಟೆಗಳ ಕಾಲ ಕೂಡ ಕಾರ್ಯನಿರ್ವಹಿಸುತ್ತದೆ. ಚೈಲ್ಡ್‌ಲೈನ್‌ ಯೋಜನೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಹಾಗೂ ರಾಜ್ಯ ಸರಕಾರಗಳು, ಸರಕಾರೇತರ ಸಂಸ್ಥೆಗಳು, ಬೆಂಬಲಿತ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. 1098 ಸಂಖ್ಯೆಗೆ ಮಕ್ಕಳು ಅಥವಾ ಕಾಳಜಿಯುಳ್ಳ ವಯಸ್ಕರು ಕರೆ ಮಾಡಿದಾಗ…
– ಚೈಲ್ಡ್‌ಲೈನ್‌ ಕೇಂದ್ರಗಳಿಗೆ ಸಂಪರ್ಕಿಸುತ್ತದೆ.
– ಚೈಲ್ಡ್‌ಲೈನ್‌ ತಂಡವು 60 ನಿಮಿಷದೊಳಗೆ ಮಗುವಿನ ನೆರವಿಗೆ ಧಾವಿಸುತ್ತದೆ.
– ಮಗುವಿಗೆ ಪುನರ್ವಸತಿ ಕಲ್ಪಿಸುತ್ತದೆ ಮತ್ತು ಸತತವಾಗಿ ಅನುಸರಣೆ ಮಾಡುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ