ಮರಣೋತ್ತರ ಪರೀಕ್ಷಾ  ವರದಿ ಬಂದಿಲ್ಲ : ಎಸ್‌ಪಿ

Team Udayavani, Jul 28, 2018, 10:14 AM IST

ಉಡುಪಿ: ಶೀರೂರು ಶ್ರೀಗಳ ಅಸ್ವಾಭಾವಿಕ ಸಾವಿನ ತನಿಖೆ ಚುರುಕುಗೊಂಡಿದೆ ಆದರೂ ಮರಣೋತ್ತರ ಪರೀಕ್ಷೆಯ ವರದಿ ಮಾತ್ರ ಇನ್ನೂ ಪೊಲೀಸರ ಕೈ ಸೇರಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಹಲವರ ವಿಚಾರಣೆಯ ಸರಣಿ ಶುಕ್ರವಾರವೂ ಮುಂದುವರಿದಿದೆ. “ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಇದುವರೆಗೆ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿಲ್ಲ’ ಎಂದು ಉಡುಪಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಈಗಾಗಲೇ ಪತ್ತೆಯಾಗಿರುವ ಸಿಸಿಟಿವಿ ಡಿವಿಆರ್‌ ಮಾಹಿತಿ ಹಾಗೂ ತನಿಖೆಯ ಇತರ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸೋಮವಾರದ ವೇಳೆಗೆ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

“ಶೀರೂರು ಶ್ರೀಗಳ ದೇಹದಲ್ಲಿ ಶಂಕಿತ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಇದು ಆಹಾರದ ವಿಷವೋ (ಫ‌ುಡ್‌ ಪಾಯ್ಸನ್‌) ಅಥವಾ ಬೇರೆ ರೀತಿಯಧ್ದೋ ಎಂಬುದು ಪೊಲೀಸ್‌ ತನಿಖೆ  (ಪೋಸ್ಟ್‌ಮಾರ್ಟಂ, ಎಫ್ಎಸ್‌ಎಲ್‌)ಯಿಂದಷ್ಟೇ ತಿಳಿಯಬೇಕಿದೆ’ ಎಂಬುದಾಗಿ ಅಸ್ತಂಗತರಾದ ದಿನ ಮಣಿಪಾಲ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ ಮರಣೋತ್ತರ ಪರೀಕ್ಷೆ ಮತ್ತು ಎಫ್ಎಸ್‌ಎಲ್‌(ವಿಧಿವಿಜ್ಞಾನ ಪ್ರಯೋಗಾಲಯ) ಪರೀಕ್ಷೆಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.

“ಕೊಲೆ ದೂರು ಬೇಡವೆಂದರು’
ತನಿಖೆ ಚುರುಕಿನಿಂದ ನಡೆಯುತ್ತಿರುವುದು ಗೊತ್ತಾಗಿದೆ. ಕೇವಲ ಸಿಆರ್‌ಪಿಸಿ (ದಂಡ ಪ್ರಕ್ರಿಯಾ ಸಂಹಿತೆ) ಪ್ರಕಾರ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ (ಭಾರತೀಯ ದಂಡಸಂಹಿತೆ) ಪ್ರಕಾರ ಪ್ರಕರಣ ದಾಖಲಿಸಿಲ್ಲ. ಕೊಲೆ ಪ್ರಕರಣ ದಾಖಲಿಸಬೇಕೆಂದು ಎಸ್‌ಪಿಯವರನ್ನು ಕೇಳಿದಾಗ ಮರಣೋತ್ತರ ವರದಿ ಬಂದ ಅನಂತರ ಅದಕ್ಕೆ ಪೂರಕವಾಗಿ ವರದಿ ಬಂದರೆ ಕೊಲೆ ಪ್ರಕರಣ ಸಹಜವಾಗಿ ದಾಖಲಾಗುತ್ತದೆ ಎಂದು ಹೇಳಿದ್ದಾರೆ ಎಂದು ಶೀರೂರು ಶ್ರೀಗಳ ಪರ ನ್ಯಾಯವಾದಿಗಳಾಗಿದ್ದ ರವಿಕಿರಣ್‌ ಮುಡೇಶ್ವರ ತಿಳಿಸಿದ್ದಾರೆ. ಮರಣೋತ್ತರ ವರದಿ ಲಭಿಸಲು ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರವಿಕಿರಣ್‌ ಅವರು, ಮಾದರಿಗಳ ಪರೀಕ್ಷೆಗೆ ವಿಳಂಬ ಮಾಡಿದರೆ ಅದರ ವಿಷತ್ವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ