ಹೋರಾಟಗಾರರಿಗೆ ಶಿವಾಜಿಯೇ ಸ್ಫೂರ್ತಿ

Team Udayavani, Feb 20, 2019, 1:00 AM IST

ಕಾರ್ಕಳ : ಶಿವಾಜಿ ಅನೇಕ ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆ. ತಾಯಿ ಜೀಜಾಬಾಯಿ ಬೋಧಿಸಿದ ಆದರ್ಶಗುಣ, ನೀತಿಪಾಠ, ರಾಮಾಯಣ, ಮಹಾಭಾರತ, ದೇಶಭಕ್ತಿ ಶಿವಾಜಿ ಮೇಲೆ ಅತೀವ ಪ್ರಭಾವ ಬೀರಿರುವುದರಿಂದಲೇ ಶಿವಾಜಿ ಅನುಕರಣೀಯ ವ್ಯಕ್ತಿತ್ವ ಹೊಂದಿದ್ದರು ಎಂದು ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್‌ ರಾವ್‌ ಹೇಳಿದರು.

ಅವರು ಫೆ. 19ರಂದು ಕನ್ನಡ ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌, ಕಾರ್ಕಳ ಕ್ಷತ್ರೀಯ ಮರಾಠ ಸಮಾಜದ ವತಿಯಿಂದ ತಾಲೂಕು ಪಂಚಾಯತ್‌ ಸಭಾಭವನದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿದರು.

ಶಿವಾಜಿ ಆಚರಣೆ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ  ಸೀಮಿತವಾಗದೇ ಶಾಲೆಗಳಲ್ಲಿ ಛತ್ರಪತಿ ಶಿವಾಜಿ ಹೊಂದಿದ್ದ ಆದರ್ಶ, ದೇಶಪ್ರೇಮವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನೌಕಾಪಡೆಯ ಪಿತಾಮಹ ಶಿವಾಜಿ
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಕೀರ್ತನ್‌ ಕುಮಾರ್‌ ಲಾಡ್‌ ಮಾತನಾಡಿ, ಶಿವಾಜಿಯ ವ್ಯಕ್ತಿತ್ವ ಎಂತಹುದು ಎನ್ನುವುದಕ್ಕೆ ಅವರ ಖ್ಯಾತಿಯೇ ಸಾಕ್ಷಿ. ಶಿವಾಜಿಯನ್ನು ಭಾರತೀಯ ನೌಕಾಪಡೆಯ  ಪಿತಾಮಹ ಎಂದು ಕರೆಯಲಾಗುತ್ತಿದ್ದು, ಅಂದಿನ ಕಾಲದಲ್ಲೇ ಯುದ್ಧತಂತ್ರಗಳನ್ನು ಬಹಳ ಚೆನ್ನಾಗಿ ಅಳವಡಿಸಿಕೊಂಡಿದ್ದರು ಎಂದರು.

ತನ್ನ ಸಾಮ್ರಾಜ್ಯದ ಸರ್ವರ ಏಳಿಗೆಯನ್ನು ಬಯಸಿದ್ದ  ಛತ್ರಪತಿ ಶಿವಾಜಿ  ಮುಸ್ಲಿಂ ಸಮುದಾಯದ ವಿರೋಧಿಯಾಗಿರಲಿಲ್ಲ ಎಂದು ಬಣ್ಣಿಸಿದರು.

ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಪುರಸಭಾ ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಶುಭಹಾರೈಸಿದರು.

ಅತಿಥಿಗಳ ಗೈರು
ಆಮಂತ್ರಣ ಪತ್ರಿಕೆಯಲ್ಲಿದ್ದ ಬಹುತೇಕ ಅತಿಥಿಗಳು ಕಾರ್ಯಕ್ರಮದಲ್ಲಿ ಗೈರಾಗಿದ್ದರು. ಪುರಸಭಾ ಸದಸ್ಯ ಶುಭದ ರಾವ್‌ ಸ್ವಾಗ ತಿಸಿ, ಶಶಿಧರ್‌ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಶಿವಾಜಿ ವೃತ್ತ
ನಗರದ ಬೈಪಾಸ್‌ ರಸ್ತೆಯ ಭವಾನಿ ಮಿಲ್‌ ಬಳಿ ಶಿವಾಜಿ ವೃತ್ತವನ್ನು ಸದ್ಯದಲ್ಲೆ  ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸರ್ವರ ಸಹಕಾರದೊಂದಿಗೆ ಅದೇ ಸ್ಥಳದಲ್ಲಿ ಶಿವಾಜಿ ಪುತ್ಥಳಿ ಸ್ಥಾಪಿಸುವ ಉದ್ದೇಶವಿದೆ.
-ಕೆ.ಬಿ. ಕೀರ್ತನ್‌ ಕುಮಾರ್‌ ಲಾಡ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ