ಸಿದ್ದಾಪುರ ಗ್ರಾಮ ಪಂಚಾಯತ್‌: ಪ್ರತಿ ವಾರ್ಡ್‌ನಲ್ಲೂ ನೀರಿನ ಸಮಸ್ಯೆ!

Team Udayavani, May 16, 2019, 6:10 AM IST

ಸಿದ್ದಾಪುರ: ಕುಡಿಯುವ ನೀರಿನ ಸಮಸ್ಯೆ ಕಳೆದ ವರ್ಷವೇ ಸಿದ್ದಾಪುರ ಗ್ರಾ.ಪಂ.ಗೆ ಸವಾಲಾಗಿ ಪರಿಣಮಿಸಿದರೂ ಈ ಬಾರಿ ಎಚ್ಚೆತ್ತುಕೊಳ್ಳದ್ದರಿಂದ ಪ್ರತಿ ವಾರ್ಡ್‌ಗಳಲ್ಲೂ ಬರ ಆವರಿಸಿದೆ.

ಸಿದ್ದಾಪುರ ಜನತಾ ಕಾಲೋನಿ, ವಾರಾಹಿ ರಸ್ತೆ, ತಾರೆಕೊಡ್ಲು, ಜನ್ಸಾಲೆ, ಬಡಾಬಾಳು, ಜಿಗಿನಗುಂಡಿ, ಕೂಡ್ಗಿ, ಸೋಣು, ಐರಬೈಲು ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ.

ಬಾಡಿಗೆ ರಿಕ್ಷಾದಲ್ಲಿ ನೀರು!
ಟ್ಯಾಂಕರ್‌ಗಳಲ್ಲಿ ಆಗೊಮ್ಮೆ ಈಗೊಮ್ಮೆ ನೀರು ಕೊಡುತ್ತಾರೆ. ಮೂರು ದಿನಗಳಿಗೊಮ್ಮೆ ಕೊಡುವ ನೀರು ಕೂಡ ಸರಿಯಾಗಿ ಕೊಡುತ್ತಿಲ್ಲ. ಆದ್ದರಿಂದ ಆಮ್ನಿ ಹಾಗೂ ಬಾಡಿಗೆ ರಿಕ್ಷಾ ಮೂಲಕ ಇಲ್ಲಿನ ಜನರು ನೀರು ತರುತ್ತಿದ್ದಾರೆ.

ಅಧಿಕಾರಿ ಪರಿಶೀಲನೆಗೆ ಬರುವಾಗ ಮಾತ್ರ ನೀರು ಬರುತ್ತದೆ. ಬಟ್ಟೆ ಬರೆ ತೊಳೆಯಲು ನೂರಾರು ರೂಪಾಯಿ ತೆತ್ತು ಬಾಡಿಗೆ ರಿಕ್ಷಾ ಮಾಡಿಕೊಂಡು ವಾರಾಹಿ ನದಿಗೆ ಹೋಗುತ್ತಿದ್ದೇವೆ ಎನ್ನುತ್ತಾರೆ ಜನತಾ ಕಾಲನಿ ನಿವಾಸಿಗಳು.

ನೀರಿನ ಮೂಲವಿದೆ
ಸಿದ್ದಾಪುರ ಗ್ರಾ. ಪಂ. ವ್ಯಾಪ್ತಿಯ ಸುತ್ತಲೂ ನೀರಿನ ಮೂಲ ಇದೆ. ಉಪಯೋಗಿಸಿ ಕೊಳ್ಳುವಲ್ಲಿ ಸ್ಥಳೀಯಾಡಳಿತ ಎಡವಿದೆ. ಒಂದು ಭಾಗದಲ್ಲಿ ವಾರಾಹಿ ನದಿ ಹಾಗೂ ಇನ್ನೂಂದು ಭಾಗದಲ್ಲಿ ಕುಬಾj ನದಿ ಹರಿಯುತ್ತಿದೆ. ಗ್ರಾಮದ ಮತ್ತೂಂದು ಭಾಗದಲ್ಲಿ ವಾರಾಹಿ ಕಾಲುವೆ ಹಾದು ಹೋಗಿದೆ.

ಗ್ರಾಮದ ಸುತ್ತಲೂ ನೀರಿನ ಮೂಲ ಇದ್ದರೂ ಕುಡಿಯುವ ನೀರಿಗೆ ಮಾತ್ರ ಬರ ಬಂದಿದೆ. ಬೋರ್‌ವೆಲ್‌ಗ‌ಳಲ್ಲಿ ನೀರಿನ ಮಟ್ಟ ಕಡಿಮೆಯಾದ ಪರಿಣಾಮ ನೀರು ಪೂರೈಕೆ ಸವಾಲಾಗಿ ಪರಿಣಮಿಸಿದೆ.

ಜನ್ಸಾಲೆ ವಾರ್ಡ್‌ನ ಬವಣೆ
ಈ ವರ್ಷವೂ ಜನ್ಸಾಲೆ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಇಲ್ಲಿಯ ನೀರಿನ ಸಮಸ್ಯೆ ನೀಗಿಸಲು ಕುಬಾj ನದಿಗೆ ಕಿಂಡಿ ಅಣೆಕಟ್ಟಿನ ಆವಶ್ಯಕತೆ ಇದೆ. ವಾರಾಹಿ ಕಾಲುವೆಯ ನೀರು ಸಿದ್ದಾಪುರ ಗ್ರಾಮದ ಐರಬೈಲು ಬಳಿ ಏತ ನೀರಾವರಿಯ ಮೂಲಕ ಸಿದ್ದಾಪುರ ಕೆಳಾಪೇಟೆಯ ಕಾಸಿಕೆರೆಗೆ ಹಾಯಿಸಿ, ಅಲ್ಲಿಂದ ನೈಸರ್ಗಿಕ ತೋಡುಗಳ ಮೂಲಕ ನೀರು ಹರಿಸಿದಲ್ಲಿ ಜನ್ಸಾಲೆ ವಾರ್ಡಿನ ಕುಡಿಯುವ ನೀರಿಗೆ ಪರಿಹಾರ ಕಾಣಬಹುದಾಗಿದೆ.

ಹೆಚ್ಚುತ್ತಿರುವ ಬೇಡಿಕೆ
ಸಿದ್ದಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೆಚ್ಚಿನ ಕಡೆಗಳಲ್ಲಿ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಬಾವಿ, ಬೋರ್‌ವೆಲ್‌ಗ‌ಳೂ ಬತ್ತಿರುವುದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ.

ಕಡ್ರಿ, ಕೊಯಿಕೋಡು, ದಕ್ಕೇರಬಾಳು ಮುಂತಾದ ಕಡೆ ನೀರಿನ ಸಮಸ್ಯೆ ತಾಂಡವ ವಾಡುತ್ತಿದೆ. ಇನ್ನು ಪಂಚಾಯತ್‌ ನೀರು ಹೊಟೇಲ್‌ಗ‌ಳಿಗೆ ಪೂರೈಕೆಯಾಗುತ್ತಿದೆ ಎನ್ನುವ ಆಪಾದನೆಯೂ ಇದೆ. ಹೆಚ್ಚಿನ ಕಡೆ ನೀರಿಗೆ ಮೀಟರ್‌ ಅಳವಡಿಸಿಲ್ಲ. ಇದರಿಂದ ನೀರಿನ ದುರುಪಯೋಗವೂ ಹೆಚ್ಚಿದೆ.

ವಾರ್ಡ್‌ನವರ ಬೇಡಿಕೆ
– ಸಮಯಕ್ಕೆ ಸರಿಯಾಗಿ ಟ್ಯಾಂಕರ್‌ ನೀರು ಬರಲಿ
– ನೀರು ಕೊಡುವಾಗ ತಾರತಮ್ಯ ಬೇಡ
– ಅಗತ್ಯ ಇರುವಷ್ಟು ನೀರು ನೀಡಬೇಕು
– ಅಂತರ್ಜಲ ವೃದ್ಧಿಗೆ ಗ್ರಾಮದ ಸುತ್ತಲಿನ ನದಿಗಳಿಗೆ ವೆಂಟೆಡ್‌ ಡ್ಯಾಂ ನಿರ್ಮಾಣ
– ವಾರಾಹಿ ನದಿಯ ನೀರು ಸಮರ್ಪಕ ಬಳಕೆಗೆ ಯೋಜನೆ ರೂಪಿಸಬೇಕು

ಸರಿಯಾಗಿ ನೀರು ಬಂದಿಲ್ಲ
ನಳ್ಳಿ ನೀರಿನ ಬಗ್ಗೆ ಪಂಚಾಯತ್‌ಗೆ ಮನವಿ ಮಾಡಿ ಸಾಕಾಗಿದೆ. ನಾವು ಆಮ್ನಿಯಲ್ಲಿ ನೀರು ತಂದು ಬಳಕ್ಕೆ ಮಾಡುತ್ತಿದ್ದೇವೆ. ಮೀಟರ್‌ ಅಳವಡಿಸಲು ಹಣ ಕೂಡ ನೀಡಿದ್ದೇವೆ. ಗ್ರಾ. ಪಂ. ಇಲ್ಲಿಯ ತನಕ ತಮಗೆ ಸರಿಯಾಗಿ ನೀರು ನೀಡಲಿಲ್ಲ.
-ಅಬ್ಟಾಸ್‌ ಸಾಹೇಬ್‌, ವಾರಾಹಿ ರಸ್ತೆ ಸಿದ್ದಾಪುರ

ಮನವಿ ಮಾಡಿದ್ದೇವೆ
ತಾರೆಕೊಡ್ಲು ಪ್ರದೇಶಗಳಲ್ಲಿ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರು ಬತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಪಂಚಾಯತ್‌ಗೆ ಕುಡಿಯಲು ನೀರು ಕೊಡುವಂತೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.
-ಸುಬ್ರಹ್ಮಣ್ಯ ತಾರೆಕೊಡ್ಲು, ಸ್ಥಳೀಯ ನಿವಾಸಿ

– ಸತೀಶ ಆಚಾರ್‌ ಉಳ್ಳೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ