ವೀರ ಯೋಧರನ್ನು ನೀಡಿದ ಸೋಮೇಶ್ವರ ಪೇಟೆ ಸ.ಹಿ. ಪ್ರಾ. ಶಾಲೆ

116 ವರ್ಷಗಳ ಇತಿಹಾಸದ ಜ್ಞಾನ ದೇಗುಲ

Team Udayavani, Nov 9, 2019, 5:39 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಹೆಬ್ರಿ : ದೇಶಕಾಯುವ ವೀರ ಯೋಧರನ್ನು ನೀಡಿದ ಹೆಬ್ರಿ ತಾಲೂಕಿನ ಮಲೆನಾಡ ತಪ್ಪಲಿನ ಪ್ರಕೃತಿ ರಮಣಿಯ ಪರಿಸರದಲ್ಲಿ ಕಳೆದ 116 ವರ್ಷಗಳಿಂದ ವಿದ್ಯಾದಾನ ಮಾಡುತ್ತಿರುವ ಸೋಮೇಶ್ವರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಂಡು ಮುನ್ನಡೆಯುತ್ತಿದೆ.

1903ರಲ್ಲಿ ಸೋಮೇಶ್ವರ ವೆಂಕಟರಮಣ ದೇವಸ್ಥಾನದಲ್ಲಿ ಆರಂಭವಾದ ಶಾಲೆ ಅನಂತರ ದಾನಿಗಳ ನೆರವು, ಸರಕಾರದ ಅನುದಾನದಿಂದ ಸ್ವಂತ ಕಟ್ಟಡ ಹೊಂದಿತು. ಆಡಳಿತ ಮೊಕ್ತೇಸರರಾಗಿದ್ದ ದಿ| ಆನಂದರಾಯ ಪೈ ಅವರ ವಿಶೇಷ ಮುತುವರ್ಜಿಯಲ್ಲಿ ಆಗಿನ ಮುಖ್ಯ ಶಿಕ್ಷಕರಾಗಿದ್ದ ದಿ| ಭೋಜ ಶೆಟ್ಟಿ ಅವರ ನೇತೃತ್ವದಲ್ಲಿ ಸರಕಾರದ ಅನುದಾನ ಹಾಗೂ ದಾನಿಗಳ ನೆರವಿನೊಂದಿಗೆ 2004ರಲ್ಲಿ ಶಾಲಾ ಕಟ್ಟಡ ನಿರ್ಮಾಣಗೊಂಡು ಶತಮಾನೋತ್ಸವ ಸಂಭ್ರಮ ಆಚರಿಸಿತ್ತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟೇಶ ಶೆಟ್ಟಿ ಶಾಲಾಭಿವೃದ್ಧಿಗೆ ಶ್ರಮಿಸಿದ್ದರು.

ದಾನಿಗಳ ನೆರವಿನಿಂದ ರಂಗಮಂದಿರ ನಿರ್ಮಾಣ
ಈ ಶಾಲೆಯಲ್ಲಿ ಕಲಿತು ದೇಶ ಕಾಯಲು ಹೋದ ವೀರ ಯೋಧ ಉದಯಪೂಜಾರಿ ಕಾರ್ಗಿಲ್‌ ಯುದ್ದದಲ್ಲಿ ವೀರ ಮರಣವನ್ನಪ್ಪಿದ್ದು 2000 ಇಸವಿಯಲ್ಲಿ ವೀರ ಯೋಧನ
ಸ್ಮರಣಾರ್ಥ ದಾನಿಗಳ ನೆರವಿನಿಂದ ಸ್ಮಾರಕ ರಂಗಮಂದಿರ ನಿರ್ಮಾಣವಾಯಿತು.

ಆರಂಭದಲ್ಲಿ 1ರಿಂದ 4ನೇ ತರಗತಿ ತನಕ ಇದ್ದ
ಈ ಶಾಲೆಗೆ ಕಾಸನ್‌ಮಕ್ಕಿ, ಬಡಾತಿಂಗಳೆ, ನಾಡಾ³ಲು, ಸೀತಾನದಿ, ಮೇಗದ್ದೆ ಸೋಮೇಶ್ವರ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಬರುತ್ತಿದ್ದು ಇಂದು ಈ ಶಾಲೆಯ ವ್ಯಾಪ್ತಿಯಲ್ಲಿ 5 ಸರಕಾರಿ ಶಾಲೆಗಳಿದ್ದು ಪ್ರಸ್ತುತ ಶಾಲಾ ಮುಖ್ಯ ಶಿಕ್ಷಕ ಪಿ. ಮುರಳೀಧರ್‌ ಭಟ್‌ ಸೇರಿದಂತೆ 4 ಜನ ಶಿಕ್ಷಕರಿದ್ದು 58 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಉತ್ತಮ ಪ್ರಕೃತಿಕ ಪರಿಸರದಲ್ಲಿ ಶಾಲಾ ಕೈತೋಟ ನಿರ್ಮಾಣದೊಂದಿಗೆ 7ನೇ ತರಗತಿ ತನಕ ಶಿಕ್ಷಣ ನೀಡಲಾಗುತ್ತಿದೆ.

ಮೂಲ ಸೌಕರ್ಯ
ಸುಮಾರು 2.68 ಎಕ್ರೆ ಜಾಗದಲ್ಲಿ ವಿಶಾಲವಾದ ಆಟದ ಮೈದಾನ, ತರಗತಿ ಕೋಣೆ, ಕಂಪ್ಯೂಟರ್‌ ಕೊಠಡಿ, ಶೌಚಾಲಯ, ನಲಿಕಲಿ ಕೊಠಡಿ, ಬಾವಿ ,ಅಕ್ಷರ ದಾಸೋಹ ಮೊದಲಾದ ಮೂಲ ಸೌಕರ್ಯದೊಂದಿಗೆ ದಾನಿಗಳ ನೆರವಿನೊಂದಿಗೆ ಪುನರುಜ್ಜೀವನ ಕಾರ್ಯ ಕೈಗೊಳ್ಳಲಾಗಿದ್ದು ಆದರೆ ಶಾಲೆಯಲ್ಲಿ ಕೇವಲ 5 ಕೊಠಡಿಗಳಿದ್ದು ಇನ್ನೂ ಎರಡು ಕೊಠಡಿಯ ಆವಶ್ಯಕತೆ ಇದೆ.ಸಾಧಕ ಹಳೆ ವಿದ್ಯಾರ್ಥಿಗಳು ಕಾರ್ಗಿಲ್‌ ಯುದ್ಧದಲ್ಲಿ ಹತನಾದ ವೀರ ಯೋಧ ದಿ| ಉದಯ ಪೂಜಾರಿ, ನಿವೃತ್ತ ಸೈನಿಕ ಭಾಸ್ಕರ್‌ ಪೂಜಾರಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀನಿವಾಸ ಶೆಟ್ಟಿ ಮಂಡ್ಯ, ಪ್ರಸಿದ್ಧ ವೈದ್ಯ ಹಾಸನದಲ್ಲಿ ಬೃಹತ್‌ ಆಸ್ಪತ್ರೆ ನಡೆಸುತ್ತಿರುವ ನಾಗರಾಜ್‌ ಹೆಬ್ಟಾರ್‌, ಉದ್ಯಮಿ ಪುರಂದರ್‌ ಹೇರಳೆ, ವಿಟuಲ್‌ ಭಕ್ತ ಸೇರಿದಂತೆ ನೂರಾರು ಸಾಧಕರು, ವೀರ ಯೋಧರನ್ನು ನಾಡಿಗೆ ನೀಡಿದ ಹೆಮ್ಮೆಈ ಶಾಲೆಗೆ ಇದೆ.

ಗಣ್ಯರ ಭೇಟಿ
ಮಹಾತ್ಮಾ ಗಾಂಧೀಯ ಮೊಮ್ಮಗ ತುಷಾರ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಮಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ, ದಿ| ಧರ್ಮಸಿಂಗ್‌, ರಾಮಚಂದ್ರ ಗೌಡ ಸೇರಿದಂತೆ ಹಲವು ಗಣ್ಯರು ಈ ಶಾಲೆಗೆ ಭೇಟಿ ನೀಡಿದ್ದರು.

1967ರಲ್ಲಿ ನಾನು ಈ ಶಾಲೆ ಹಳೆ ವಿದ್ಯಾರ್ಥಿಯಾಗಿದ್ದು ಬಾಲ್ಯದಲ್ಲಿ ಕಲಿತ ವಿಷಯಗಳು ಇನ್ನೂ ನೆನಪಿದೆ. ಅಷ್ಟು ಚೆನ್ನಾಗಿ ಮನದಟ್ಟು ಆಗುವಂತೆ ಪಾಠಮಾಡುತ್ತಿದ್ದ ಈ ಶಾಲೆಯಲ್ಲಿ 30 ವರ್ಷಗಳ ಕಾಲ ಸುದೀರ್ಘ‌ ಸೇವೆ ಸಲ್ಲಿಸಿದ ಹುಸೇನ್‌ ಸಾಹೇಬ್‌ ಅವರನ್ನು ಎಂದೂ ಮೆರೆಯುವಂತಿಲ್ಲ.
-ಪುರಂದರ ಹೇರಳೆ, ಉದ್ಯಮಿ

ಸರಕಾರದ ಅನುದಾನ, ದಾನಿಗಳ ನೆರವು ಹಾಗೂ ಗುಣಮಟ್ಟದ ಬೋಧಕ ವೃಂದದೊಂದಿಗೆ ಉತ್ತಮ ಶಿಕ್ಷಣ ನೀಡು ತ್ತಿರುವುದರ ಜತೆಗೆ ಖಾಸಗಿ ಆಂಗ್ಲ ಮಾಧ್ಯಮದ ಪ್ರಭಾವವಿದ್ದರೂ ಉತ್ತಮ ವಿದ್ಯಾರ್ಥಿಗಳನ್ನು ಹೊಂದಿ
ಶಾಲೆ ಶತಮಾನ ಕಂಡು ಮುನ್ನಡೆಯು ತ್ತಿದೆ. ಆದರೆ ನಮ್ಮಲ್ಲಿ 7ನೇ ತರಗತಿ ವರೆಗೆ 7 ಕೊಠಡಿಗಳ ಆವಶ್ಯಕತೆ ಇದ್ದು ಇನ್ನೂ ಎರಡು ಕೊಠಡಿಗಳ ಆವಶ್ಯಕತೆ ಇದೆ.
-ಪಿ. ಮುರಳೀಧರ್‌ ಭಟ್‌,
ಶಾಲಾ ಮುಖ್ಯ ಶಿಕ್ಷಕ

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ