ರಾಜ್ಯ ಮೀನುಗಾರಿಕಾ ಇಲಾಖೆ: ಅರ್ಧಕ್ಕೂ ಹೆಚ್ಚು ಹುದ್ದೆ ಖಾಲಿ
Team Udayavani, Jul 25, 2019, 7:48 AM IST
ಕುಂದಾಪುರ: ರಾಜ್ಯದಲ್ಲಿ 9.61 ಲಕ್ಷ ಮೀನುಗಾರರನ್ನು ಹಾಗೂ ವಾರ್ಷಿಕ ಕೋಟ್ಯಂತರ ರೂಪಾಯಿ ಮೀನು ಉತ್ಪಾದನೆ ಆದಾಯ ಹೊಂದಿರುವ ರಾಜ್ಯ ಮೀನುಗಾರಿಕಾ ಇಲಾಖೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿಯಾಗಿಯೇ ಇದೆ.
ರಾಜ್ಯದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖ ಕಸುಬಾಗಿರುವ ಮೀನುಗಾರಿಕೆಗೆ ಸಂಬಂಧಪಟ್ಟಿರುವ ರಾಜ್ಯ ಮೀನುಗಾರಿಕಾ ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬಂದಿ ಎಲ್ಲ ಒಟ್ಟು ಸೇರಿ 1,401 ಹುದ್ದೆಗಳಿವೆ. ಆದರೆ ಈವರೆಗೆ ಭರ್ತಿಯಾಗಿರುವುದು ಮಾತ್ರ ಕೇವಲ 683 ಹುದ್ದೆಗಳು. ಅಂದರೆ ಒಟ್ಟು 718 ಹುದ್ದೆಗಳು ಖಾಲಿಯಿವೆ.
ನಿರ್ದೇಶಕರೇ ಪ್ರಭಾರ
ಮೀನುಗಾರಿಕಾ ಇಲಾಖೆಯಲ್ಲಿ ರಾಜ್ಯ ಮೀನುಗಾರಿಕಾ ನಿರ್ದೇಶಕರ ಹುದ್ದೆಯೇ ಮೇಲ್ಸ್ತರದ ಹುದ್ದೆಯಾಗಿದ್ದು, ಅದುವೇ ಖಾಲಿಯಾಗಿದೆ. ಸದ್ಯ ಜಂಟಿ ನಿರ್ದೇಶಕರೇ ಪ್ರಭಾರ ನೆಲೆಯಲ್ಲಿ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ಕರಾವಳಿ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಎಲ್ಲ ಹುದ್ದೆಗಳು ಕೂಡ ಈಗಾಗಲೇ ಭರ್ತಿಯಾಗಿವೆ.
ಯಾವ್ಯಾವ ಹುದ್ದೆ ಖಾಲಿ
ಇಲಾಖೆಯಲ್ಲಿ ಒಬ್ಬ ಮೀನುಗಾರಿಕಾ ನಿರ್ದೇಶಕರಿರಬೇಕಿದ್ದು, ಅದು ಭರ್ತಿಯಾಗಿಲ್ಲ. ಇಬ್ಬರು ಜಂಟಿ ನಿರ್ದೇಶಕರ ಹುದ್ದೆ ಭರ್ತಿಯಾಗಿದೆ. ಒಬ್ಬ ಉಪನಿರ್ದೇಶಕರಿದ್ದಾರೆ. ಒಬ್ಬ ಹಿರಿಯ ಸಹಾಯಕ ನಿರ್ದೇಶಕ (ಆಡಳಿತ)ರಿದ್ದಾರೆ. ಇನ್ನು 33 ಸಹಾಯಕ ನಿರ್ದೇಶಕರ ಪೈಕಿ ಕೇವಲ 23ನ್ನು ಮಾತ್ರ ತುಂಬಲಾಗಿದ್ದು, ಬಾಕಿ 10 ಹುದ್ದೆ ಖಾಲಿಯಾಗಿವೆ. 8ರಲ್ಲಿ 8 ಪ್ರಾಂತೀಯ ಉಪ ನಿರ್ದೇಶಕರ ಹುದ್ದೆ ಭರ್ತಿಯಾಗಿದೆ. 26 ಜಿಲ್ಲಾ ಮೀನುಗಾರಿಕಾ ನಿರ್ದೇಶಕರ ಪೈಕಿ 12 ಮಾತ್ರ ಭರ್ತಿಯಾಗಿದ್ದು, 14 ಹುದ್ದೆ, 186 ತಾಲೂಕು ಮಟ್ಟದ ಅಧಿಕಾರಿಗಳ ಪೈಕಿ 144 ಭರ್ತಿಯಾಗಿದ್ದು, 42 ಹುದ್ದೆಗಳು ಖಾಲಿಯಿವೆ.
ತ್ವರಿತ ನಿರ್ವಹಣೆಗೆ ಅಡ್ಡಿ
ಜೀವದ ಹಂಗು ತೊರೆದು ಸಮುದ್ರದಲ್ಲಿ ಮೀನುಗಾರಿಕೆ ನಡೆಸುವವರಿಗೆ ತ್ವರಿತ, ಸಮರ್ಪಕವಾಗಿ ನೆರವಾಗುವ ನಿಟ್ಟಿನಲ್ಲಿ ಇಲಾಖೆಯಲ್ಲಿರುವ ಎಲ್ಲ ಹುದ್ದೆಗಳು ಭರ್ತಿಯಾಗುವುದು ಆವಶ್ಯಕವಾಗಿದ್ದು, ಆದರೆ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಇಲಾಖೆಯ ಅಡಿಯಲ್ಲಿ ಬರುವಂತಹ ಬೇರೆ ಬೇರೆ ರೀತಿಯ ಕೆಲಸಗಳು ವಿಳಂಬವಾಗುತ್ತಿವೆ. ಯೋಜನೆಗಳು ಸಮರ್ಪಕ ರೀತಿಯಲ್ಲಿ ಮಂಜೂರಾಗುತ್ತಿಲ್ಲ. ಇದಲ್ಲದೆ ಅನುದಾನ ಬಿಡುಗಡೆಯಲ್ಲಿಯೂ ವಿಳಂಬವಾಗುತ್ತಿದೆ. ಇದಲ್ಲದೆ ದಾಖಲೆ ಸಂಗ್ರಹ ಕಾರ್ಯವೂ ನಡೆಯುತ್ತಿಲ್ಲ.
– ಪ್ರಶಾಂತ್ ಪಾದೆ