ಶ್ಯಾಮಿಹಕ್ಲು ರಸ್ತೆಗೆ ಸ್ವಾಮಿಯೇ ಗತಿ !

Team Udayavani, Jul 17, 2019, 5:04 AM IST

ಕುಂದಾಪುರ: ಅಭಿವೃದ್ಧಿಯ ಮಟ್ಟಿಗೆ ಕತ್ತಲಕೂಪವೆಂದೇ ಭಾವಿಸಲ್ಪಟ್ಟ ಅಮಾಸೆಬೈಲಿನ ಕೆಳಸುಂಕದಿಂದ ಶ್ಯಾಮಿಹಕ್ಲು ತಲುಪಲು ಈ ಪರಿಸರದ ಜನರಿಗೆ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಅಭಿವೃದ್ಧಿಯ ಬೆಳದಿಂಗಳು ಯಾವಾಗ ಬರುವುದು ಎಂದು ಜನ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಪಂಚಾಯತ್‌ನಿಂದ ರಸ್ತೆ ಅಭಿವೃದ್ಧಿಯಾಗಿದ್ದರೂ ಶಾಶ್ವತ ಅಭಿವೃದ್ಧಿ ಆಗಬೇಕಿದೆ.

ಅಭಿವೃದ್ಧಿ

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮೂಲಕ ಗಿರಿಜನ ಕಲ್ಯಾಣ ನಿಧಿಯಿಂದ ರಸ್ತೆ ಯಾಗಿದೆ. ಎ.ಜಿ. ಕೊಡ್ಗಿಯವರ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ ಮೂಲಕ ಅಮಾಸೆಬೈಲು ಸಂಪೂರ್ಣ ಸೋಲಾರ್‌ ಗ್ರಾಮವಾಗಿದೆ. ಹವಾದಿಕಲ್ಲು ಹೊಳೆಯಿಂದ ಕೆಳಸುಂಕ ಶಾಲೆ, ಬಳ್ಮನೆ ಶಾಲೆವರೆಗೆ ಪ್ರಧಾನಮಂತ್ರಿ ಸಡಕ್‌ ಯೋಜನೆಯ ರಸ್ತೆಯಾಗಿದೆ. ವಿಧಾನ ಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರ ಮೂಲಕ ಕೆಳಸುಂಕದಲ್ಲಿ ಸೇತುವೆಗೆ ಅನುದಾನ ದೊರೆತಿದೆ.

ಗಿರಿಜನ ಕಾಲನಿ ರಸ್ತೆ

ಕೆಳಸುಂಕದಿಂದ ಶ್ಯಾಮಿಹಕ್ಲುವರೆಗೆ ಹೋಗುವ ರಸ್ತೆಗೆ ಕಾಂಕ್ರಿಟ್ ಆಗಿದೆ. ಆದರೆ ಸುಮಾರು 500 ಮೀ. ರಸ್ತೆ ಕಾಂಕ್ರೀಟ್ ಆಗಲು ಬಾಕಿಯಿದೆ. ಇದಕ್ಕೆ ಕಾರಣ ಅರಣ್ಯ ಇಲಾಖೆಯ ತಗಾದೆ. ಆಚೆ ಬದಿಯೂ ಕಾಂಕ್ರೀಟ್, ಈಚೆ ಬದಿಯೂ ಕಾಂಕ್ರೀಟ್ ರಸ್ತೆಯಿದ್ದರೂ ಇದನ್ನು ಸಂಪರ್ಕ ಬೆಸೆಯುವ 500 ಮೀ.ಗೆ ಅರಣ್ಯ ಇಲಾಖೆ ತನ್ನ ಹಾಡಿಯೊಳಗಿನ ಜಾಗ ಎಂದು ಆಕ್ಷೇಪವೆತ್ತಿತ್ತು. ಹಾಗಂತ ಜನಸಂಚಾರ, ವಾಹನ ಸಂಚಾರಕ್ಕೆ ಅಡ್ಡಿ ಮಾಡಿಲ್ಲ. ಅಭಿವೃದ್ಧಿ ಕಾಮಗಾರಿಗೆ ಮಾತ್ರ ಅಡ್ಡಗಾಲಿಟ್ಟಿತ್ತು. ಇದು ಈ ಭಾಗದ ಜನರಿಗೆ ತಲೆನೋವಾಗಿ ಪರಿಣಮಿಸಿತ್ತು. ಏಕೆಂದರೆ ಬೇಸಗೆಯಲ್ಲಿ ಧೂಳಿನಲ್ಲಿ ಸಂಚಾರ ಕಷ್ಟ, ಮಳೆಗಾಲದಲ್ಲಿ ಕೊಚ್ಚೆ ಕೆಸರಿನಿಂದಾಗಿ ಹೋಗುವುದು ಅಸಾಧ್ಯ. ವಾಹನಗಳ ಓಡಾಟ ಬಿಡಿ ನಡೆದಾಡುವುದೂ ದುಸ್ಸಾಧ್ಯ.

ಕಾಮಗಾರಿಗೆ ಅನುಮತಿ

ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಆಕ್ಷೇಪಣೆ ಇದ್ದ ಕಾರಣ ವಿಧಾನಪರಿಷತ್‌ ಅರ್ಜಿ ಸಮಿತಿಯಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರ ಮೂಲಕ ಈ ವಿಚಾರದ ಅರ್ಜಿ ಸಲ್ಲಿಸಲಾಗಿತ್ತು. ಜನರ ಓಡಾಟದ ರಸ್ತೆಗೆ ತೊಂದರೆ ಮಾಡಕೂಡದು ಎಂದು ಆದೇಶವಾದಂತೆ ಪಂಚಾಯತ್‌ ವತಿಯಿಂದ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಶಾಶ್ವತ ಕಾಮಗಾರಿಗಾಗಿ ಐಟಿಡಿಪಿ ಇಲಾಖೆಗೆ ಬರೆಯಲಾಗಿದೆ.

ಗಿರಿಜನ ಕಾಲನಿ

ಈ ಪ್ರದೇಶದಲ್ಲಿ ಸುಮಾರು 30ರಷ್ಟು ಮನೆಗಳಿವೆ. ವಿದ್ಯುತ್‌ ಸರಬರಾಜು ಇದ್ದರೂ ವೋಲೆrೕಜ್‌ ಇರುವುದಿಲ್ಲ ಎನ್ನುತ್ತಾರೆ ಶ್ಯಾಮಿಹಕ್ಲುವಿನ ನಿಡ್ಜಲ್ ಕಾಳು ನಾಯ್ಕ. ಬಚ್ಚು ನಾಯ್ಕ ಅವರ ಮನೆ ಬಳಿ ಒಂದು ಕಾಲುಸಂಕದ ಅಗತ್ಯವಿದೆ. ಇಲ್ಲದಿದ್ದರೆ ಮಳೆಗಾಲದಲ್ಲಿ ತ್ರಾಸದಾಯಕ ಬದುಕಾಗುತ್ತಿದೆ ಎನ್ನುತ್ತಾರೆ ರಾಘವೇಂದ್ರ ನಾಯ್ಕ. ದಲಿತರ ಸಮಸ್ಯೆಗಳಿಗೆ ಯಾರೂ ಸ್ಪಂದಿಸುವುದಿಲ್ಲ ಎನ್ನುವ ನೋವು ಇಲ್ಲಿನ ಜನರಿಗಿದೆ. ಜಡ್ಡಿನಗದ್ದೆಯಲ್ಲಿ 60 ಶೇ., ಗೋಳಿಕಾಡಿನಲ್ಲಿ 100 ಶೇ., ಶ್ಯಾಮಿಹಕ್ಲುವಿನಲ್ಲಿ 100 ಶೇ., ಕೆಳಸುಂಕದಲ್ಲಿ 75 ಶೇ., ಬೊಳ್ಮನೆಯಲ್ಲಿ 40 ಶೇ., ಗಿರಿಜನರಿದ್ದಾರೆ. ಹಾಗಿದ್ದರೂ ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳು ಮುಂದಾಗಿಲ್ಲ. ಹರ್ಲಕ್ಕು, ಶ್ಯಾಮೆಹಕ್ಲು, ಗೋಳಿಕಾರು ಎಂಬಲ್ಲಿ ಕಿಂಡಿ ಅಣೆಕಟ್ಟುಗಳಿದ್ದು ಕಾಲುವೆ ಆಗಬೇಕಿದೆ.

ನೆಟ್ವರ್ಕ್‌ ಇಲ್ಲ

ಅಮಾಸೆಬೈಲು, ಜಡ್ಡಿನಗದ್ದೆ, ಶ್ಯಾಮಿಹಕ್ಲು, ಹರ್ಲಕ್ಕು, ನಿಡ್ಜಲ್, ಕೆಳಸುಂಕ, ಬಳ್ಮನೆ, ಗೋಳಿಕಾಡು ಪ್ರದೇಶಗಳಲ್ಲಿ ಪ್ರಮುಖ ಬೇಡಿಕೆಯೆಂದರೆ ಮೊಬೈಲ್ ನೆಟ್ವರ್ಕ್‌. ದೂರವಾಣಿ ಕರೆಗೆಂದೇ ಮನೆಯಿಂದ 4 ಕಿ.ಮೀ. ದೂರ ಬರಬೇಕಾಗುತ್ತದೆ. ರಸ್ತೆ ಸಮಸ್ಯೆ ಶೀಘ್ರ ನಿವಾರಣೆೆಯಾಗಬೇಕು.
– ತಮ್ಮಯ ನಾಯ್ಕ , ಕೆಳಸುಂಕ
ಪ್ರಸ್ತಾವನೆ ಕಳುಹಿಸಿದೆ

ಪಂಚಾಯತ್‌ ಮೂಲಕ ತಾತ್ಕಾಲಿಕ ದುರಸ್ತಿ ಮಾಡಲಾಗಿದ್ದು ಬೇಸಗೆಯಲ್ಲಿ ಸಮಸ್ಯೆಯಿಲ್ಲ. ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಶಾಶ್ವತ ಅಭಿವೃದ್ಧಿ ಕಾಮಗಾರಿಗೆ ಅನುದಾನ ಮಂಜೂರಿಗೆ ಐಟಿಡಿಪಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಸಮಸ್ಯೆ ಬಗೆಹರಿಯಲಿದೆ.
-ಸತೀಶ್‌ ನಾಯ್ಕಪಿಡಿಒ, ಅಮಾಸೆಬೈಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ