ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು
Team Udayavani, Dec 5, 2022, 9:00 AM IST
ಪಡುಬಿದ್ರಿ: ಬೆಂಗಳೂರಿನಿಂದ ಡಿ. 3ರಂದು ಹೊರಟು ಬಂದಿದ್ದ ಬೆಂಗಳೂರು ನಿವಾಸಿ ಶ್ರೀನಿವಾಸ (69) ಅವರು ಹೆಜಮಾಡಿಯ ರಸ್ತೆ ಬದಿಯಲ್ಲಿ ತಿರುಗಾಡಿಕೊಂಡಿದ್ದವರನ್ನು ಸಾರ್ವಜನಿಕರ ಮಾಹಿತಿಯನ್ವಯ ಪೊಲೀಸರು ರಕ್ಷಿಸಿ ಅವರ ಮಗನಿಗೊಪ್ಪಿಸಿ ಮರಳಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
ಶನಿವಾರ ಮೆಜೆಸ್ಟಿಕ್‌ನಿಂದ ಕೆಎಸ್ಸಾರ್ಟಿಸಿ ಬಸ್ ಹತ್ತಿ ಉಡುಪಿಗೆ ರವಿವಾರ ಬೆಳಗ್ಗೆ ಬಂದಿದ್ದ ಶ್ರೀನಿವಾಸ್ ಅವರು ಉಡುಪಿಯಿಂದ ಹೆಜಮಾಡಿಗೆ ಬಂದು ರಸ್ತೆ ಬದಿ ತಿರುಗಾಡುತ್ತಿದ್ದರು. ಬಳಿಕ ಪೊಲೀಸರು ಶ್ರೀನಿವಾಸ ಅವರನ್ನು ಉಪಚರಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಅವರಿಗೆ ಸ್ವಲ್ಪ ಮರೆಗುಳಿತನವಿದ್ದು, ನಿರಂತರ ವಿಚಾರಣೆ ಬಳಿಕ ಅವರ ಮಗ ಶ್ರೀಪತಿ ಎನ್ನುವುದನ್ನು ತಿಳಿಸಿದ್ದಾರೆ.
ಮನೆಯ ದೂರವಾಣಿ ಸಂಖ್ಯೆಯನ್ನೂ ನೀಡಿದ್ದರು. ಇದೇ ವೇಳೆ ನಿನ್ನೆ ರಾತ್ರಿಯೇ ಮಗ ಶ್ರೀಪತಿಯು ತಂದೆ ಶ್ರೀನಿವಾಸರ ಮೊಬೈಲ್‌ಗೆ ಕರೆ ಮಾಡಿದಾಗ ಸರಿಯಾದ ಉತ್ತರ ಸಿಗದೇ ಬಳಿಯಲ್ಲಿದ್ದ ವ್ಯಕ್ತಿಗೆ ಮೊಬೈಲ್ ನೀಡಲು ಮಗ ಹೇಳಿದ್ದರು. ಆ ರೀತಿ ಮಗ ತನ್ನ ತಂದೆಯ ಬಳಿಯಲ್ಲಿದ್ದ ಪ್ರಯಾಣಿಕರ ಬಳಿ ವಿಚಾರಿಸಿದಾಗ ತಂದೆ ಉಡುಪಿಗೆ ಪ್ರಯಾಣಿಸುತ್ತಿದ್ದುದು ಗೊತ್ತಾಗಿದೆ. ಮಗ ಶ್ರೀಪತಿ ಶನಿವಾರ ರಾತ್ರಿಯೇ ಬೆಂಗಳೂರಿನಿಂದ ಬೈಕಿನಲ್ಲಿ ಹೊರಟು ಬಂದಿದ್ದು, ಉಡುಪಿಯಲ್ಲಿ ರವಿವಾರ ತನ್ನ ತಂದೆಗಾಗಿ ಹುಡುಕಾಟ ನಡೆಸುತ್ತಿದ್ದರು.
ಇತ್ತ ಶ್ರೀಪತಿ ಅವರ ಮೊಬೈಲ್ ಸಂಪರ್ಕ ಸಾಧಿಸಿದ ಪಡುಬಿದ್ರಿ ಪೊಲೀಸರು ಮಗನನ್ನು ಠಾಣೆಗೆ ಕರೆಯಿಸಿ ಅವರ ಜತೆ ಶ್ರೀನಿವಾಸ್ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಅವರ ಬಳಿ ಇದ್ದ ನಗದನ್ನು ಮಗನಿಗೆ ಹಿಂದಿರುಗಿಸಲಾಗಿದೆ. ಶ್ರೀನಿವಾಸ್ ಅವರ ಮೊಬೈಲ್ ಈ ಎಲ್ಲ ಘಟನೆಗಳ ನಡುವೆ ಕಳೆದು ಹೋಗಿತ್ತು. ಶ್ರೀನಿವಾಸ್ ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿಯಾಗಿದ್ದಾರೆ.