ಮೃತ ಮೀನುಗಾರರ ಕುಟುಂಬದಿಂದ ರಾಜ್ಯ ಸರಕಾರದ ಪರಿಹಾರ ಕರಾರಿಗೆ ಸಹಿ

Team Udayavani, May 15, 2019, 6:12 AM IST

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ಮುಳುಗಿ ನಾಪತ್ತೆಯಾಗಿರುವ 7 ಮಂದಿ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ತಲಾ 10 ಲಕ್ಷ ರೂ. ಪರಿಹಾರವನ್ನು ಪಡೆಯಲು ಅಗತ್ಯವಿರುವ ಕರಾರು ಪತ್ರಕ್ಕೆ ಚಂದ್ರಶೇಖರ್‌ ಕೋಟ್ಯಾನ್‌ ಮತ್ತು ದಾಮೋದರ ಸಾಲ್ಯಾನ್‌ ಅವರ ಮನೆಯವರು ಮಂಗಳವಾರ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಬಡಾನಿಡಿಯೂರಿನ ದಾಮೋದರ ಸಾಲ್ಯಾನ್‌ ಅವರ ಪತ್ನಿ ಮೋಹಿನಿ,
ತಂದೆ ಸುವರ್ಣ ತಿಂಗಳಾಯ ಮತ್ತು ತಾಯಿ ಸೀತಾ ಸಾಲ್ಯಾನ್‌ ಹಾಗೂ
ಚಂದ್ರಶೇಖರ್‌ ಕೋಟ್ಯಾನ್‌ ಅವರ ಪತ್ನಿ ಶ್ಯಾಮಲಾ ಮತ್ತು ತಾಯಿ ಅವರಿಂದ ಸಹಿ ಮಾಡಿಸಲಾಗಿದೆ. ಬೋಟ್‌ ಅವಶೇಷ ಪತ್ತೆಯಾಗಿರುವ ಬಗ್ಗೆ ಮಾಹಿತಿಯನ್ನು ಮನೆಯವರಿಗೆ ಇನ್ನೂ ತಿಳಿಸಿಲ್ಲ. ಹಾಗಾಗಿ ಕರಾರು ಪತ್ರವನ್ನು ಮನೆಗೆ ತರಿಸಿಕೊಂಡು ಸಹಿ ಮಾಡಿಸಿ ಇಲಾಖೆಗೆ ಒಪ್ಪಿಸಲಾಗಿದೆ.

ಇಂದು ರಾತ್ರಿ ನಿಯೋಗ ದಿಲ್ಲಿಗೆ
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಮೀನುಗಾರ ಕುಟುಂಬ ಸದಸ್ಯರೊಡನೆ ನಿಯೋಗವು ಮೇ 15ರಂದು ರಾತ್ರಿ ದಿಲ್ಲಿಗೆ ತೆರಳಲಿದೆ. ಮೇ 16 ಅಥವಾ 17ರಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಬೋಟ್‌ ಮುಳುಗಡೆ ವಿಚಾರದಲ್ಲಿ ಚರ್ಚೆ ನಡೆಸಿ ಮೀನುಗಾರರಿಗೆ ನ್ಯಾಯ ಒದಗಿಸಲಾಗುವುದು ಮತ್ತು ಕೇಂದ್ರ ಸರಕಾರದಿಂದ ಗರಿಷ್ಠ ಪ್ರಮಾಣದ ಪರಿಹಾರ ನೀಡುವಂತೆಯೂ ಆಗ್ರಹಿಸಲಾಗುವುದು ಎಂದು ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ತಿಳಿಸಿದ್ದಾರೆ.

ಸಹೋದರ ಆತ್ಮಹತ್ಯೆಗೆ ಯತ್ನ, ಗಂಭೀರ
ನಾಪತ್ತೆಯಾಗಿರುವ ಮೀನುಗಾರ ಭಟ್ಕಳದ ರಮೇಶ್‌ ಅವರ ಸಹೋದರ ಚಂದ್ರಶೇಖರ (30) ಅವರು ಬೋಟ್‌ ಮುಳುಗಿದೆ ಎಂದು ತಿಳಿದಾಗ ಮನನೊಂದು ವಿಷ ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು 3ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದರು. ಮನೆಯವರಿಗೆ ವಿಷಯ ತಿಳಿಯದ ಕಾರಣ ಜಾಂಡೀಸ್‌ ಆಗಿದೆ ಎಂದು ಔಷಧ ನೀಡಲಾಗುತ್ತಿತ್ತು. ಸೋಮವಾರ ಮತ್ತೆ ಚಿಕಿತ್ಸೆಗೆಂದು ಹೋಗುವಾಗ ಚಂದ್ರಶೇಖರ ಸಹೋದರ ಮತ್ತು ಸ್ನೇಹಿತರಲ್ಲಿ ವಿಷ ಸೇವಿಸಿರುವ ವಿಷಯನ್ನು ತಿಳಿಸಿದರು. ತತ್‌ಕ್ಷಣ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಯಿತು.

ಮೂಗು ಮತ್ತು ಹೊಟ್ಟೆಯಲ್ಲಿ ರಕ್ತಸ್ರಾವವಾಗುತ್ತಿದ್ದು ಆಂಗಾಗಗಳು ನಿಷ್ಕ್ರಿಯವಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಭಟ್ಕಳದ ಶನಿಯಾರ ಮೊಗೇರ ಅವರ 7 ಮಂದಿ ಮಕ್ಕಳ ಪೈಕಿ ರಮೇಶ ಅವರು ಡಿ. 13ರಂದು ಮಲ್ಪೆ ಬಡಾನಿಡಿಯೂರು ನಿವಾಸಿ ಚಂದ್ರಶೇಖರ ಕೋಟ್ಯಾನ್‌ ಅವರ ಸುವರ್ಣ ತ್ರಿಭುಜ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದು ಬಳಿಕ ಬೋಟ್‌ ಸಹಿತ ನಾಪತ್ತೆಯಾಗಿದ್ದರು. ಈ ವಿಷಯ ತಿಳಿದಾಗಿನಿಂದ ಅವರ ಸಹೋದರ ಚಂದ್ರಶೇಖರ ಖನ್ನತೆಗೆ ಒಳಗಾಗಿದ್ದರು. ಕೆಲವು ದಿನಗಳ ಹಿಂದೆ ಬೋಟ್‌ ಮುಳುಗಿದೆ ಎಂಬ ವಿಚಾರ ಖಚಿತವಾದಾಗ ಮತ್ತಷ್ಟು ಖನ್ನತೆಗೆ ಜಾರಿದ ಅವರು ವಿಷ ಸೇವನೆ ಮಾಡಿದ್ದರು. ಚಂದ್ರಶೇಖರ ಅವಿವಾಹಿತರಾಗಿದ್ದಾರೆ. ಓರ್ವ ಪುತ್ರ ಸಮುದ್ರದಲ್ಲಿ ನಾಪತ್ತೆಯಾಗಿರುವುದಲ್ಲದೆ ಇನ್ನೋರ್ವ ಪುತ್ರ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿರುವುದರಿಂದ ಅವರ ವಯೋವೃದ್ಧ ಹೆತ್ತವರು ಮತ್ತು ಕುಟುಂಬಿಕರು ಪ್ರತಿದಿನ ಕಣ್ಣೀರಿಡುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ