ಚಾರ ಹಂದಿಕಲ್ಲಿನಲ್ಲಿ ಗ್ರಾಮಸ್ಥರೇ ಭಗೀರಥರು

10 ವರ್ಷಗಳಿಂದ ಗ್ರಾಮಸ್ಥರಿಂದ ತಾತ್ಕಾಲಿಕ ಅಣೆಕಟ್ಟು ನಿರ್ಮಾಣ

Team Udayavani, May 20, 2019, 6:00 AM IST

ತಾತ್ಕಾಲಿಕ ಅಣೆಕಟ್ಟು ನಿರ್ಮಾಣದಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು.

ಹೆಬ್ರಿ: ಇಲ್ಲಿಗೆ ಸಮೀಪ ಚಾರ ಗ್ರಾಮದ ಹಂದಿಕಲ್ಲು ಸೀತಾನದಿಗೆ ಕಳೆದ 10 ವರ್ಷಗಳಿಂದ ಈ ಭಾಗದ ರೈತರು ಮರಳು ಚೀಲಗಳನ್ನು ಹಾಕಿ ತಾತ್ಕಾಲಿಕ ಅಣೆಕಟ್ಟನ್ನು ನಿರ್ಮಿಸಿ ನೀರಿನ ಅಭಾವ ನೀಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

10 ವರ್ಷಗಳಿಂದ ನಿರಂತರ ಪ್ರಯತ್ನ
ಬೇಸಗೆಯ ನೀರಿನ ಅಭಾವ ನೀಗಿಸಲು ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಎಳ್ಳಮಾವಾಸ್ಯೆ ಮುಗಿ ಯುತ್ತಿದ್ದಂತೆ ಈ ಭಾಗದ ರೈತರು, ಗ್ರಾಮಸ್ಥರು, ವಿವೇಕಾನಂದ ವೇದಿಕೆಯ ಸದಸ್ಯರು, ಜೋಮ್ಲ ಅಭಿವೃದ್ಧಿ ಸಮಿತಿಯವರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿ ಸುಮಾರು 2,500ಕ್ಕೂ ಅಧಿಕ ಪ್ಲಾಸ್ಟಿಕ್‌ ಚೀಲಗಳಲ್ಲಿ ಮರಳನ್ನು ಸಂಗ್ರಹಿಸಿ ನೀರಿನ ಹರಿವಿಗೆ ಅಡ್ಡವಾಗಿ ತಾತ್ಕಾಲಿಕ ಅಣೆಕಟ್ಟನ್ನು ನಿರ್ಮಿಸಿದ್ದಾರೆ.

ಅಂತರ್ಜಲ ವೃದ್ಧಿ
ತಾತ್ಕಾಲಿಕ ಕಿಂಡಿ ಅಣೆಕಟ್ಟಿನ ನಿರ್ಮಾಣದಿಂದ ಬೃಹತ್‌ ಹೊಂಡ ಗುಂಡಿಗಳಲ್ಲಿ ನೀರಿನ ಸಂಗ್ರಹಣೆ ಅಧಿಕವಾಗಿ ಪಕ್ಕದ ಕೆರೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತಿದೆ. ಇದರಿಂದ ಸಮೀಪದ 50 ಎಕರೆಗೂ ಅಧಿಕ ಕೃಷಿ ಭೂಮಿಗೆ ಅನುಕೂಲವಾಗುತ್ತಿದೆ. ಅಲ್ಲದೆ ಈ ಬಾರಿ ಬೀಸಿಲಿನ ತಾಪ ಹೆಚ್ಚಾಗಿದ್ದು ಎಲ್ಲೆಡೆ ಕೆರೆ ಬಾವಿಗಳು ಬತ್ತಿ ಹೋಗಿದ್ದು ಸುತ್ತಮುತ್ತಲಿನ ಜನರು ಇದೇ ನೀರನ್ನು ಅವಲಂಬಿಸಿದ್ದಾರೆ.

ಕಿಂಡಿ ಅಣೆಕಟ್ಟು ಅಗತ್ಯ
ಈಗಾಗಲೇ ಚಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದರ ಶಾಶ‌Ìತ ಪರಿಹಾರಕ್ಕೆ ಹಂದಿಕಲ್ಲಿನ ಸೀತಾನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವುದು ಅಗತ್ಯವಾಗಿದೆ.

ಮೂರು ಗ್ರಾಮಗಳಿಗೆ ಅನುಕೂಲ
ಸುಸಜ್ಜಿತ ಕಿಂಡಿ ಅಣೆಕಟ್ಟು ನಿರ್ಮಾಣ ಈ ಭಾಗದ ರೈತರ ಬಹುಕಾಲದ ಬೇಡಿಕೆಯಾಗಿದ್ದು ಇದರಿಂದ ನಾಲ್ಕೂರು, ಚಾರ ಹಾಗೂ 38ನೇ ಕಳೂ¤ರು ಗ್ರಾಮಗಳಿಗೆ ಅನುಕೂಲವಾಗಲಿದೆ. ಕಳೆದ ಹತ್ತು ವರ್ಷಗಳಿಂದ ರೈತರು ಇತರ ಸಂಘಟನೆಗಳೊಂದಿಗೆ ನೀರಿನ ಅಂತರ್ಜಲ ಹೆಚ್ಚಿಸಲು ಶ್ರಮಿಸುತ್ತಿದ್ದು ಇದು ವರೆಗೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯ ಪಂಚಾಯತ್‌ಗೆ ಬೇಡಿಕೆ ಮನವಿ ಸಲ್ಲಿಸಿದರೂ ಇತ್ತ ಗಮನ ಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗಳಿಗೆ ಮನವಿ
ಶಾಶ್ವತ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವಂತೆ ಈಗಾಗಲೇ ಶಾಸಕರು ಮತ್ತು ಮುಖ್ಯಮಂತ್ರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

ಜನಪ್ರತಿನಿಧಿಗಳು ಗಮನಹರಿಸಿ
ಈ ಪ್ರದೇಶದಲ್ಲಿ 2000 ಇಸವಿಯಲ್ಲಿ ವಿದ್ಯುತ್‌ ಸ್ಥಾವರ ಘಟಕ ಮಾಡುವ ಕುರಿತು ಸರ್ವೆ ಕಾರ್ಯ ಆಗಿತ್ತು. ಬಳಿಕ ಆ ವಿಷಯ ಏನಾಯ್ತು ಎಂದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ವಿದ್ಯುತ್‌ ಸ್ಥಾವರ ಆದರೆ ಉಡುಪಿ ಜಿಲ್ಲೆಗೆ ನಿರಂತರ ವಿದ್ಯುತ್‌ನೊಂದಿಗೆ ಸುತ್ತಮುತ್ತಲಿನ ಗ್ರಾಮಗಳ ನೀರಿನ ಸಮಸ್ಯೆ ದೂರವಾಗಲಿದೆ. ಆದ್ದರಿಂದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಬಹುದಿನಗಳ ಬೇಡಿಕೆ ಹಾಗೂ ತೀರ ಅಗತ್ಯವಾದ ಕಿಂಡಿಅಣೆಕಟ್ಟನ್ನು ನಿರ್ಮಿಸಿ ಶಾಶ‌Ìತ ನೀರಿನ ಸಮಸ್ಯೆ ಹೋಗಲಾಡಿಸಿ.
-ಮಿಥುನ್‌ ಶೆಟ್ಟಿ ಚಾರ, ಪ್ರಗತಿಪರ ಕೃಷಿಕ

ಮುಂದಿನ ಬಜೆಟ್‌ನಲ್ಲಿ ಅನುದಾನ ಸಾಧ್ಯತೆ
ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಈ ಬಾರಿ ಯಾವುದೇ ಕಿಂಡಿ ಅಣೆಕಟ್ಟಿಗೆ ಅನುದಾನ ಬಂದಿಲ್ಲ. ಮುಂದಿನ ಬಜೆಟ್‌ನಲ್ಲಿ ಸಾಧ್ಯತೆ ಇದ್ದು ಶಾಶ‌Ìತ ನೀರಿನ ಸಮಸ್ಯೆಗೆ ಚಾರ ಹಂದಿಕಲ್ಲಿನ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಿ. ಸುನಿಲ್‌ ಕುಮಾರ್‌,
ಶಾಸಕರು ಕಾರ್ಕಳ

– ಹೆಬ್ರಿ ಉದಯಕುಮಾರ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ